ಸರ್ಕಾರದ ಹೊಸ ಸುತ್ತೋಲೆಯಿಂದ ಅನ್ನಭಾಗ್ಯಕ್ಕೆ ಕುತ್ತು
ಕ.ಪ್ರ. ವಾರ್ತೆ ಹಾಸನ ಅ. 21
ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ರಾಜ್ಯ ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಪೈಕಿ ಅನ್ನಭಾಗ್ಯವೂ ಒಂದು. ಈ ಯೋಜನೆಯಡಿ ಅಕ್ಕಿ ಒದಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರ ಹಸಿರು ಕಾರ್ಡ್ ಕಡಿವಾಣಕ್ಕೆ ಮುಂದಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಗುಡುಗಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹೊಸ ಸುತ್ತೋಲೆ ಹೊರಡಿಸುವ ಮೂಲಕ ಅರ್ಹ ಫಲಾನುಭವಿಗಳ ಹಸಿರು ಕಾರ್ಡ್ ತಪ್ಪಿಸುವ ಕೃತ್ಯಕ್ಕೆ ಮುಂದಾಗಿದೆ. ಇದರಿಂದ ಮುಂದಿನ ಲೋಕಸಭಾ ಚುನಾವಣೆ ನಂತರ ಬಡ ಕುಟುಂಬಗಳು ಅನ್ನಭಾಗ್ಯ ಯೋಜನೆಯಿಂದ ವಂಚಿತವಾಗಲಿವೆ. ರಾಜ್ಯ ಸರ್ಕಾರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಅನ್ನಭಾಗ್ಯ ಯೋಜನೆಯನ್ನು ಪ್ರಾರಂಭಿಸಿ ಕೆಲವೇ ತಿಂಗಳಲ್ಲಿ ಅರ್ಹ ಫಲಾನುಭವಿಗಳನ್ನು ಈ ಯೋಜನೆಯಿಂದ ವಂಚಿತರನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ 3.71 ಲಕ್ಷ ಬಿಪಿಎಲ್ ಕಾರ್ಡ್‌ದಾರರು, 23,481 ಮಂದಿ ಅಂತ್ಯೋದಯ ಕಾರ್ಡ್‌ದಾರರು, 44,900 ಎಪಿಎಲ್ ಕಾರ್ಡ್‌ದಾರರಿದ್ದು, 87,554 ಮಂದಿ ಎಪಿಎಲ್ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 21,916 ಮಂದಿಗೆ ಕಾರ್ಡ್‌ನ್ನು ನೀಡಲಾಗಿದೆ. ಉಳಿದಂತೆ 58,638 ಅರ್ಜಿಗಳು ಪರಿಶೀಲನೆಯ ಹಂತದಲ್ಲಿದೆ. ಒಟ್ಟಾರೆಯಾಗಿ 4,11 ಲಕ್ಷ ಅರ್ಹ ಫಲಾನುಭವಿಗಳಾಗಿದೆ. ಸರ್ಕಾರದ ಹೊಸ ಸುತ್ತೋಲೆಯಿಂದ ಶೇ.90ರಷ್ಟು ಮಂದಿ ಈ ಯೋಜನೆಯಿಂದ ವಂಚಿತರಾಗಲಿದ್ದಾರೆ ಎಂದು ದೂರಿದರು. ಸರ್ಕಾರ ಅನ್ನಭಾಗ್ಯ ಯೋಜನೆ ನೀಡಲು ಸಾಧ್ಯವಾಗದೆ ಪರಿಶೀಲನ ನೆಪ ಹೇಳಿ ಶೇ.80 ರಿಂದ 90ರಷ್ಟು ಭಾಗ ಹಸಿರು ಕಾರ್ಡ್‌ಗಳನ್ನು ರದ್ದು ಮಾಡಿ ಕೇವಲ ಶೇ.10ರಿಂದ 20ರಷ್ಟು ಮಂದಿಗೆ ಮಾತ್ರ ನೀಡಲು ಸಂಚು ಮಾಡಿದೆ ಎಂದು ದೂರಿದ ಅವರು, ದೇವೇಗೌಡರ ಕಾಲದಲ್ಲಿ ಕೇವಲ ಮಹಾತ್ಮಗಾಂಧಿಜೀಯ ಭಾವಚಿತ್ರ ಹಾಗೂ 50 ಪೈಸೆಯ ಕಾರ್ಡ್ ನ್ನು ನೀಡಿ ಕೆಜೆಗೆ 3 ರು.ನಂತೆ ಅಕ್ಕಿಯನ್ನು ನೀಡಲಾಗುತ್ತಿತ್ತು ಎಂದು ಹೇಳಿದರು.
100 - 150ಲೋಡ್ ಮರಳು ಸಾಗಾಣಿಕೆ: ಹೊಳೆನರಸೀಪುರ ತಾಲೂಕಿನಲ್ಲಿ ಅಕ್ರಮ ಮರಳನ್ನು ಸಾಗಿಸಲಾಗುತ್ತಿದ್ದು, ಪ್ರತಿನಿತ್ಯ ಸುಮಾರು 100 ರಿಂದ 150 ಲೋಡ್ ಅಕ್ರಮ ಮರಳು ಸಾಗಾಣಿಕೆಯಾಗುತ್ತಿದೆ. ಈ ಅಕ್ರಮ ಅಧಿಕಾರಿಗಳು ತಡೆಯಲು ಮುಂದಾಗುತ್ತಿಲ್ಲ ಎಂದು ದೂರಿದರು.
ಬಿಜೆಪಿ ಸರ್ಕಾರದ ಅಧಿಕಾರದಲ್ಲಿ ಶಾಸಕರ ಅನುದಾನದ ಎರಡು ಕೋಟಿ ರು.ಗಳಲ್ಲಿ ಸ್ವಲ್ಪಮಟ್ಟಿಗೆ ಹಣವನ್ನು ಬಿಡುಗಡೆ ಮಾಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದಿದ್ದು, ಕೇವಲ 50 ಲಕ್ಷ ರು. ಅನುದಾನ ಮಾತ್ರ ನೀಡಿದೆ. ಇದರಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಗುತ್ತಿದೆ ಎಂದು ಆರೋಪಿಸಿದರು.
2006ರಿಂದ ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸುವ ಬದಲು 2000ನೇ ಇಸವಿಯಿಂದ ಪ್ರಸ್ತುತದವರೆಗೆ ನಡೆದಿರುವ ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆಯಾಗಲಿ ಎಂದು ಆಗ್ರಹಿಸಿದರು. ಹಿಂದುಳಿದವರಿಗೆ ನೀಡಬೇಕಾದ ಸಾಲ ಯೋಜನೆಯ ಹಣ ಸರ್ಕಾರ ಇನ್ನು ಬ್ಯಾಂಕಿಗೆ ಹಣ ಸಂದಾಯ ಮಾಡಿಲ್ಲ. ಹಣಕಾಸು ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಸುತ್ತೋಲೆ ವಾಪಸ್ ಪಡೆಯಲಿ: ರಾಜ್ಯ ಸರ್ಕಾರ ಹಸಿರು ಕಾರ್ಡ್‌ಗಳನ್ನು ಅರ್ಹ ಫಲಾನುಭವಿಗಳಿಂದ ಕಸಿದು ಕೊಳ್ಳುವ ಉದ್ದೇಶದಿಂದ ಹೊರಡಿಸಿರುವಂಥ ಸುತ್ತೋಲೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಮಾಹಿತಿ ನೀಡದೆ ಸಿಎಂ ದಾರಿ ತಪ್ಪಿಸುತ್ತಿರುವ ಅಧಿಕಾರಿಗಳು
ಮುಖ್ಯಮಂತ್ರಿಗಳಿಗೆ ಗ್ರಾಮೀಣ ಬಡ ಜನರ ಕಷ್ಟ ಕಾರ್ಪಣ್ಯಗಳ ಬಗ್ಗೆ ಸರಿಯಾಗಿ ಮಾಹಿತಿಯನ್ನು ಅಧಿಕಾರಿಗಳು ನೀಡದೆ ದಾರಿ ತಪ್ಪಿಸುತ್ತಿದ್ದಾರೆ ಎಂದ ಅವರು, ಜಿಲ್ಲಾಧಿಕಾರಿ, ತಹಸೀಲ್ದಾರ್‌ಗಳಿಗೆ ಜವಾಬ್ದಾರಿ ನೀಡಿ ಪರಿಶೀಲನಾ ಕೆಲಸಕ್ಕೆ ಅವಕಾಶ ಮಾಡಿಕೊಡಬೇಕು. ಆಗ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ಲಭ್ಯವಾಗಲಿದೆ. ಅದನ್ನು ಬಿಟ್ಟು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗುತ್ತಿರುವುದರಿಂದ ರಾಜ್ಯದಲ್ಲಿ ಚುನಾವಣೆಯ ಲಾಭಕ್ಕೆ ಮುಂದಾಗುವ ಮೂಲಕ ಸರ್ಕಾರಿ ಕೆಲಸ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ನುಡಿದರು.