ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಫುಟ್‌ಪಾತ್ ಅಂಗಳ ತೆರವು

Srinivasa Murthy VN
Updated On : 19 Oct 2013, 11:02 am

ಕ.ಪ್ರ. ವಾರ್ತೆ ಬೇಲೂರು ಅ.18
ಮುಖ್ಯ ರಸ್ತೆಯ ಫುಟ್‌ಪಾತ್ ಮೇಲಿನ ವ್ಯಾಪಾರಿಗಳು ಹಾಗೂ ಮಳಿಗೆಯ ಜಿಂಕ್‌ಶೀಟ್ ತೆರವು ಗೊಳಿಸುವ ಕಾರ್ಯಾಚರಣೆ ಶನಿವಾರ ನಡೆದ ಸಂದರ್ಭದಲ್ಲಿ ಕೆಲ ವರ್ತಕರು ಮಳಿಗೆ ತೆರವುಗೊಳಿಸಲು ಒಪ್ಪದಿದ್ದಾಗ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ವಿಶ್ವ ವಿಖ್ಯಾತ ಪ್ರವಾಸಿಕೇಂದ್ರ ಬೇಲೂರಿನ ಮುಖ್ಯರಸ್ತೆಯ ಫುಟಟ್ಪಾತ್ ಇಕ್ಕೆಲಗಳಲ್ಲಿ, ಹೂವು, ಹಣ್ಣು, ಸೊಪ್ಪು, ಚಪ್ಪಲಿ ಸೇರಿದಂತೆ ಹಲವು ಬಗೆಯ ವ್ಯಾಪಾರಿಗಳು ದಿನನಿತ್ಯ ವಹಿವಾಟು ನಡೆಸಿಕೊಂಡು ಬರುತ್ತಿದ್ದರು.
ಅಲ್ಲದೆ ಪುರಸಭೆಯ ಜಾಗದಲ್ಲಿ ತಾವೇ ಶೆಡ್ ನಿರ್ಮಾಣ ಮಾಡಿಕೊಂಡಿದ್ದರು. ಇದರಿಂದ ಪ್ರವಾಸಿಕೇಂದ್ರ ಎಂಬ ಹೆಸರಿದ್ದರೂ ಅಸ್ಥಿಪಂಜರದಂತೆ ಕಾಣುವ ಗೂಡಂಗಡಿಯಿಂದ ಪಟ್ಟಣ ಸೌಂದರ್ಯಕ್ಕೆ ಧಕ್ಕೆಯಾಗಿತ್ತು. ಅಲ್ಲದೆ ಬಸ್‌ನಿಲ್ದಾಣ ಮುಂಭಾಗ ಹಾಗೂ ದೇವಸ್ಥಾನ ರಸ್ತೆಯಲ್ಲಿನ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದರಿಂದ ಪಾದಚಾರಿ ರಸ್ತೆ ಇಲ್ಲದೆ ಸಾರ್ವಜನಿಕರು, ಪ್ರವಾಸಿಗರು ವಿಧಿಯಿಲ್ಲದೆ ಜೀವಭಯದಿಂದ ರಸ್ತೆ ಮೇಲೆಯೇ ನಡೆದಾಡುವಂತಾಗಿತ್ತು. ಫುಟ್‌ಪಾತ್ ವ್ಯವಹಾರಸ್ಥರ ತೆರವಿನ ಬಗ್ಗೆ ಕಳೆದ ನಾಲ್ಕೈದು ವರ್ಷದಿಂದ ಒತ್ತಾಯವಿದ್ದರೂ ಜನಪ್ರತಿನಿಧಿಗಳ ಕೃಪಾರ್ಶಿವಾದದಿಂದ ವ್ಯಾಪಾರ ಹಾಗೇ ಮುಂದುವರಿದಿತ್ತು.
3 ತಿಂಗಳ ಹಿಂದೆಯೇ ನೋಟಿಸ್:  ತಡವಾಗಿಯಾದರೂ ಎಚ್ಚೆತ್ತ ಪುರಸಭೆ ಆಡಳಿತ 3 ತಿಂಗಳ ಹಿಂದೆ ವ್ಯಾಪಾರಸ್ಥರಿಗೆ ನೋಟಿಸ್ ಜಾರಿ ಮಾಡಿ ತೆರವಿನ ಬಗ್ಗೆ ಸುಳಿವು ನೀಡಿತ್ತು. ಅಲ್ಲದೆ 2 ದಿನದ ಹಿಂದೆ ಆಟೋದಲ್ಲಿ ಮೈಕಿನಲ್ಲಿ ಪ್ರಚಾರ ಸಹ ಮಾಡಲಾಗಿತ್ತು. ಶನಿವಾರ ಬೆಳಗಿನಿಂದಲೇ ಪೊಲೀಸ್ ಸಹಾಯದೊಂದಿಗೆ ಕಾರ್ಯಾಚರಣೆ ಆರಂಭಿಸಿ ಮಧ್ಯಾಹ್ನದ ವೇಳೆಗೆ  ಪೂರ್ಣಗೊಳಿಸಲಾಯಿತು. ಪುರಸಭೆಯ ನೌಕರರು ಪಾದಚಾರಿ ರಸ್ತೆ ತೆರವು ಗೊಳಿಸಲು ಮುಂದಾದಾಗ ಕೆಲವು ವರ್ತಕರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.
ಅಲ್ಲದೆ ಇಲ್ಲಿನ ತರಕಾರಿ ಮಾರುಕಟ್ಟೆ ಒಳಗೆ ಕೂಡಾ ತೆರವು ಮಾಡಲು ಮುಂದಾದಾಗ ನಮ್ಮ ಅಂಗಡಿ ಮಾಲನ್ನು ಕದಿಯಲಾಗುತ್ತಿದೆ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಸ್‌ಐ ಅಶ್ವಿನ್‌ಕುಮಾರ್, ಅಂಗಡಿ ತೆರವು ಸಂದರ್ಭದಲ್ಲಿ ಪ್ರತಿಯೊಂದನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಯಾವುದೇ ಎಡವಟ್ಟು ನಡೆದರೂ ಪ್ರತಿಯೊಂದು ವಿಡಿಯೋದಲ್ಲಿ ದಾಖಲಾಗಿದ್ದು ಕೆಲ ವರ್ತಕರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ವರ್ತಕರ ಆಕ್ರೋಶ: ಅಂಗಡಿ ಮಳಿಗೆಯ ಮೇಲ್ಚಾವಣಿ ಮುಂಭಾಗ ಪುರಸಭೆ ಚರಂಡಿ ಹಾಗೂ ಫುಟ್‌ಪಾತ್ ಮೇಲೆ ಬಂದಿದ್ದರೆ ಅದನ್ನು ಕೂಡಾ ತೆರವು ಗೊಳಿಸಲು ಪುರಸಭೆ ಮುಖ್ಯಾಧಿಕಾರಿ ಬಸವರಾಜು ಮುಂದಾದರು.  ಬಸ್‌ನಿಲ್ದಾಣ ಮುಂಭಾಗದ ಅಂಗಡಿ ಮಳಿಗೆಯ ಕೆಲ ವರ್ತಕರು ತಮ್ಮ ಅಂಗಡಿ  ಮುಂಭಾಗದ ಜಿಂಕ್‌ಶೀಟ್ ತೆರವು ಗೊಳಿಸುವುದಿಲ್ಲ ಎಂದು ಪಟ್ಟುಹಿಡಿದರು. ಅಲ್ಲದೆ ಮುಖ್ಯಾಧಿಕಾರಿಗೆ ಬಿ.ಶಿವರಾಂ, ಎಚ್.ಕೆ. ಜವರೇಗೌಡ, ಶಾಸಕ ರುದ್ರೇಶ್‌ಗೌಡ, ಜೆಡಿಎಸ್ ವರಿಷ್ಠರು ಸೇರಿದಂತೆ ಹಲವರಿಂದ ತೆರವು ಮೊಟಕು ಗೊಳಿಸುವಂತೆ ದೂರವಾಣಿ ಮೂಲಕ ಒತ್ತಡ ತರಲಾಯಿತು. ಪುರಸಭೆ ಮುಖ್ಯಾಧಿಕಾರಿ ಎಲ್ಲಾ ಕರೆಗಳನ್ನು ಸ್ವೀಕರಿಸಿ ಸೌಮ್ಯವಾಗೇ ಉತ್ತರ ನೀಡುತ್ತಾ ತೆರವು ಕಾರ್ಯಾಚರಣೆಯನ್ನು ಮಾತ್ರ ಮುಂದುವರೆಸುತ್ತಲೇ ಇದ್ದರು. ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿ ವರ್ತಕರು, ಮುಖ್ಯಾಧಿಕಾರಿ ನಡುವೆ ಮಾತಿನ ಚಕಮಕಿ ನಡೆದು ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು.

ನ್ಯಾಯ ಎಂದ ಮೇಲೆ ಎಲ್ಲರಿಗೂ ಒಂದೇ. ಅಲ್ಲದೆ ತಾವು ಸ್ವಂತಕ್ಕಾಗಿ ತೆರವು ಮಾಡುತ್ತಿಲ್ಲ. ಪಟ್ಟಣದ ಸೌಂದರ್ಯ ಹಾಗೂ ಪಾದಚಾರಿ ಗಳಿಗೆ ಅನುಕೂಲವಾಗಲು ಈ ಕ್ರಮ ಕೈಗೊಂಡಿದ್ದು ಕಾರ್ಯಾಚರಣೆ ನಂತರ ವರ್ತಕರ ಸಭೆ ಕರೆದು ಚರ್ಚೆ ನಡೆಸಲಾಗುವುದು
-ಬಸವರಾಜು, ಪುರಸಭೆ ಮುಖ್ಯಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement