ಕೆರೆ ಪ್ರಾಧಿಕಾರ ರಚನೆ ಚಿಂತನೆ
ಕನ್ನಡಪ್ರಭ ವಾರ್ತೆ ಅರಸೀಕೆರೆ ಅ.21
ರಾಜ್ಯದಲ್ಲಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಕೆರೆ ಪ್ರಾಧಿಕಾರ ರಚನೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಸೋಮವಾರ ತಾಲೂಕಿನ ಹನಿಕೆ ಸಮೀಪ ಬೆಳವಾಡಿಕೆರೆ ನೀರು ಹರಿಸುವ ಕೆನಾಲ್ ವೀಕ್ಷಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಕೆರೆಗಳ ಅಭಿವೃದ್ಧಿಗೆ ಚಿಂತನೆ ನಡೆಸಿದ್ದು ಸಣ್ಣ ನೀರಾವರಿ ಇಲಾಖೆಯ 3768 ಕೆರೆಗಳ ಅಭಿವೃದ್ಧಿಗೆ ಈಗಾಗಲೇ ಯೋಜನೆ ರೂಪಿಸಿದ್ದು, ಈ ಸಂಬಂಧ 198 ಕೋಟಿ ರು. ಬಿಡುಗಡೆಯಾಗಿದೆ ಎಂದು ಹೇಳಿದರು.
ಕೆರೆಗಳ ಪ್ರಾಧಿಕಾರ ಅನುಷ್ಠಾನಕ್ಕೆ ಬಂದಾಗ ರಾಜ್ಯದ 27 ಸಾವಿರ ಕೆರೆಗಳು ಪ್ರಾಧಿಕಾರಕ್ಕೆ ಒಳಪಡಲಿದ್ದು, ರಾಜ್ಯದ ಶೇ.10 ಕೇಂದ್ರದ ಶೇ.90 ಅನುದಾನದಲ್ಲಿ ಕೆರೆಗಳ ಅಭಿವೃದ್ಧಿಗೆ ಬಳಸಲಾಗುವುದು. ಅಲ್ಲದೇ, ಪ್ರಸಕ್ತ ಸಾಲಿನಲ್ಲಿ ಕೆರೆಗಳ ಅಭಿವೃದ್ಧಿಗೆ 250 ಕೋಟಿ ರು. ಬಿಡುಗಡೆಗೊಳಿಸುವುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ನುಡಿದರು.
ಮಲೆನಾಡು ಪ್ರದೇಶಗಳಲ್ಲಿ ಕೆರೆ ಏರಿಗಳ ಮೇಲೆ ರಸ್ತೆ ನಿರ್ಮಾಣ ಮಾಡಿದ್ದು ಅಪಘಾತಗಳು ಸಂಭವಿಸುತ್ತಿವೆ, ಕೆರೆಗಳು ನಮ್ಮ ಇಲಾಖೆಗೆ ಬಂದರೆ ರಸ್ತೆಗಳು ಲೋಕೋಪಯೋಗಿ ಇಲಾಖೆಗೆ ಸೇರಿರುವುದರಿಂದ ತಡೆಗೋಡೆ ನಿರ್ಮಿಸಲು ಇಲಾಖಾ ಮಂತ್ರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೇಲೂರು ತಾಲೂಕಿನ 19 ಎಕರೆ ಭೂಮಿ ಚಾನಲ್ ನಿರ್ಮಾಣಕ್ಕೆ ಭೂಸ್ವಾಧೀನವಾಗಿದ್ದು ಸರ್ಕಾರ ತರಿ ಜಮೀನಿಗೆ 3 ಲಕ್ಷ ಖುಷ್ಕಿ ಜಮೀನಿಗೆ 2 ಲಕ್ಷ ರು. ಪರಿಹಾರ ನೀಡಲಾಗುತ್ತಿದೆ. ಈ ಪರಿಹಾರ ಸಾಕಾಗದು ಎಂದು ರೈತರು ಮನವಿ ಮಾಡಿದ್ದು, ಈ ಬಗ್ಗೆ ಕಂದಾಯ ಮಂತ್ರಿ ಹಾಗೂ ಮುಖ್ಯ ಮಂತ್ರಿಗಳಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೇಲೂರು ಯಗಚಿ ಜಲಾಶಯದಿಂದ ಕೆನಾಲ್ ಮುಖಾಂತರ ಬೆಳವಾಡಿ, ಈಶ್ವರಹಳ್ಳಿ, ಕಳಸಾಪುರ, ದೇವನೂರು, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿದ್ದು ಬೇಲೂರು ತಾಲ್ಲೂಕಿನ ಹನಿಕೆ ಸಂತೆ ಕೆರೆ ಮಾಳೇನಹಳ್ಳಿ,ಕೆರೆ ಹಿರೇಹಳ್ಳಿ ಕೆರೆ, ತಿಮ್ಮಾನಾಯ್ಕನಕೆರೆಗಳಿಗೆ ನೀರು ಹರಿಸುವ ಯೋಜನೆಯನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ನುಡಿದರು.
ವಿಶ್ವಪ್ರಸಿದ್ದ ವಿಷ್ಣುಸಮುದ್ರ ಕೆರೆಯ ಕಲ್ಯಾಣಿಯ ಹೂಳು ತೆಗೆದು ಶಾಶ್ವತ ಯೋಜನೆ ರೂಪಿಸಲು ಸರ್ಕಾರ ಕೋಟಿ ರು. ಅನುದಾನ ಬಿಡುಗಡೆಗೊಳಿಸಿದ್ದು, ಇನ್ನೂ 2.5ಕೋಟಿ ರು ಬಿಡುಗಡೆ ಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಚಾನಲಲ್ನಿರ್ಮಿಸಲು ರೈತರ ಜಮೀನು ಭೂಸ್ವಾಧೀನ ಮಾಡಿಕೊಂಡಿದ್ದು ರೈತರಿಗೆ ಶೀಘ್ರದಲ್ಲೆ ಪರಿಹಾರ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಶಾಸಕ ವೈ.ಎನ್.ರುದ್ರೇಶಗೌಡ, ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಅಧಿಕಾರಿಗಳು ಮೊದಲಾದವರು ಇದ್ದರು.