'ವಿವಿಧ ಸಾಂಸ್ಕೃತಿಕಚಟುವಟಿಕೆಗಳಿಂದ ಭವಿಷ್ಯ ಉಜ್ವಲ'
ಚನ್ನರಾಯಪಟ್ಟಣ: ದೇಶದ ಸಂಸ್ಕೃತಿ ಉಳಿಸಿ ಬೆಳೆಸಿ, ಪೋಷಿಸುವ ಜವಾಬ್ದಾರಿ ಯುವ ಸಮೂಹದ ಮೇಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಅನನ್ಯ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದಿನ ಜತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ತಮ್ಮ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದು ಹೇಳಿದರು. ವಿದ್ಯೆಯ ಜೊತೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಿ, ಉತ್ತಮ ಹವ್ಯಾಸಗಳೊಂದಿಗೆ ಸಮಯ ವ್ಯರ್ಥ ಮಾಡದೆ ಉನ್ನತ ಹುದ್ದೆಗಳಿಸಿ ಎಂದು ತಿಳಿಸಿದರು. ಬಹಳ ದಿನಗಳಿಂದಲೂ ನಿಮ್ಮ ಕಾಲೇಜಿಗೆ ಬಸ್ ವ್ಯವಸೆ ಕಲ್ಪಿಸಲಾಗಿಲ್ಲ. ಈ ವಿಷಯ ಕುರಿತು ಹಾಸನ ಸಾರಿಗೆ ಸಂಸ್ಥೆ ವಿಭಾಗ ನಿಯಂತ್ರಣಾಧಿಕಾರಿ ಜತೆ ಮಾತನಾಡಿದ್ದೇನೆ. ಪಟ್ಟಣ ಸಾರಿಗೆ ವ್ಯವಸ್ಥೆಗೆ ಎರಡು ಬಸ್ಗಳನ್ನು ಶೆಟ್ಟಿಹಳ್ಳಿ ಬರಗೂರು ಹ್ಯಾಂಡ್ಪೋಸ್ಟ್ ಮೂಲಕ ಓಡಿಸಲಾಗುತ್ತದೆ. ತಮ್ಮ ಕಾಲೇಜಿನ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದರು. ಹಾಸನ ಸರ್ಕಾರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಎ. ರವಿಶಂಕರ್ ಮಾತನಾಡಿ, ವಿದ್ಯಾರ್ಥಿಗಳ ಏಳಿಗೆಗೆ ಕಠಿಣ ಪರಿಶ್ರಮದ ಜತೆಗೆ ಗುರುನಿಷ್ಠೆ ಅತಿ ಮುಖ್ಯ. ಗುರುಕುಲ ಪದ್ಧತಿಯಿಂದ ಪ್ರಾರಂಭವಾದ ಶಿಕ್ಷಣಕ್ಕೆ ಹೆಚ್ಚು ಮಹತ್ವವಿದೆ. ದೂರ ಶಿಕ್ಷಣಕ್ಕಿಂತ ಗುರುಕುಲ ಪದ್ಧತಿ ನಿಜವಾದ ವ್ಯಕ್ತಿತ್ವವನ್ನು ರೂಪಿಸಿ ಗುರಿ ತಲುಪಲು ಸಹಾಯ ಮಾಡುತ್ತದೆ ಎಂದರು. ನೀತಿ ಮತ್ತು ತಂಡ ಪ್ರಾರ್ಥನೆ, ಪಲ್ಲವಿ ಮತ್ತು ತಂಡ ನಾಡಗೀತೆ ಹಾಡಿದರು. ಸಿ.ಎಸ್. ಅನುರಾಧ ಸ್ವಾಗತಿಸಿದರು. ಎಸ್.ಎಂ. ಶಶಿಧರ ಹಾಗೂ ಎಚ್. ದಿವ್ಯ ನಿರೂಪಿಸಿದರು. ಪ್ರೊ.ಎಂ.ಕೆ.ಉಮಾನಾಥ್ ಅಧ್ಯಕ್ಷತೆ ವಹಿಸಿದ್ದರು. ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಿ.ಸಿ.ಮಂಜುನಾಥ್ ನಿರ್ದೇಶಕ ಜಯರಾಮ್, ಸಾಂಸ್ಕೃತಿಕ ಸಮಿತಿ, ಬೋಧಕರು ಮತ್ತು ಆಡಳಿತ ವರ್ಗ, ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ವಿದ್ಯಾರ್ಥಿ ವೃಂದದವರು ಇದ್ದರು.
ಇಂದಿನಿಂದ ಯುವ ಸಂಘಗಳ ಅಭಿವೃದ್ಧಿ ಕಾರ್ಯಕ್ರಮ
ಹಾಸನ: ಜಿಲ್ಲಾ ನೆಹರು ಯುವ ಕೇಂದ್ರವು ತನ್ನ ಪ್ರಸಕ್ತ ಸಾಲಿನ ಮುಖ್ಯ ಕಾರ್ಯಕ್ರಮಗಳಲ್ಲಿ ಒಂದಾದ ಯುವ ಸಂಘಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಅ.21 ರಿಂದ ಅ. 25ರ ವರೆಗೆ ಆಲೂರು ತಾಲೂಕಿನಲ್ಲಿ ವ್ಯವಸ್ಥೆಗೊಳಿಸುತ್ತಿದೆ. ಕಾರ್ಯಕ್ರಮದ ಅನ್ವಯ ನೆಹರು ಯುವಕೇಂದ್ರದ ರಾಷ್ಟ್ರೀಯ ಯುವ ದಳ ಕಾರ್ಯಕರ್ತರು ಹಾಗೂ ಯುವ ನಾಯಕರು ಆಲೂರು ತಾಲೂಕಿನಲ್ಲಿ ಅಸ್ತಿತ್ವದಲ್ಲಿರುವ ನೋಂದಾಯಿಸಿ ಹಾಗೂ ನೆಹರು ಯುವಕೇಂದ್ರಕ್ಕೆ ಸಂಯೋಜಿಸಲ್ಪಟ್ಟಿರುವ ಸಂಘ ಮಂಡಳಿಗಳಿಗೆ ಭೇಟಿ ನೀಡಿ ಅವುಗಳ ಕಾರ್ಯಚಟುವಟಿಕೆ ಸಾಮಾಜಿಕ ಸಮಸ್ಯೆ, ಅಭಿವೃದ್ಧಿ ಕುರಿತಾದ ವಿಷಯಗಳ ಬಗ್ಗೆ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಕೊನೆಯ ದಿನದಂದು ಯುವ ಜನರ ಸಭೆಯನ್ನು ತಾಲೂಕು ಹೋಬಳಿ ಕೇಂದ್ರ ಸ್ಥಾನದಲ್ಲಿ ನಡೆಸಲಿದ್ದಾರೆ. ಸದರಿ ರಾಷ್ಟ್ರೀಯ ಯುವ ದಳ ಕಾರ್ಯಕರ್ತರು ಸಂಘ ಮಂಡಳಿಗಳಿಗೆ ಭೇಟಿ ನೀಡಿದಾಗ ಸಹಕರಿಸಲು ಹಾಗೂ ಸಭೆಯಲ್ಲಿ ಭಾಗವಹಿಸಲು ಕೋರಲಾಗಿದೆ.
ಎಸ್ಸಿ, ಎಸ್ಟಿ ಜಾಗೃತಿ ಹಿತರಕ್ಷಣಾ ಸಭೆ
ಹಾಸನ: 2013-14ನೇ ಸಾಲಿನ ಸಕಲೇಶಪುರ ತಾ. ಮಟ್ಟದ ಪ.ಜಾತಿ ವರ್ಗದ ಜಾಗೃತಿ ಮತ್ತು ಹಿತರಕ್ಷಣಾ ಸಮಿತಿಯ ತ್ರೈಮಾಸಿಕ ಸಭೆಯನ್ನು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಅ.21 ರಂದು ಬೆಳಗ್ಗೆ 11-30 ಕ್ಕೆ ಸಕಲೇಶಪುರ ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ಕರೆಯಲಾಗಿದೆ. ಸಾರ್ವಜನಿಕರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಗೆ ಹಾಜರಾಗಿ ಪ.ಜಾತಿ, ವರ್ಗಗಳ ಜನರ ಕುಂದು ಕೊರತೆಗಳ ಕುರಿತು ಸಲಹೆ-ಸೂಚನೆನೀಡುವಂತೆ ತಹಶೀಲ್ದಾರ್ ಹಾಗೂ ತಾ. ಮಟ್ಟದ ಪ.ಜಾತಿ ವರ್ಗದ ಜಾಗೃತಿ ಮತ್ತು ಹಿತರಕ್ಷಣಾ ಸಮಿತಿ ಅಧ್ಯಕ್ಷರು ಕೋರಿದ್ದಾರೆ.
ಗಣಪತಿ ಉತ್ಸವ ಯಶಸ್ಸಿಗೆ ಕೃತಜ್ಞತೆ
ಹಾಸನ: ನಗರದ ಹಳೇ ಬಸ್ ನಿಲ್ದಾಣ ರಸ್ತೆಯ ಗಣಪತಿ ಸೇವಾಸಂಸ್ಥೆಯಿಂದ ಹಮ್ಮಿಕೊಂಡಿದ್ದ 59ನೇ ವರ್ಷದ ಗಣಪತಿ ಮಹೋತ್ಸವ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಸಂಸ್ಥೆ ಅಧ್ಯಕ್ಷ ಡಾ.ನಾಗರಾಜ್, ಕಾರ್ಯದರ್ಶಿ ಚನ್ನವೀರಪ್ಪ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅ.1 ರಂದು ನಗರದ ಪ್ರಮುಖ ಬೀದಿಗಳಲ್ಲಿ ನಡೆದ ವಿಜೃಂಭಣೆ ಗಣೇಶ ಉತ್ಸವಕ್ಕೆ ಜನತೆ ಮತ್ತು ಭಕ್ತರು ಪ್ರಶಂಸೆ ತಿಳಿಸಿದ್ದಾರೆ. ಮೆರವಣಿಗೆ ಸುಲಲಿತವಾಗಿ ನಡೆಯಲು ಜಿಲ್ಲಾಡಳಿತ, ಸಮಸ್ತ ನಾಗರಿಕರು, ಸ್ನೇಹಿತರು, ಕಲಾವಿದರು ಅಲ್ಲದೇ ಪೊಲೀಸ್, ವಿದ್ಯುತ್ ಇಲಾಖೆ, ಹೋಂಗಾರ್ಡ್ ಸಹಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಕ್ಷೇತ್ರ ಶಾಸಕ ಎಚ್.ಎಸ್.ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಇರ್ಷಾದ್ಪಾಷ ಹಾಗೂ ಎಲ್ಲ ಸದಸ್ಯರಿಗೆ ಸಂಸ್ಥೆಯಿಂದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಮಾಜಿ ಸಚಿವ ವಿ.ಸೋಮಣ್ಣ ಸ್ಪಷ್ಟನೆ
ಹಾಸನ: ಬಿಜೆಪಿ ಮತ್ತು ಕಾರ್ಯಕರ್ತರನ್ನು ಕುರಿತು ತಾವು ಅವಹೇಳನಕಾರಿಯಾಗಿ ಮಾತನಾಡಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ಸ್ವಷ್ಟನೆ ನೀಡಿದ್ದಾರೆ.ಅರಸೀಕೆರೆಯ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಿದ್ದೆ.ಈ ಸಂದರ್ಭದಲ್ಲಿ ಕೆಜೆಪಿ-ಬಿಜೆಪಿ ಹೊಂದಾಣಿಕೆ ಕುರಿತು ಮತ್ತು ರಾಜ್ಯ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಪ್ರಸ್ತಾಪಿಸಿದೆ ಅಷ್ಟೇ. ಅವಹೇಳನಕಾರಿಯಾಗಿ ಮಾತನಾಡಿಲ್ಲ ಎಂದು ಅವರು ಹೇಳಿದ್ದಾರೆ.
ತಾಲೂಕು ಮಟ್ಟದ ಆರೋಗ್ಯ ಶಿಬಿರ
ಹಾಸನ: ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿಯಲ್ಲಿ ಹಾಸನದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಉಚಿತ ಆರೋಗ್ಯ ತಪಾಸಣೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಹಯೋಗದೊಂದಿಗೆ ನಡೆಸುತ್ತಿದ್ದು, ಅಂತೆಯೇ ಈ ಬಾರಿ ಅ.21 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಾರ್ವಜನಿಕ ಆಸ್ಪತ್ರೆ ಹಾಸನದಲ್ಲಿ ಹೃದ್ರೋಗ, ಕ್ಯಾನ್ಸರ್, ನರರೋಗ,ಮೂತ್ರಪಿಂಡದ ಸಮಸ್ಯೆಗಳು,ಸುಟ್ಟಗಾಯ,ಮತ್ತು ನವಜಾತ ಶಿಶುಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಮೈಸೂರಿನ ಅಪೊಲೊ ಬಿಜಿಎಸ್ ಆಸ್ಪತ್ರೆ ಮೈಸೂರು, ಭಾರತ್ ಕ್ಯಾನ್ಸರ್ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.
ದೂರವಾಣಿ ಅದಾಲತ್
ಹಾಸನ: ದೂರ ಸಂಪರ್ಕ ಸೇವೆಗೆ ಸಂಬಂಧಪಟ್ಟಂತೆ ಕಳೆದ ಆರು ತಿಂಗಳಿಂದ ಇತ್ಯರ್ಥವಾಗದೆ ಉಳಿದಿರುವ ದೂರವಾಣಿ ದೂರುಗಳ ಪರಿಹಾರಕ್ಕಾಗಿ ಅಕ್ಟೋಬರ್ 24 ರಂದು ಮಧ್ಯಾಹ್ನ 3 ಕ್ಕೆ ಬಿಎಸ್ಎನ್ಎಲ್ ಭವನದ ಕಾನ್ಫರೆನ್ ಹಾಲ್ನಲ್ಲಿ ದೂರವಾಣಿ ಅದಾಲತ್ ಜರುಗಲಿದೆ ಎಂದು ಮಹಾಪ್ರಬಂಧಕರು ತಿಳಿಸಿದ್ದಾರೆ. ಯಾವುದೇ ದೂರವಾಣಿ ದೂರುಗಳಿದ್ದಲ್ಲಿ ಅ. 22 ರೊಳಗೆ ಸಹಾಯಕ ಮಹಾಪ್ರಬಂಧಕರು (ವಾಣಿಜ್ಯ),ಬಿಎಸ್ಎನ್ಎಲ್ ಭವನ ಬಿ.ಎಂ.ರಸ್ತೆ, ಹಾಸನ ಇವರಿಗೆ ಸಲ್ಲಿಸುವಂತೆ ಕೋರಲಾಗಿದೆ.