ಹಬ್ಬದಲ್ಲಿ ತಮಟೆ ಜೋರಾಗಿ ಹೊಡೆಯದ ಕಾರಣಕ್ಕೆ ಹಲ್ಲೆ
ಕ.ಪ್ರ.ವಾರ್ತೆ ಹಾಸನ ಅ.17
ಊರ ಹಬ್ಬದಲ್ಲಿ ತಮಟೆಯನ್ನು ಜೋರಾಗಿ ಹೊಡೆಯಲಿಲ್ಲ ಎಂಬ ಕಾರಣಕ್ಕೆ ದಲಿತ ಕೋಡಿಗಯ್ಯ ಎಂಬಾತನ ಮೇಲೆ ನಡೆದ ಹಲ್ಲೆ ಹಾಗೂ ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಸಮತಾ ಸೈನಿಕ ದಳ, ದಲಿತ ಸಾಹಿತ್ಯ ಪರಿಷತ್ ಹಾಗೂ ದಲಿತ ಸಂಘ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ದುದ್ದ ಹೋಬಳಿಯ ಕುದರಗುಂಡಿ ಗ್ರಾಮದಲ್ಲಿ ಮೂರು ದಿನದ ಹಿಂದೆ ಪೂಜೆ ನಡೆಯುವ ಸಮಯದಲ್ಲಿ ತಮಟೆಯನ್ನು ಜೋರಾಗಿ ಹೊಡೆಯಲಿಲ್ಲ ಎಂಬ ಒಂದೇ ಕಾರಣಕ್ಕೆ ಇಲ್ಲಿನ ಸವರ್ಣೀಯರು ದಲಿತ ಕೋಡಿಗಯ್ಯನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ವೇಳೆ ಆತನ ಹಲ್ಲು ಮುರಿದಿರುವುದಾಗಿ ದೂರಿದರು.
ಇದೇ ದೇವಸ್ಥಾನದಲ್ಲಿ ಬನ್ನಿ ಗಿಡಕ್ಕೆ ಗ್ರಾಮದ ದಲಿತ ಬಸವರಾಜು ಎಂಬಾತ ಪೂಜೆ ಮಾಡಿದರೆಂಬ ಕಾರಣಕ್ಕೆ ಸವರ್ಣೀಯರಾದ ಶಶಿ, ಮಂಜೇಶ್, ದರ್ಶನ್ ಇತರರು ಬಸವರಾಜನನ್ನು ಹೊಡೆಯಲು ಮುಂದಾದ ವೇಳೆ ಬೇರೆಡೆಗೆ ತಪ್ಪಿಸಿಕೊಂಡು ಹೋಗಿದ್ದಾರೆ.
ಇದೇ ದ್ವೇಷದಲ್ಲಿ ತಮಟೆ ಬಡಿಯುವಾಗ ಅವಾಚ್ಯ ಪದಗಳಿಂದ ನಿಂದಿಸುವ ಮೂಲಕ ಜಾತಿ ನಿಂದಿಸಿದ್ದಲ್ಲದೆ ಮುಖಕ್ಕೆ ಕಲ್ಲಿನಿಂದ ಹೊಡೆದು ನಾಲ್ಕು ಹಲ್ಲು ಮುರಿದು ಹೋಗಿದೆ ಎಂದು ದೂರಿದರು.
ಆತನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಯಿತು. ಅಮಾನುಷವಾಗಿ ನಡೆದುಕೊಂಡಿರುವ ಎಲ್ಲರನ್ನೂ ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಜಿಲ್ಲೆಯಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಬಗ್ಗೆ ಗಮನ ನೀಡಿ ರಕ್ಷಣೆ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ದಲಿತ ಸಂಘಟನೆಯ ಮುಖಂಡ ಕೆ. ಈರಪ್ಪ, ನಾರಾಯಣದಾಸ್, ನಾಗರಾಜ ಹೆತ್ತೂರ್, ಆರ್.ಪಿ.ಐ. ಸತೀಶ್, ಪುಟ್ಟರಾಜ್, ಅರೇಹಳ್ಳಿ ಲಿಂಗರಾಜ್ ಇತರರು ಇದ್ದರು.