ರಾಮ ಮಂದಿರ ನಿರ್ಮಾಣಕ್ಕೆ ಸಂಕಲ್ಪಿಸಲು ಕರೆ
ಅರಸೀಕೆರೆ: ರಾಮಾಯಣ ಮಹಾ ಕಾವ್ಯ ರಚಿಸಿದ ಮಹಶ್ರೀ ವಾಲ್ಮೀಕಿ ಜನಿಸಿದ ಈ ಪುಣ್ಯ ಭೂಮಿಯ ಆಯೋಧ್ಯೆಯಲ್ಲೇ ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಪ್ರತಿ ಹಿಂದುವೂ ಸಂಕಲ್ಪ ಮಾಡಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಸತ್ಯನಾರಾಯಣ ಕರೆ ನೀಡಿದರು.
ಪಟ್ಟಣದ ವಾಚನಾಲಯ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದ ಆವರಣದಲ್ಲಿ ತಾ. ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳ ಸಂಘಟನೆಗಳಿಂದ ವಾಲ್ಮೀಕಿ ಜಯಂತಿ ನಿಮಿತ್ತ ಅಯೋಧ್ಯ ರಾಮಮಂದಿರ ಸಂಕಲ್ಪ ದಿವಸ್ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಅಯೋಧ್ಯೆ ಪುಣ್ಯ ಸ್ಥಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಬೇಕೆಂಬ ಮಹಾತ್ವಾಕಾಂಕ್ಷಿ ಪ್ರತಿ ಭಾರತೀಯನದಾಗಿದೆ ಎಂದರು.
ಶ್ರೀರಾಮ ಚರಿತ್ರೆ ಮತ್ತು ಇತಿಹಾಸದ ಬಗ್ಗೆ ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ಪ್ರಯತ್ನ ಹಿಂದು ಸಂಘಟನೆಗಳದ್ದಾಗಿದ್ದು, ಆ ನಿಟ್ಟಿನಲ್ಲಿ ವಾಲ್ಮೀಕಿ ಜಯಂತಿ ದಿನದಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮತ್ತು ಜಾಗೃತಿಗಾಗಿ ಸಂಕಲ್ಪ ಸ್ವೀಕಾರ ಮಾಡಿಸುವುದರ ಮೂಲಕ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ನಗರ ಬಿಜೆಪಿ ಅಧ್ಯಕ್ಷ ಹಾಗೂ ವಕೀಲ ಕಲ್ಗುಂಡಿ ಹಿರಿಯಣ್ಣ ಮಾತನಾಡಿ, ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವು ಒಂದು ಜನಾಂಗ ಅಥವಾ ದೇಶಕ್ಕೆ ಮಾತ್ರ ಸೀಮಿತವಾಗಿರದೇ ಇಡೀ ವಿಶ್ವಕ್ಕೆ ಅನ್ವಯವಾಗುವಂಥದ್ದು. ನಮ್ಮ ಈ ಪುಣ್ಯ ಭೂಮಿಯಲ್ಲಿ ಬೇಡರ ಕಣ್ಣಪ್ಪ, ಪರುಶುರಾಮ ಸೇರಿದಂತೆ ಇನ್ನು ಅನೇಕರು ಜನ್ಮವೆತ್ತಿದ್ದಾರೆ ಎಂದರು. ಇಂತಹ ಮಹಾನ್ ದಾರ್ಶನಿಕರ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆ ಅಭ್ಯಸಿಸುವ ಮೂಲಕ ವಾಲ್ಮೀಕಿ ರಾಮಾಯಣದಲ್ಲಿ ಅಡಗಿರುವ ಮಹತ್ವದ ಹಾಗೂ ಇಂದಿಗೂ ಪ್ರಸ್ತುತವಿರುವ ವಿಚಾರಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಅರ್ಚಕ ಪ್ರಕಾಶ್ ಪೂಜೆ ನೆರವೇರಿಸಿದರು. ವಿಎಚ್ಪಿ ಮತ್ತು ಬಜರಂಗದಳ ಮುಖಂಡ ಟಿ.ವಿ.ಅರುಣಕುಮಾರ್, ನವೀನ್ ಶೆಟ್ಟೆಹಳ್ಳಿ, ಸುಬ್ರಹ್ಮಣಿ, ಜಗದೀಶ್, ಬಿಜೆಪಿ ನಗರ ಕಾರ್ಯದರ್ಶಿ ಚೇತನಕುಮಾರ್, ಶಶಿಧರ, ಈಶ್ವರ್ಸಿಂಗ್, ಪ್ರಭುದೇವ್ ಇತರರು ಇದ್ದರು.
ನಗರಸಭೆ ನೌಕರರ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹ
ಹಾಸನ: ನಗರಸಭೆಯ ಕರ್ತವ್ಯನಿರತ ನೀರು ಸರಬರಾಜು ವಾಲ್ಮನ್ಗಳ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೌರಸೇವಾ ನೌಕರರ ಸಂಘದ ಜಿಲ್ಲಾ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಒತ್ತಾಯಿಸಿದ್ದಾರೆ. ನಗರದ 27ನೇ ವಾರ್ಡಿನ ಮೀರ್ ಮೊಹಲ್ಲಾದ್ಲಲಿ ಅ.18 ರಂದು ನೀರು ಸರಬರಾಜು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬೆಳಗ್ಗೆ 7.15ರ ಸಮಯದಲ್ಲಿ ನೀರು ಸರಬರಾಜನ್ನು ಸರಿಯಾಗಿ ಮಾಡುತ್ತಿಲ್ಲವೆಂದು ವಾರ್ಡಿನ ನಿವಾಸಿ ನಿಸ್ಸಾರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ತಲೆ ಹಾಗೂ ಕಿವಿಗಳಿಗೆ ಬಲವಾಗಿ ಹೊಡೆದಿದ್ದಾರೆ ಎಂದು ವಾಲ್ವ್ಮನ್ಗಳ ಲಿಖಿತವಾಗಿ ಸಂಘಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಕಾನೂನು ರೀತ್ಯ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.