ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸೈಫನ್ ಒಡೆದು ಮನೆಗಳಿಗೆ ನುಗ್ಗಿದ ನೀರು

Srinivasa Murthy VN
Updated On : 18 Oct 2013, 12:45 pm

ಅರಕಲಗೂಡು: ಹೇಮಾವತಿ ಬಲ ಮೇಲ್ದಂಡೆ ನಾಲೆಯ ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿಯ ಎರಡನೇ ಕಿಲೋಮೀಟರ್ ಬಳಿ ಸೈಫನ್‌ಗಳು ಒಡೆದು ಮನೆಗಳಿಗೆ ನೀರು ನುಗ್ಗಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಇಲ್ಲಿಗೆ ಸಮೀಪದ ಮುಂಡುಗೋಡು ಗ್ರಾಮದವರೆಗೆ ಕಾಮಗಾರಿ ಅಪೂರ್ಣವಾಗಿದೆ. ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಕೊಡಬೇಕೆಂಬ ಒತ್ತಡ ಕೇಳಿ ಬರುತ್ತಿತ್ತು. ಆದರೆ ಕೆಲವು ಕಿಡಿಗೇಡಿಗಳು ಬುಧವಾರ ರಾತ್ರಿ ಇಟಾಚಿ ಯಂತ್ರ ತಂದು ನಾಲೆಯಲ್ಲಿದ್ದ ಕೆಲ ಭಾಗದಲ್ಲಿ ಹೂಳು ತೆಗೆದು ಗೇಟುಗಳನ್ನು ತೆಗೆದಿರುವುದರಿಂದ ಇಲ್ಲಿಗೆ ಸಮೀಪದ ಕತ್ತಿಮಲ್ಲೇನಹಳ್ಳಿ ಗ್ರಾಮದ ಬಳಿಯಲ್ಲಿ ನಿರ್ಮಿಸಿರುವ ಸೈಫನ್ ಬಳಿಯಲ್ಲಿ ನೀರು ಮುಂದಕ್ಕೆ ಹರಿಯದೆ ಸೈಫನ್ ತೂತು ಬಿದ್ದು ನೀರು ಹರಿದಿದೆ.ಇದರಿಂದಾಗಿ ಸೈಫನ್ ಬಳಿಯಲ್ಲಿದ್ದ ಸುಮಾರು 8 ಮನೆಗಳು ನೀರಿನಿಂದ ಜಲಾವೃತಗೊಂಡು ಮನೆಗಳಿಗೆ ನೀರು ಹರಿಯಿತು. ಬುಧವಾರ ರಾತ್ರಿ ಸುಮಾರು ಸಂಜೆ 7 ಗಂಟೆಯಿಂದ ರಾತ್ರಿ ಸುಮಾರು 12 ಗಂಟೆಯವರೆಗೂ ಈ ಭಾಗದ ಜನರು ಭೀತಿ ವಾತಾವರಣದಲ್ಲೇ ಕಾಲ ಕಳೆಯಬೇಕಾಯಿತು.
ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ಗಮನಕ್ಕೆ ತಂದ ನಂತರ ನಾಲೆಯಲ್ಲಿ ನೀರು ಹರಿಯದಂತ ಗೇಟುಗಳನ್ನು ಹಾಕಿ ತಡೆಯಲಾಯಿತು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗೇಂದ್ರ ಪ್ರಸಾದ್ ತಿಳಿಸಿದರು.
ಗುರುವಾರ ಬೆಳಿಗ್ಗೆ ಘಟನೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹರಿಹಾಯ್ದರು. 2008ರಲ್ಲಿ ಆರಂಭಗೊಂಡ ಕಾಮಗಾರಿ ಆರು ತಿಂಗಳ ಅವಧಿಯಲ್ಲಿ ಮುಗಿಯಬೇಕಿತ್ತು. ಸುಮಾರು 59 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಬೇಕಿದ್ದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ನಾಲೆಯಲ್ಲಿ ನೀರು ಹರಿದಿದ್ದರಿಂದ ಹಾಗೂ ಸದರಿ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿರುವುದರಿಂದ ಈ ಅವಘಡ ಸಂಭವಿಸಿದೆ ಎಂದು ದೂರಿದರು.
ಬುಧವಾರ ನಾಲೆಯಲ್ಲಿ ಅತ್ಯಲ್ಪ ಪ್ರಮಾಣದ ನೀರು ಹರಿದಿದೆ. ನಾಲೆಯ ಸಾಮರ್ಥ್ಯದಂತೆ 20 ಕ್ಯುಸೆಕ್ ನೀರು ಹರಿಯಬಿಟ್ಟಿದ್ದರೆ ಸುತ್ತಲಿನ ಮನೆಗಳು ಸೇರಿದಂತೆ ಜಮೀನುಗಳಿಗೆ ಅಪಾರ ನೀರು ಹರಿದು ಅಪಾರ ಹಾನಿ ಸಂಭವಿಸುತ್ತಿತ್ತು ಎಂದು ಆರ್.ಬಿ.ಸಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹೇಳಿದರು.
ಈ ಸಂಬಂಧ ಕಿಡಿಗೇಡಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮಕ್ಕೆ ಪೊಲೀಸರಿಗೆ ದೂರು ಸಲ್ಲಿಸಲಾಗುವುದು ಮತ್ತು ಆಗಿರುವ ಘಟನೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.
ಕರವೇ ಆರೋಪ: ಬುಧವಾರದ ಘಟನೆಗೆ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಾಜಿಮು ಹಾಗೂ ತಾಲೂಕು ಘಟಕದ ಅಜಿತ್‌ಕುಮಾರ್ ದೂರಿದ್ದಾರೆ. ಘಟನೆ ಸ್ಥಳಕ್ಕೆ, ಜಿಪಂ ಸದಸ್ಯ ವಿ.ಎ.ನಂಜುಂಡಸ್ವಾಮಿ, ತಾಲೂಕು ಕರವೇ ಅಧ್ಯಕ್ಷ ಭಾಸ್ಕರ್ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement