ಪೊಲೀಸ್ ಇಲಾಖೆಯಿಂದ ಗಣರಾಜ್ಯ ವ್ಯವಸ್ಥೆ ಬಲಶಾಲಿ
ಕನ್ನಡಪ್ರಭ ವಾರ್ತೆ ಹಾಸನ ಅ. 21
ಪೊಲೀಸ್ ಇಲಾಖೆಯಿಂದ ದೇಶದ ಗಣರಾಜ್ಯ ವ್ಯವಸ್ಥೆ ಮತ್ತಷ್ಟು ಬಲಶಾಲಿಯಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎಸ್.ಸೋಮಶೇಖರ್ ಹೇಳಿದರು.
ನಗರದ ಪೊಲೀಸ್ ಮೈದಾನದಲ್ಲಿ ಸೋಮವಾರ ನಡೆದ ಹುತಾತ್ಮ ಪೊಲೀಸ್ ದಿನಾಚರಣೆ ಅಂಗವಾಗಿ ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟ ಪೊಲೀಸರಿಗೆ ಗೌರವ ವಂದನೆ ಸಲ್ಲಿಸಿ ನಂತರ ಮಾತನಾಡಿದ ಅವರು, ಕಾನೂನು ರಕ್ಷಣೆ, ಶಾಂತಿ ಸುವ್ಯವಸ್ಥೆಗಾಗಿ ತ್ಯಾಗ ಬಲಿದಾನಗೈದ ಪೊಲೀಸರಿಗೆ ಅನನ್ಯ ನಮನಗಳನ್ನು ಸಲ್ಲಿಸ ಬಯಸುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ಹುತಾತ್ಮರ ಸಂಖ್ಯೆ ಕಡಿಮೆಯಾಗಲೆಂದು ಆಶಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಮಾತನಾಡಿ, ದೇಶದ ಆಂತರಿಕ ರಕ್ಷಣೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರ ಪಾತ್ರ ಅಪಾರವಾಗಿದ್ದು ಅವರ ತ್ಯಾಗ ಬಲಿದಾನಗಳಿಗೆ ಪ್ರತಿಯೊಬ್ಬರೂ ಹೃದಯ ತುಂಬಿದ ನಮನ ಸಲ್ಲಿಸಬೇಕಿದೆ.
ದೇಶದಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಲು ಹುತಾತ್ಮರಾದ ಮತ್ತು ಪ್ರಾಣದ ಹಂಗು ತೊರೆದು ದುಡಿಯುತ್ತಿರುವರನ್ನು ಸ್ಮರಿಸಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದಕ್ಕೆ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ಅಭಿಪ್ರಾಯ ಪಟ್ಟರು.
ದೇಶಕ್ಕಾಗಿ ಸೇವೆ ಮಾಡುವ ವೀರರ ಬಗ್ಗೆ ಸಮಾಜ ಅಪಾರ ಗೌರವ ಹೊಂದಿದೆ ಎಂದ ಜಿಲ್ಲಾಧಿಕಾರಿ ಅನ್ಬುಕುಮಾರ್ ಹುತಾತ್ಮ ಪೊಲೀಸರ ಕುಟುಂಬಕ್ಕೆ ದು:ಖ ತಡೆಯುವ ಶಕ್ತಿ ದೇವರು ನೀಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಪೊಲೀಸ್ ವ್ಯವಸ್ಥೆ ಬಲಿಷ್ಠವಾಗಿದೆ: ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್ ಮಾತನಾಡಿ, ದೇಶದಲ್ಲಿ ಸೇನೆ ಹಾಗೂ ಪೊಲೀಸ್ ವ್ಯವಸ್ಥೆ ಬಲಿಷ್ಠವಾಗಿದೆ. ದೇಶಕ್ಕಾಗಿ ಹುತಾತ್ಮರಾಗುವುದು ಶೋಕದ ವಿಚಾರವಾದರೂ ಅವರಿಗೆ ಗೌರವ ಸಮರ್ಪಿಸುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡುವ ಸಂದರ್ಭದಲ್ಲಾಗುವ ಸಾವು ನೋವಿನ ಪ್ರಮಾಣ ಕಡಿಮೆಯಾಗ ಬಹುದೆಂಬುದು ತಮ್ಮ ಅಭಿಪ್ರಾಯ ಎಂದು ನುಡಿದರು.
ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಪೊಲೀಸ್ ಹುತಾತ್ಮರ ದಿನಾಚರಣೆಯ ಉದ್ದೇಶ ತಿಳಿಸಿದರು. ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ 500ಕ್ಕೂ ಅಧಿಕ ಪೊಲೀಸರು ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ್ದಾರೆ. ರಾಜ್ಯದಲ್ಲಿ 19 ಪೊಲೀಸರು ಮೃತ ಪಟ್ಟಿದ್ದರೆ ಉತ್ತರ ಪ್ರದೇಶ ರಾಜ್ಯವೊಂದರಲ್ಲೇ 117 ಪೊಲೀಸರು ಕರ್ತವ್ಯದ ವೇಳೆ ಅಸುನೀಗಿದ್ದಾರೆ ಎಂದು ಹೆಸರು ಸಹಿತ ಮಾಹಿತಿ ನೀಡಿ ಗೌರವ ಸಲ್ಲಿಸಿದರು.
ರಾಜ್ಯ ಮೀಸಲು ಪೊಲೀಸ್ ಪಡೆ ಕಮಾಂಡರ್ ಕೃಷ್ಣಪ್ಪ ವೇದಿಕೆಯಲ್ಲಿ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಪ್ರಧಾನ ನ್ಯಾಯಾಧೀಶರು, ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಹೋಂಗಾರ್ಡ್ ಕಮಾಂಡೆಂಟ್ ಸತೀಶ್, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಸಮಾಜ ಸೇವಕ ಡಾ.ಗುರುರಾಜ ಹೆಬ್ಬಾರ್, ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳ ಪ್ರತಿನಿಧಿಗಳು ಮತ್ತಿತರರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚ ವಿರಿಸಿ ನಮನ ಸಲ್ಲಿಸಿದರು. ಅಲ್ಲದೆ 3 ಸುತ್ತು ಕುಶಾಲ ತೋಪು ಹಾರಿಸಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ 500ಕ್ಕೂ ಹೆಚ್ಚು ಪೊಲೀಸರು ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ್ದು, ಉತ್ತರ ಪ್ರದೇಶ ರಾಜ್ಯವೊಂದರಲ್ಲೇ 117 ಪೊಲೀಸರು ಕರ್ತವ್ಯದ ವೇಳೆ ಅಸು ನೀಗಿದ್ದಾರೆ. ನಮ್ಮ ರಾಜ್ಯದಲ್ಲಿ 19 ಪೊಲೀಸರು ಮೃತ ಪಟ್ಟಿದ್ದಾರೆ
-ರವಿ ಡಿ.ಚನ್ನಣ್ಣನವರ್, ಜಿಲ್ಲಾ ಎಸ್ಪಿ