ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಲಾರಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Srinivasa Murthy VN
Updated On : 18 Oct 2013, 12:46 pm

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಅ.17
ಹಿಂದಿನಿಂದ ವೇಗವಾಗಿ ಬಂದ ಲಾರಿ ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಪಟ್ಟಣ ಹೃದಯ ಭಾಗದ ಗಾಂಧಿ ವೃತ್ತದಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಮೃತ ಪಟ್ಟಿರುವಾತ ಪಟ್ಟಣದ ಕೋಟೆ ನಿವಾಸಿ ಆಲದಹಳ್ಳಿ ಮಂಜೇಗೌಡ (65) ಎಂದು ಗುರುತಿಸಲಾಗಿದ್ದು, ಈತ ವಿದ್ಯುತ್ ಇಲಾಖೆಯ ನಿವೃತ್ತ ನೌಕರ ಎನ್ನಲಾಗಿದೆ. ಬಸ್ ನಿಲ್ದಾಣದ ಕಡೆಯಿಂದ ಕೋಟೆಯಲ್ಲಿನ  ನಿವಾಸಕ್ಕೆ ತೆರಳಲು ಬೈಕ್‌ನಲ್ಲಿ ತೆರಳುತ್ತಿದ್ದ ಮಂಜೇಗೌಡ ಅವರಿಗೆ ಹಿಂದಿನಿಂದ ವೇಗವಾಗಿ ಬಂದ ಲಾರಿಯು ಬೈಕನ್ನು ಹಿಂದಿಕ್ಕುವ ಭರದಲ್ಲಿ ಬೈಕಿಗೆ ಗುದ್ದಿದ ಪರಿಣಾಮವಾಗಿ ಆಯತಪ್ಪಿ ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಲಾರಿಯ ಚಕ್ರ ಹರಿದ ಕಾರಣದಿಂದ ಮಂಜೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ನಡೆದ ಕೂಡಲೇ ಸ್ಥಳದಲ್ಲೇ ಇದ್ದ ನೂರಾರು ಜನರು ಓಡಿ ಬಂದ ಕೂಡಲೇ ಘಟನೆಯಿಂದ ಬೆದರಿದ ಲಾರಿ ಚಾಲಕ ವಾಹನವನ್ನು ನಿಲ್ಲಿಸದೇ, ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ಅಪಘಾತವು ನಡೆದಾಗ ಗಾಂಧಿ ವೃತ್ತದಲ್ಲಿಯೇ ಇದ್ದ ಪೊಲೀಸ್ ವಾಹನವು ಪರಾರಿಯಾದ ಲಾರಿಯನ್ನು ಕೂಡಲೇ ಬೆನ್ನತ್ತಿದೆ. ಘಟನೆ ನಡೆದ ಕೂಡಲೇ ವಿಷಯ ಕಾಳ್ಗಿಚ್ಚಿನಂತೆ ಹಬ್ಬಿ ಗಾಂಧಿ ಸರ್ಕಲ್ ಬಳಿ ಜನಸಾಗರವೇ ಸೇರಿತ್ತು. ವಿಷಯ ತಿಳಿದ  ಮಂಜೇಗೌಡನ ಕುಟುಂಬದವರು ಸ್ಥಳಕ್ಕೆ ಧಾವಿಸಿ ಬಂದು ಘಟನೆಯನ್ನು ಕಂಡು ದಂಗಾಗಿ ಮನೆಯವರ ರೋಧನ ಮುಗಿಲು ಮುಟ್ಟಿತ್ತು.
 ಸ್ಥಳಕ್ಕೆ ಧಾವಿಸಿದ ನಗರ ಠಾಣೆಯ ಎಸ್ಸೈ ಶಿವಕುಮಾರ್ ಪ್ರಕರಣ ದಾಖಲಿಸಿಕೊಂಡು ಶವದ ಮಹಜರ್ ನಡೆಸಿದರು. ಎಎಸ್ಪಿ ವಿನಾಯಕ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಾರಿಯಾದ ಲಾರಿಯ ಸಂಖ್ಯೆಯನ್ನು ನಾಗರೀಕರು ಪೊಲೀಸರಿಗೆ ನೀಡಿದ್ದಾರೆ.

ಜಿಲ್ಲಾ ನ್ಯಾಯಾಲಯ ಘಟಕದಲ್ಲಿ  ನಾನಾ ಹುದ್ದೆಗಳಿಗೆ ಅರ್ಜಿ
ಹಾಸನ: ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ 2 ಆದೇಶ ಜಾರಿಕಾರರು, ಮತ್ತು 5 ಸೇವಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 18 ರಂದು ಕಡೆಯ ದಿನವಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರ ಕಚೇರಿ ಪ್ರಕಟಣೆ ತಿಳಿಸಿದೆ.    
ಹೆಚ್ಚಿನ ಮಾಹಿತಿಗಾಗಿ ಹಾಸನದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಚೇರಿ ಅಥವಾ ಹಾಸನ ಜಿಲ್ಲೆಯ ಎಲ್ಲಾ ಅಧೀನ ನ್ಯಾಯಾಲಯಗಳ ಕಚೇರಿಗಳಲ್ಲಿ ಮತ್ತು ರಾಜ್ಯದ ಇತರೆ ಜಿಲ್ಲಾ ನ್ಯಾಯಾಧೀಶರ ಕಾರ್ಯಾಲಯದಲ್ಲಿ ಪಡೆಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement