ಬಡವರ ಹಸಿವು ನೀಗಿಸಲು ಆಹಾರ ಭದ್ರತೆ ಕಾಯ್ದೆ
ಕ.ಪ್ರ.ವಾರ್ತೆ ಅರಕಲಗೂಡು ಅ.17
ಸಮಾಜದಲ್ಲಿನ ಕಡುಬಡವರ ಹಸಿವು ನಿವಾರಿಸುವಲ್ಲಿ ಸರ್ಕಾರ ಅರ್ಹ ಕುಟುಂಬ ವರ್ಗದವರಿಗೆ ನ್ಯಾಯ ಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯಗಳನ್ನು ನೀಡುವುದಕ್ಕಾಗಿ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದೆ. ಅಂಥ ಕುಟುಂಬದವರು ಈ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ತಾಲೂಕಿನ ಕೊಳ್ಳಂಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೊಮ್ಮೇಗೌಡ ಹೇಳಿದರು.
ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಆಹಾರ ಇಲಾಖೆ, ವಾರ್ತಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ವಿಕಲಚೇತನರ ಅಭಿವೃದ್ಧಿ ಸಂಘ, ಸಿಎಂಎಸ್‌ಎಸ್ ಸೇವಾ ಸಂಸ್ಥೆ, ಹೊಳಲಗೂಡು ಗ್ರಾಪಂ ಆಶ್ರಯದಲ್ಲಿ ಕೊಳ್ಳಂಗಿ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಏರ್ಪಡಿಸಿದ್ದ ಆಹಾರ ಭದ್ರತೆ ಕಾಯ್ದೆ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡವರಿಗಾಗಿ ಈ ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತಂದಿರುವುದರಿಂದ ಇದನ್ನು ಪ್ರಾಮಾಣಿಕವಾಗಿ ಸದುಪಯೋಗಪಡಿಸಿಕೊಂಡು ಈ ಕಾಯ್ದೆ ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದರು.
ಉಪತಹಸೀಲ್ದಾರ್ ಚಂದ್ರಾಯಿ ಮಾತನಾಡಿ, ಸರ್ಕಾರ ಈ ಕಾಯ್ದೆಯಡಿಯಲ್ಲಿ ಕೆಲವೊಂದು ಮಾನದಂಡಗಳ ಮೂಲಕ ಅರ್ಹ ಫಲಾನುಭವಿಗಳಿಗೆ ಪಡಿತರ ಮೂಲಕ ಆಹಾರ ಧಾನ್ಯಗಳನ್ನು ನಿಗದಿತ ದರ ಹಾಗೂ ಪ್ರಮಾಣದಲ್ಲಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೈ.ಎಸ್.ಮಲ್ಲೇಗೌಡ ಅವರು, ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ವಿವರಿಸಿದರು. ಹೊಳಲಗೂಡು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಅರುಣಕುಮಾರ್ ಅವರು, ಸರ್ಕಾರ ಅನೇಕ ಯೋಜನೆಗಳನ್ನು ಪಂಚಾಯ್ತಿ ಮೂಲಕ ಗ್ರಾಮಸ್ಥರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅರ್ಹ ಫಲಾನುಭವಿಗಳು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಹೊಳಲುಗೂಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಪರಮೇಶ್, ಎಚ್.ಕೆ ಶಿವಸ್ವಾಮಿ ಮತ್ತಿತರರು ಇದ್ದರು. ಕ್ಷೇತ್ರ ಪ್ರಚಾರ ಸಹಾಯಕ ಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಸುನಂದ ಸ್ವಾಗತಿಸಿದರು. ಅಂತಾರಾಷ್ಟ್ರೀಯ ಕ್ರೀಡಾಪಟು ಶಾಂತಕುಮಾರ್ ವಂದಿಸಿದರು.