ನಗರ ಸ್ವಚ್ಛತಾ ಆಂದೋಲನ
ಕನ್ನಡಪ್ರಭ ವಾರ್ತೆ ಹಾಸನ ಅ. 19
ನಗರಾದ್ಯಂತ ಅಕ್ಟೋಬರ್ 21, 22 ಮತ್ತು 23 ರಂದು ಸ್ವಚ್ಛತಾ ಆಂದೋಲನಾ ಕಾರ್ಯಕ್ರಮ ನಗರಸಭೆಯಿಂದ ಹಮ್ಮಿಕೊಂಡಿರುವುದಾಗಿ ಶಾಸಕ ಎಚ್.ಎಸ್.ಪ್ರಕಾಶ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂದೋಲನಾ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರು ಸೇರಿದಂತೆ ನಾನಾ ಸಂಘಟನೆಗಳ 600 ಸದಸ್ಯರು, ಸಿಬ್ಬಂದಿ, ಪೌರಕಾರ್ಮಿಕರು, 1500 ಸ್ವಯಂ ಸೇವಕರು, ಎನ್ಎಸ್ಎಸ್, ಎನ್ಸಿಸಿ ವಿದ್ಯಾರ್ಥಿಗಳು, ಜಿಲ್ಲಾ ಸಶಸ್ತ್ರ ಪಡೆ ತರಬೇತಿ ಪೊಲೀಸರು, ರಾಜ್ಯ ಮೀಸಲು ಪಡೆ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದು ಹೇಳಿದರು.
21ರಂದು 1ರಿಂದ 12ನೇ ವಾರ್ಡ್, 22 ರಂದು 13 ರಿಂದ 25ನೇ ವಾರ್ಡ್ 26 ರಿಂದ 35ನೇ ವಾರ್ಡ್ ಸ್ವಚ್ಛತಾ ಕಾರ್ಯವನ್ನು ನಡೆಸಲಾಗುತ್ತದೆ. ಈ ಕಾರ್ಯಕ್ಕೆ 12 ಟಿಪ್ಪರ್ ಲಾರಿಗಳು, 70 ಟ್ರ್ಯಾಕ್ಟರ್ಗಳು ಹಾಗೂ 45 ಸೂಪರ್ವೈಸರ್ಗಳು ಕಾರ್ಯನಿರ್ವಹಿಸಲಿದ್ದು, ಈ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವಂತ ಕಾರ್ಯ ನಡೆಸಲಾಗುತ್ತದೆ ಎಂದ ಅವರು ಈ ಕಾರ್ಯಕ್ಕೆ ಅವಶ್ಯಕ ಬಕೆಟ್, ಕೈ ಕವಚ, ಬಾಯಿಗೆ ಬಾಸ್ಕ್ಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಪ್ಲಾಸ್ಟಿಕ್ ನಿಷೇಧ: ಆಂದೋಲನಾ ಮೂಲಕ ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವುದಾಗಿದೆ. ನಗರದ ಕಲ್ಯಾಣ ಮಂಟಪ ಹಾಗೂ ಇತರೆಡೆಗಳಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಬೋರ್ಡ್ಗಳನ್ನು ಅಳವಡಿಸಬೇಕು. ಒಂದು ವೇಳೆ ಇದನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನುಡಿದರು.
24 ರಿಂದ ಹಾಸನಾಂಬ ದೇವಿ ದರ್ಶನ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ದೇವಸ್ಥಾನ ಸುತ್ತಮುತ್ತ ಪ್ಲಾಸ್ಟಿಕ್ನ್ನು ನಿಷೇಧಿಸುವುದು ಹಾಗೂ ಭಕ್ತಾಧಿಗಳು ತರುವ ಪ್ಲಾಸ್ಟಿಕ್ ಪಡೆದು ಅವರಿಗೆ ಬ್ಯಾಗ್ಗಳನ್ನು ನೀಡಲಾಗುವುದು. ಈ ಮೂಲಕ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ದೇವಿಯ ದರ್ಶನ ಪ್ರಾರಂಭವಾಗುವ ಮುನ್ನವೇ ನಗರದ ಸ್ವಚ್ಛತೆ ನಡೆಸುವುದರಿಂದ ದೇವಿ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ತಿಂಗಳಿಗೆ 12 ಲಕ್ಷ ರು.ವೆಚ್ಚ: ನಗರ ಸ್ವಚ್ಛತೆಗಾಗಿ ತಿಂಗಳಿಗೆ 12 ಲಕ್ಷ ರು. ವೆಚ್ಚ ಮಾಡಲಾಗುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಕೊರತೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಸ್ವಚ್ಛತೆಗೆ ಕೊಂಚ ಅಡಚಣೆ ಉಂಟಾಗುತ್ತಿದೆ ಎಂದ ಅವರು, ಸ್ವಚ್ಛತೆಗೆ 110 ಮತ್ತು 70 ಸಿಬ್ಬಂದಿ ಇದ್ದಾರೆ.
ನಿರ್ಮಲ ನಗರ ಯೋಜನೆಯಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಮೂವರಿಗೆ ಗುತ್ತಿಗೆ ನೀಡಿದ್ದು, ಪೌರ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಗುತ್ತಿಗೆದಾರರ ಬಳಿ ಹೇಳಿಕೊಳ್ಳಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಉಪಾಧ್ಯಕ್ಷ ಇರ್ಷಾದ್ಪಾಷ, ನಗರಸಭೆ ಸದಸ್ಯ ಎಚ್.ಬಿ. ಗೋಪಾಲ್, ಎಚ್.ಎಂ. ಸುರೇಶ್ಕುಮಾರ್, ಆರೀಫ್ಖಾನ್, ರಮೇಶ್ಬಾಬು, ಆರೋಗ್ಯಾಧಿಕಾರಿ ಕೃಷ್ಣಮೂರ್ತಿ, ವೈದ್ಯ ಗುರುರಾಜ ಹೆಬ್ಬಾರ್ ಇತರರು ಇದ್ದರು.
ಬಕೆಟ್ ಖರೀದಿಯಲ್ಲಿ ನಗರಸಭೆ ಪಾತ್ರವಿಲ್ಲ
ಸ್ವಚ್ಛತೆಗೆಂದು ವಿತರಣೆ ಮಾಡಿರುವ ಬಕೆಟ್ಗಳನ್ನು ಜಿಲ್ಲಾಡಳಿತದಿಂದ ಟೆಂಡರ್ ಕರೆದು ನೀಡಲಾಗಿದೆ. ಒಂದು ಬಕೆಟ್ಗೆ 147 ರು. ನೀಡಿ ಖರೀದಿಸಲಾಗಿದೆ. ಖರೀದಿ ವಿಚಾರದಲ್ಲಿ ನಗರಸಭೆಯ ಯಾವುದೇ ಪಾತ್ರವಿಲ್ಲ. ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಮುಖ್ಯಮಂತ್ರಿಗೆ ದೂರು ನೀಡಲಾಗುವುದು.
-ಬಸವರಾಜು, ಪುರಸಭೆ ಮುಖ್ಯಾಧಿಕಾರಿ