ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜೆಡಿಎಸ್ ನೇತೃತ್ವದಲ್ಲಿ ಮೌನ ಮೆರವಣಿಗೆ

Srinivasa Murthy VN
Updated On : 19 Oct 2013, 11:09 am

ಕ.ಪ್ರ. ವಾರ್ತೆ ಹಾಸನ ಅ. 19
ಪವಿತ್ರ  ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ವಿನಾಕಾರಣ ಹಾನಿ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಹಾಗೂ ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿ ವೃಂದದವರು ಶನಿವಾರ ನಗರದಲ್ಲಿ ಮೌನ ಮೆರವಣಿಗೆ ನಡೆಸಿದರು.
ಇಲ್ಲಿನ ಹೇಮಾವತಿ ಪ್ರತಿಮೆಯಿಂದ ಭಕ್ತಾಭಿಮಾನಿಗಳು ಮೌನ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತ, ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್‌ಗೆ ಈ ಸಂಬಂಧ ಮನವಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಬಳಿ ಒಂದು ವರ್ಷದ ಹಿಂದೆ ವಿದ್ಯಾರ್ಥಿನಿ ಸೌಜನ್ಯಾಳ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು, ಈ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಸಹ ನಡೆಯುತ್ತಿದೆ.
ಇದಕ್ಕೆ ಪೂರಕವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಸಹ ಅಂದಿನ ಗೃಹ ಸಚಿವರೊಂದಿಗೆ ಮಾತನಾಡಿ ಸೌಜನ್ಯಾ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಿ ಮೃತ ವಿದ್ಯಾರ್ಥಿನಿಯ ಕುಟುಂಬದವರಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿದ್ದರು.
ಹೆಗ್ಗಡೆ ಹೆಸರು ಉದ್ದೇಶ ಪೂರ್ವಕ ಸೇರ್ಪಡೆ:  ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಈಗ ಕೆಲವು ಕಿಡಿಗೇಡಿಗಳು ವೀರೇಂದ್ರ ಹೆಗ್ಗಡೆ ಹಾಗೂ ಅವರ ಪರಿವಾರದವರ ಹೆಸರನ್ನು ಉದ್ದೇಶ ಪೂರ್ವಕವಾಗಿ ಸೇರಿಸಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಹ ಕೃತ್ಯ ನಡೆಸುತ್ತಿದ್ದಾರೆ. ಇದರಿಂದ ಶ್ರೀಕ್ಷೇತ್ರದ ಪಾವಿತ್ರ್ಯಕ್ಕೆ ವಿನಾಕಾರಣ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಕ್ಷೇತ್ರದ ಉನ್ನತಿ, ಕ್ಷೇತ್ರದಿಂದ ನಡೆಯುತ್ತಿರುವ ಸೇವಾ ಕಾರ್ಯಗಳಿಂದ ಸಮಾಜಕ್ಕೆ ಆಗುತ್ತಿರುವ ಅನುಕೂಲಗಳಿಗೆ ತೊಡಕುಂಟು ಮಾಡಲು ಒಂದು ವ್ಯವಸ್ಥಿತ ಕೂಟವೇ ಈ ಘಟನೆಯ ನೆಪದಲ್ಲಿ ಸಂಚು ಮಾಡುತ್ತಿರುವುದು ಕಂಡು ಬರುತ್ತಿದೆ. ಡಾ.ವೀರೇಂದ್ರ ಹೆಗ್ಗಡೆಯವರ ಕುರಿತಾಗಿ ಖಾಸಗಿ ವಾಹಿನಿಯಲ್ಲಿ ಅವಹೇಳನಕಾರಿಯಾಗಿ ಪ್ರಸಾರ ಮಾಡಲಾಗಿದೆ ಎಂದು ದೂರಿದರು. ಯಾವುದೇ ಆಧಾರವಿಲ್ಲದ, ಹೆಗ್ಗಡೆ ವ್ಯಕ್ತಿತ್ವ ಹಾಗೂ ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರುವಂತಹ ರೀತಿಯಲ್ಲಿ ಕೆಲವು ಕಿಡಿಗೇಡಿಗಳು ನೀಡಿರುವ ಕೀಳು ಮಟ್ಟದ ಸಂದರ್ಶನ ಪ್ರಸಾರವಾಗಿರುವುದು ಕ್ಷೇತ್ರದ ಭಕ್ತರಿಗೆ, ಅಭಿಮಾನಿಗಳಿಗೆ ಭರಿಸಲಾಗದಷ್ಟು ನೋವಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿಯವರ ಮೇಲೆ ನಡೆದಿರುವ ಅಪಪ್ರಚಾರದ ವ್ಯವಸ್ಥಿತ ದಾಳಿ ಖಂಡನೀಯವಾಗಿದ್ದು, ಸೌಜನ್ಯಾಳಿಗೆ ನ್ಯಾಯ ಕೊಡಿಸುವ ಆವೇಶದಲ್ಲಿ ಪ್ರಕರಣವನ್ನು  ಶ್ರೀ ಕ್ಷೇತ್ರ ಹಾಗೂ ಧರ್ಮಾಧಿಕಾರಿಯವರ ತೇಜೋವಧೆ ಮಾಡುವ ಅಸ್ತ್ರವನ್ನಾಗಿ ಮಾಡಿಕೊಳ್ಳುವುದು ಎಳ್ಳಷ್ಟು ಸರಿಯಲ್ಲ ಎಂದರು.
ಕೋಟಿ ಕೋಟಿ ಭಕ್ತವೃಂದಕ್ಕೆ ತುಂಬಾ ನೋವು:   ಈ ಗಂಭೀರವಾದ ಪ್ರಕರಣದಲ್ಲಿ ಯಾರನ್ನೂ ಯಾವ ಪ್ರಭಾವ, ಪ್ರಲೋಭನೆಯಿಂದಾಗಲಿ ರಕ್ಷಿಸುವ ಸಾಧ್ಯತೆಯೇ ಇಲ್ಲ. ಅಲ್ಲದೆ ಶ್ರೀಕ್ಷೇತ್ರದ ಬಗ್ಗೆ ಅವಹೇಳನಕಾರಿಯಾಗಿ ಅಪಪ್ರಚಾರ ಮಾಡುತ್ತಿರುವುದರಿಂದ ಕ್ಷೇತ್ರದ ಕೋಟಿ ಕೋಟಿ ಭಕ್ತವೃಂದಕ್ಕೆ ತುಂಬಾ ನೋವು ಉಂಟಾಗಿದೆ ಎಂದು ಅಭಿಪ್ರಾಯ ಪಟ್ಟರು.
ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೌಜನ್ಯಾ ಕೊಲೆ ಪ್ರಕರಣದ ತನಿಖೆ ಶೀಘ್ರ ನಡೆಸಿ, ತಪ್ಪಿಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳಬೇಕು ಹಾಗೂ ಕ್ಷೇತ್ರ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಯಾವುದೇ ಪುರಾವೆ ಇಲ್ಲದೆ ಆಧಾರ ರಹಿತವಾಗಿ ಆರೋಪ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಜೆಡಿಎಸ್ ಶಾಸಕ ಎಚ್.ಎಸ್.ಪ್ರಕಾಶ್, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಉಪಾಧ್ಯಕ್ಷ ಇರ್ಷಾದ್‌ಪಾಷ, ಸದಸ್ಯ ಎಚ್.ಎಸ್.ಅನಿಲಕುಮಾರ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎನ್.ಮುದ್ದೇಗೌಡ, ಸಿ.ಎಸ್.ಕೃಷ್ಣಸ್ವಾಮಿ, ಎಚ್.ಎಂ.ಶಿವಣ್ಣ, ಶ್ರೀನಿವಾಸಗೌಡ, ಮಂಜುನಾಥ್, ಪ್ರವೀಣಕುಮಾರ್, ಪುರುಷೋತ್ತಮ್, ಶೇಷಪ್ಪ, ಹೊಂಗೆರೆ ರಘು, ಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement