ಮಳಿಗೆ ಬಾಡಿಗೆ ಅವ್ಯವಹಾರದ ಬಗ್ಗೆ ತನಿಖೆಗೆ ಸದಸ್ಯ ಆಗ್ರಹ
ಚನ್ನರಾಯಪಟ್ಟಣ: ಪಟ್ಟಣ ಪುರಸಭೆಗೆ ಸೇರಿದ ಆಸ್ತಿಯನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಡ ನಿರ್ಮಿಸಿ ಅದನ್ನು ಅನಾಮಧೇಯರಿಗೆ ಬಾಡಿಗೆ ನೀಡುವಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆಯಾಗಬೇಕೆಂದು ಪುರಸಭಾ ಸದಸ್ಯ ನಟರಾಜು ಆಗ್ರಹಿಸಿದರು.
ಪುರಸಭಾಧ್ಯಕ್ಷ ಮಂಜಣ್ಣ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ನಟರಾಜು ಪುರಸಭೆಯ ಆಸ್ತಿಯಲ್ಲಿ 48 ವಾಣಿಜ್ಯ ಮಳಿಗೆಗೆಳನ್ನು ನಿರ್ಮಿಸಿಕೊಂಡು ಅವುಗಳನ್ನು ಅನಾಮಧೇಯರಿಗೆ ಬಾಡಿಗೆ ನೀಡಿದ್ದು, ಕೂಡಲೇ ಅಂತಹವರ ವಿರುದ್ಧ ಕ್ರಮ ತೆಗೆದುಕೊಂಡು ಆಸ್ತಿಯನ್ನು ಪುರಸಭೆ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದರು.
48 ಮಳಿಗೆಗಳು ನಿರ್ಮಿಸಿ ಎಷ್ಟು ವರ್ಷಗಳಾಗಿವೆ ಎಂಬುದನ್ನು ಪರಿಗಣಿಸಿ, ಆ ವ್ಯಕ್ತಿಗಳಿಂದ ಬಾಡಿಗೆ ಹಾಗೂ ದಂಡ ವಸೂಲಿ ಮಾಡಿ ವಶಕ್ಕೆ ತೆಗೆದುಕೊಂಡು ಅವುಗಳನ್ನು ಹರಾಜು ಮುಖೇನ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಂಡು ಅವುಗಳಿಗೆ ನಿವೇಶನದ ತೆರಿಗೆಯನ್ನು ನೀಡುತ್ತಿರುವ ಮೂರು ಸಾವಿರಕ್ಕೂ ಹೆಚ್ಚು ಮನೆಗಳು ಪಟ್ಟಣದಲ್ಲಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಶಾಮಿಲಾಗಿರುವುದರಿಂದ ಪುರಸಭೆ ಆದಾಯಕ್ಕೆ ಕುಂಠಿತವಾಗಿದೆ. ಈ ಬಗ್ಗೆ ಆಡಳಿತ ಮಂಡಳಿ ಅಧಿಕಾರವನ್ನು ಚುರುಕುಗೊಳಿಸಬೇಕು ಎಂದು ಒತ್ತಾಯಿಸಿದರು.
10 ವರ್ಷದಿಂದ ತೆರಿಗೆ ಬಾಕಿ: ಸ್ವಯಂ ಘೋಷಿತ ಆಸ್ತಿ ತೆರಿಗೆ ಕಟ್ಟುವ ಸಂದರ್ಭದಲ್ಲಿ ನಿವೇಶನದಾರರಿಂದ ಸರ್ಕಾರ ನಿಗದಿ ಮಾಡಿರುವ ಅರ್ಧದಷ್ಠು ಮಾತ್ರ ಸಂದಾಯ ಮಾಡಿಸಿಕೊಂಡಿದ್ದು, ಕಳೆದ 10 ವರ್ಷದಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಅದನ್ನು ವಸೂಲಿ ಮಾಡಿದರೆ ಪುರಸಭೆಗೆ ಕೋಟಿಗೂ ಹೆಚ್ಚು ತೆರಿಗೆ ರೂಪದಲ್ಲಿ ಹಣ ಬರುತ್ತದೆ ಎಂದು ತಿಳಿಸಿದರು.
ಸದಸ್ಯ ನಟರಾಜು ಪ್ರಶ್ನೆಗೆ ಸಭೆಯಲ್ಲಿದ್ದ ಶಾಸಕ ಬಾಲಕೃಷ್ಣ ಉತ್ತರಿಸಿ ಅಕ್ರಮ ಕಟ್ಟಡಗಳು ಹಾಗೂ ವಾಣಿಜ್ಯ ಮಳಿಗೆಗಳು ನಿರ್ಮಾಣವಾಗಿರುವುದನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಮೂರು ಬಡಾವಣೆಗಳಲ್ಲಿ ಕಳೆದ 15 ವರ್ಷಗಳ ಹಿಂದೆ ಬಡವರಿಗೆ ಮನೆ ಕಟ್ಟಿಕೊಳ್ಳುವ ಸಲುವಾಗಿ ಒಂದು ಸಾವಿರ ನಿವೇಶನ ಉಳ್ಳ ಲೇ ಔಟ್ ನಿರ್ಮಿಸಿ ಕೆಲವರಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ. ಅದಕ್ಕೆ ಯಾವುದೇ ದಾಖಲೆಗಳಿಲ್ಲ. ಈ ಬಗ್ಗೆ ಮೂಲ ದಾಖಲೆಗಳನ್ನು ಪರಿಶೀಲಿಸಿ ಉಳಿದಿರುವ ನಿವೇಶನಗಳನ್ನು ಹಂಚಿಕೆ ಮಾಡಲು ಸದಸ್ಯರ ಒಪ್ಪಿಗೆ ಅಗತ್ಯವಿದೆ ಎಂದಾಗ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸಿ ಬಡವರಿಗೆ ನಿವೇಶನಗಳು ಹಂಚಿಕೆಯಾಗುವಂತೆ ನೋಡಿಕೊಳ್ಳಿ ಎಂದು ಆಗ್ರಹಿಸಿದರು.
ತಮ್ಮ ನಿವೇಶನವೇ ತಿಳಿಯದು: ಕೆಲವರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಆದರೆ ಖಾತೆ ಹಾಗೂ ಇತರೆ ದಾಖಲೆಗಳನ್ನು ನೀಡದ ಕಾರಣ ಹಕ್ಕು ಪತ್ರ ಹೊಂದಿರುವವರಿಗೆ ತಮ್ಮ ನಿವೇಶನವೇ ತಿಳಿಯದಾಗಿದೆ . ಈ ಬಗ್ಗೆ ಆಯಾ ಬಡಾವಣೆಗಳಲ್ಲಿ ಸಭೆ ಕರೆದು ಸ್ಥಳದಲ್ಲಿಯೇ ಮೂಲ ದಾಖಲೆ ನೀಡಿದರೆ ಅವರ ನಿವೇಶನವನ್ನು ಗುರುತಿಸಿ ಕೊಡುವ ವ್ಯವಸ್ಥೆಯನ್ನು ಸದ್ಯದಲ್ಲಿಯೇ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಪುರಸಭೆ ಪ್ರಸಕ್ತ ಸಾಲಿನಲ್ಲಿ 1.75ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದ್ದು, 1.35ಕೋಟಿ ಅಕ್ಟೋಬರ್ ಅಂತ್ಯಕ್ಕೆ ವಸೂಲಿಯಾಗಿದೆ ಎಂದು ಮುಖ್ಯಾಧಿಕಾರಿ ಚಂದ್ರಶೇಖರ್ ಸಭೆಯ ಗಮನಕ್ಕೆ ತಂದ ಸಂದರ್ಭದಲ್ಲಿ ಸದಸ್ಯ ಮಂಜುನಾಥ್ ಮಾತನಾಡಿ ಪಟ್ಟಣದಲ್ಲಿ ಖಾಸಗಿ ಶಾಲಾ ಕಾಲೇಜುಗಳು ಹಾಗೂ ಕಲ್ಯಾಣ ಮಂಟಪಗಳಿಂದ ತೆರಿಗೆ ವಸೂಲಿ ಮಾಡುತ್ತಿಲ್ಲ. ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಯಾರಿಗೂ ಉಚಿತವಾಗಿ ಸೀಟುಗಳನ್ನು ಹಂಚುತ್ತಿಲ್ಲ ಅವರಿಗೆ ವಿನಾಯಿತಿ ನೀಡುತ್ತೀರಿ ಎಂದು ಆಗ್ರಹಿಸಿದಾಗ ಸದಸ್ಯರೆಲ್ಲರೂ ತೆರಿಗೆ ವಸೂಲಿ ಮಾಡುವಂತೆ ಸೂಚಿಸಿದರು.
ಮನೆ ಮನೆ ಕಸ ವಿಲೇವಾರಿ ಮಾಡಲು ಅರ್ಜಿ ಸಲ್ಲಿಸಿದ ಕೆಲ ಸಂಘಟನೆಗಳಿಗೆ ಅನುಮತಿ ನೀಡದೆ ಹಿಂದೆ ಇದ್ದವರನ್ನೇ ಮುಂದುವರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಅವರೊಂದಿಗೆ ಶಾಮಿಲಾಗಿದ್ದಾರೆ ಎಂದು ಪ್ರಕಾಶ್ ಸಭೆಯ ಗಮನಕ್ಕೆ ತಂದ ಸಂದರ್ಭದಲ್ಲಿ ಶಾಸಕರೇ ಈ ಬಗ್ಗೆ ಸ್ಪಷ್ಟನೆ ನೀಡಿ ಇಂದು ಪುರಸಭೆ ವತಿಯಿಂದ ಆಟೋಗಳನ್ನು ಖರೀದಿಸಿ ಮನೆ ಮನೆಗೆ ಬಕೆಟ್ಗಳನ್ನು ನೀಡಿರುವುದರಿಂದ ಕೆಲವರು ಕಾರ್ಯ ನಿರ್ವಹಿಸಲು ಮುಂದೆ ಬಂದಿದ್ದಾರೆ. ಹಿಂದೆ ಸ್ವಂತ ಆಟೋದಲ್ಲಿ ಮನೆ ಮನೆ ಕಸ ವಿಲೇವಾರಿಯ ಜವಾಬ್ದಾರಿ ಹೊತ್ತವರಿಗೆ ಮಾರ್ಚ್ವರಗೆ ನೀಡುವಂತೆ ತಾವೇ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
ಬಾರ್ ತೆರವಿಗೆ ಆಗ್ರಹ: ರೇಣುಕಾಂಬ ರಸ್ತೆಯ ಪಕ್ಕದಲ್ಲಿ ಬಾರ್ಗಳು ತಲೆ ಎತ್ತಿರುವುದರಿಂದ ಅಲ್ಲಿನ ವಾಸಿಗಳಿಗೆ ತೊಂದರೆಯಾಗುತ್ತಿದ್ದು, ಅವುಗಳನ್ನು ಕೂಡಲೇ ಸ್ಥಳಾಂತರಿಸಬೇಕು. ಅವುಗಳನ್ನು ನಡೆಸಲು ಎಲ್ಲಿ ಸೂಕ್ತ ಪ್ರದೇಶಕ್ಕೆ ವರ್ಗಾಹಿಸಬೇಕು ಎಂದು ಅಧ್ಯಕ್ಷರ ಗಮನಕ್ಕೆ ತಂದ ಸಂದರ್ಭದಲ್ಲಿ ಅಧ್ಯಕ್ಷ ಮಂಜಣ್ಣ ಸ್ಥಳ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
22.75 ಅನುದಾನದಲ್ಲಿ ಶೌಚಾಲಯ ನಿರ್ಮಿಸಲು ಹಣ ಮಂಜೂರಾಗಿದ್ದರೂ ಅದನ್ನು ಬಳಕೆ ಮಾಡದಿರುವ ಬಗ್ಗೆ ಶಾಸಕ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿ ಪಟ್ಟಣದ ಶುಚಿತ್ವ ಕಾಪಾಡಲು ಸರ್ಕಾರದಿಂದ ಯಾವುದೇ ಅನುದಾನ ಬಂದರೂ ಅದನ್ನು ಬಳಕೆ ಮಾಡಿಕೊಳ್ಳದಿದ್ದರೆ ಉನ್ನತ ಅಧಿಕಾರಿಗಳಿಗೆ ತಾವೇ ದೂರು ನೀಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಸಿದರು. ಇದೇ ವೇಳೆ ಕೆ.ಜೆ ಸುರೇಶ್ ಅವರನ್ನು ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.