ರೇಲ್ವೆ ಮೇಲ್ಸೇತುವೆ ನಿರ್ಮಿಸಲು ಒತ್ತಾಯ
ಹಾಸನ: ನಗರ ವ್ಯಾಪ್ತಿ ರಸ್ತೆಗಳಲ್ಲಿ ಗುಂಡಿಗಳಾಗಿದ್ದು, ಸಾರ್ವಜನಿಕರು ಓಡಾಡಲು ತೀವ್ರ ತೊಂದರೆಯಾಗಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ, ವರ್ಗಗಳ ಸಂಘಟನಾ ಸಮಿತಿ (ಕೆಪಿಎಸ್ಎಸ್) ದೂರಿದೆ.
ಹೊಸ ಬಸ್ ನಿಲ್ದಾಣಕ್ಕೆ ಹೋಗಲು ರೇಲ್ವೆ ಗೇಟ್ ಹಾಕಿದರೆ ಎಲ್ಲ ವಾಹನಗಳು ಎನ್.ಆರ್. ಸರ್ಕಲ್ನಿಂದ ರೇಲ್ವೆ ಗೇಟಿನವರೆಗೆ ತಡೆಯಾಗಿರುತ್ತದೆ. ಇದನ್ನು ಸರಿಪಡಿಸಬೇಕಾದರೆ ರೇಲ್ವೆ ಗೇಟಿನ ಮೇಲೆ ಮೇಲ್ಸೇತುವೆ ಆಗಬೇಕು ಎಂದು ಸಂಘದ ಹಂಗಾಮಿ ಜಿಲ್ಲಾಧ್ಯಕ್ಷ ಜೋಡಿಕೃಷ್ಣಾಪುರ ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ನಗರದ ಎಲ್ಲ ಬಡಾವಣೆಗಳಲ್ಲೂ ಟಾರ್ ರಸ್ತೆ ನಿರ್ಮಾಣವಾಗಬೇಕು. ಜಿಲ್ಲಾಧಿಕಾರಿ ಹೆಚ್ಚು ಜವಾಬ್ದಾರಿಯಿಂದ ನಗರ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಹಳೇ ಬಸ್ ನಿಲ್ದಾಣದಲ್ಲಿ ಸಿಟಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಎಸ್ಸಿ,ಎಸ್ಟಿ ಸಂಘದ ಪದಾಧಿಕಾರಿಗಳು ಠಾಣೆಗೆ ದೂರು ಕೊಡಲು ಹೋದಾಗ ಸಂಘಟನೆ ಪದಾಧಿಕಾರಿಗಳ ಜತೆ ಸರಿಯಾಗಿ ಸ್ಪಂದಿಸುವುದಿಲ್ಲ. ಜಿಲ್ಲಾ ಎಸ್ಪಿಯವರು ಈ ಬಗ್ಗೆ ಗಮನಹರಿಸಿ ಠಾಣೆ ಅಧಿಕಾರಿಗಳಿಗೆ ವಿಶೇಷವಾಗಿ ದಲಿತ ಸಂಘಟನೆ ಪದಾಧಿಕಾರಿಗಳೊಂದಿಗೆ ಸೂಕ್ತವಾಗಿ ಸ್ಪಂದಿಸುವಂತೆ ಸೂಚನೆ ನೀಡಬೇಕೆಂದು ಕೋರಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರನ್ನು ಮರು ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ. ವಾರದೊಳಗೆ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ ಡಿಸಿ ಕಚೇರಿ ಮುಂದೆ ಧರಣಿ ನಡೆಸಲಾಗವುದು ಎಂದು ಲಕ್ಷ್ಮಣ್ ಎಚ್ಚರಿಸಿದ್ದಾರೆ.
ಇಂದು ಮಹರ್ಷಿ ವಾಲ್ಮೀಕಿ ಜಯಂತಿ
ಹಾಸನ: ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಅ. 18ರಂದು ಬೆಳಗ್ಗೆ 11ಕ್ಕೆ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಾಜಿ ಪ್ರಧಾನಮಂತ್ರಿ ಹಾಗೂ ಸಂಸದ ಎಚ್.ಡಿ.ದೇವೇಗೌಡರ ಉಪಸ್ಥಿತಿಯಲ್ಲಿ ರಾಜ್ಯ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಮಹದೇವಪ್ಪ ಉದ್ಘಾಟಿಸುವರು. ಶಾಸಕ ಎಚ್.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಶಾಸಕ ಎಚ್.ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ, ಎ.ಮಂಜು, ಕೆ.ಎಂ.ಶಿವಲಿಂಗೇಗೌಡ, ವೈ.ಎನ್.ರುದ್ರೇಶಗೌಡ, ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪಟೇಲಶಿವರಾಂ, ಬಿ.ಬಿ.ಶಿವಪ್ಪ, ಮರಿತಿಬ್ಬೇಗೌಡ, ಗೋ. ಮಧುಸೂದನ್, ಜಿಪಂ ಅಧ್ಯಕ್ಷೆ ಡಿ.ಜಿ.ಅಂಬಿಕಾ ರಾಮಣ್ಣ, ನಗರಸಭೆ ಅಧ್ಯಕ್ಷತೆ ವಿದ್ಯಾ ಆನಂದ್, ಜಿಪಂ ಉಪಾಧ್ಯಕ್ಷ ಬಿಳಿ ಚೌಡಯ್ಯ, ತಾಪಂ ಅಧ್ಯಕ್ಷೆ ರತ್ನಮ್ಮ ಹನುಮೇಗೌಡ ಇತರರು ಭಾಗವಹಿಸುವರು.