ಆರೋಗ್ಯ ಮೇಳ ಸಾಮಾನ್ಯ ಜನರಿಗೆ ಹೆಚ್ಚು ಅನುಕೂಲ
ಚನ್ನರಾಯಪಟ್ಟಣ: ಸಾರ್ವಜನಿಕವಾಗಿ ಏರ್ಪಡಿಸುವ ಆರೋಗ್ಯ ಮೇಳಗಳು ಜನಸಾಮಾನ್ಯರಿಗೆ ಆಗುವ ಅನಾಹುತಗಳನ್ನು ತಪ್ಪಿಸುತ್ತವೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪೇಟೆ ಶಾಲಾ ಆವರಣದಲ್ಲಿ ಪ್ರಸನ್ನ ಗಣಪತಿ ಸೇವಾ ಸಮಿತಿ, ಬಿಜಿಎಸ್ ಆಸ್ಪತ್ರೆ ಬಿಜಿ ನಗರ ಹಾಗೂ ಅಪೋಲೋ ಆಸ್ಪತ್ರೆ ಮೈಸೂರು ವತಿಯಿಂದ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನತೆಗೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಷ್ಟು ಆರ್ಥಿಕ ಸ್ಥಿತಿ ವಂತರಾಗಿರುವುದಿಲ್ಲ. ಅವರು ಇಂಥ ಆರೋಗ್ಯ ಮೇಳ ಅಥವಾ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ತಮ್ಮಲ್ಲಿರುವ ರೋಗಗಳನ್ನು ತಿಳಿದರೆ ಅದರಿಂದ ಎಚ್ಚರಿಕೆ ವಹಿಸಿ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳನ್ನು ತಡೆಯಬಹುದಾಗಿದೆ ಎಂದು ಹೇಳಿದರು.
ಆರೋಗ್ಯದಿಂದ ಏನೆಲ್ಲ ಸಾಧ್ಯ: ಮನುಷ್ಯ ಇಂದು ಏನೆಲ್ಲಾ ಪಡೆಯಬಹುದಾಗಿದೆ. ಆದರೆ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಅವನು ಪಡೆದುದ್ದಕ್ಕೆ ಸಾರ್ಥಕತೆ ಸಿಗುತ್ತದೆ. ಈ ನಿಟ್ಟಿನಲ್ಲಿ ಜನತೆ ಹಣ ಗಳಿಕೆಯ ಜತೆ ಜತೆಯಲ್ಲಿಯೇ ಆರೋಗ್ಯವನ್ನೂ ಕಾಪಾಡಿಕೊಂಡು ಹೋಗಬೇಕು ಎಂದರು.
ಸಮಾಜದಲ್ಲಿ ಯುವ ಜನಾಂಗದ ಜವಾಬ್ದಾರಿ ಹೆಚ್ಚಿದ್ದು, ಅವರು ದೇಶದ ಅಭಿವೃದ್ಧಿ ಹಾಗೂ ಉಳಿವಿನ ಜವಬ್ದಾರಿಯನ್ನು ಹೊರಬೇಕಾಗಿದ್ದು, ಹಿರಿಯರ ಸಲಹೆಗಳನ್ನು ಪಡೆದು ಯುವಕರು ಮುನ್ನಡೆಯಬೇಕು ಎಂದು ತಿಳಿಸಿದರು.
ಹಿರಿಯರ ಅರಿವು ಮತ್ತು ಅವರ ಸಲಹೆ ಸಮಾಜಕ್ಕೆ ಅತ್ಯಗತ್ಯವಾಗಿದ್ದು, ಅವರ ಅನುಭವವೇ ಯುವ ಜನಾಂಗಕ್ಕೆ ದಾರಿದೀಪವಾಗಿರುವುದರಿಂದ ಹಿರಿಯರನ್ನು ನಿರ್ಲಕ್ಷ ಮಾಡಬಾರದು ಎಂದರು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಆಶೀರ್ವಚಿಸಿ ಆರೋಗ್ಯ, ಪರಿಸರ ಹಾಗೂ ಶಿಕ್ಷಣ ಈ ಮೂರು ಅಂಶಗಳಿಗೆ ತಮ್ಮ ಮಠ ಅತ್ಯಂತ ಆಸಕ್ತಿ ನೀಡಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ. ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಮಠದ ವತಿಯಿಂದ ಗಿಡ ಮರಗಳನ್ನು ಬೆಳೆಸುವುದು ಸಸಿಗಳನ್ನು ನೀಡುತ್ತಾ ಬಂದಿರುವುದಲ್ಲದೆ, ಹಲವು ವಿದ್ಯಾ ಸಂಸ್ಥೆಗಳನ್ನು ತೆರೆದು ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶುದ್ಧ ನೀರನ್ನು ಕುಡಿಯದ ಕಾರಣ ಜನತೆಯಲ್ಲಿ ಹಲವು ರೋಗಗಳು ಕಾಣಿಸಿಕೊಳ್ಳುತ್ತಿದ್ದು, ತಾಲೂಕಿನಲ್ಲಿ ಪ್ಲೋರೈಡ್ ಅಂಶವಿರುವ ನೀರನ್ನು ಜನತೆ ಕುಡಿಯುತ್ತಿರುವುದರಿಂದ ರೋಗಗಳು ಉಲ್ಬಣಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹೇಮಾವತಿ ನದಿಯ ನೀರನ್ನು ತಾಲೂಕಿನ ದೊಡ್ಡ ದೊಡ್ಡ ಕೆರೆಗಳಿಗೆ ತುಂಬಿಸಿ ಅಂತರ್ಜಲ ಮಟ್ಟವನ್ನು ಸುಧಾರಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಆರೋಗ್ಯ ಶಿಬಿರಕ್ಕೆ ಆಗಮಿಸಿ ವೈದ್ಯರು ನೀಡುವ ಸಲಹೆಯಂತೆ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇದರ ಜತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬಿಜಿ ನಗರದ ಆಸ್ಪತ್ರೆಗೆ ತಮ್ಮ ವಾಹನದಲ್ಲಿ ಕರೆದೊಯ್ಯುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸುಧಾರಣೆಗೆ ಮನೆಯ ಸುತ್ತ ಮುತ್ತಲಿನ ಪರಿಸರ ಕಾಪಾಡಿಕೊಂಡು ಹೋಗಬೇಕು.
ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ 10 ಸಾವಿರಕ್ಕೂ ಅಧಿಕ ಧನಸಹಾಯ ಮಾಡುತ್ತಿದ್ದು, ಜನತೆ ಅದರ ಲಾಭ ಪಡೆದು ಆರೋಗ್ಯವನ್ನು ಕಾಪಾಡಿಕೊಂಡು ಹೋಗಬೇಕು ಎಂದು ತಿಳಿಸಿದರು.
ಅರಕಲಗೂಡು ತಾಲೂಕು ಕೆಸತ್ತೂರು ಮಠದ ಶಿವಲಿಂಗ ಸ್ವಾಮೀಜಿ, ತಹಸೀಲ್ದಾರ್ ಡಾ. ನಾಗರಾಜು, ಪುರಸಭಾಧ್ಯಕ್ಷ ಮಂಜಣ್ಣ,
ಬಿಜೆಪಿ ಮುಖಂಡ ಪಟೇಲ್ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಸ್ವಾಮಿ, ಗಣಪತಿ ಸೇವಾ ಸಮಿತಿ ಅಧ್ಯಕ್ಷ ಅಶೋಕ್ ಉಪಸ್ಥಿತರಿದ್ದರು.
ಅಪಘಾತದಲ್ಲಿ ಲಾರಿಗಳು ಜಖಂ: ಚಾಲಕರಿಗೆ ಗಾಯ
ಸಕಲೇಶಪವುರ: ಪಟ್ಟಣದ ತೇಜಸ್ವಿನಿ ಚಿತ್ರಮಂದಿರ ಸಮೀಪ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಲಕರು ಮಾರಣಾಂತಿಕವಾಗಿ ಗಾಯಗೊಂಡು, ಎರಡೂ ಲಾರಿಗಳು ನಜ್ಜುಗುಜ್ಜಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಮರಳು ಹಾಗೂ ಸೌದೆ ತುಂಬಿದ ಲಾರಿಗಳು ನಡುವೆ ಅಪಘಾತ ನಡೆದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚಿನಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು, ಲಾರಿಯಲ್ಲಿ ಸಿಲುಕಿದ್ದ ಲಾರಿ ಚಾಲಕನನ್ನು ಸಾರ್ವಜನಿಕರು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ಮೂಲಕ ಮನಾವಿಯತೆ ಮೆರೆದಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
---
ಹೊರಗುಳಿದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಸಮೀಕ್ಷೆ
ಅರಕಲಗೂಡು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕಡ್ಡಾಯ ಶಿಕ್ಷಣ ವ್ಯಾಪ್ತಿಗೆ ಒಳಪಡಿಸುವ ಉದ್ದೇಶದಿಂದ ತಾಲೂಕಿನಲ್ಲಿ ಎರಡು ಹಂತದಲ್ಲಿ ಸಮೀಕ್ಷಾ ಕಾರ್ಯ ನಡೆಸುವುದಾಗಿ ಬಿ.ಇ.ಓ. ರೇವಣ್ಣ ತಿಳಿಸಿದರು. ಪಟ್ಟಣದಲ್ಲಿ ತಹಸೀಲ್ದಾರ್ ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಸರ್ಕಾರ ಮತ್ತು ನ್ಯಾಯಾಲಯ 6ರಿಂದ 16ರ ವಯೋವಾನದೊಳಗಿನ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗ ಕೂಡದು ಎಂಬ ಆದೇಶ ಇತ್ತಿದೆ. ಹಾಗಾಗಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಎರಡು ಹಂತದಲ್ಲಿ ಸಮೀಕ್ಷೆ ಮಾಡಲಾಗುವುದು. ನ. 6 ಮತ್ತು 7ರಂದು ಮೊದಲ ಹಂತದ ಶಾಲಾ ಸಮೀಕ್ಷೆಯಲ್ಲಿ ಶಾಲೆಗೆ ಸೇರಿದ ಮಕ್ಕಳ ಹಾಜರಾತಿ ಪುಸ್ತಕ ಪರಿಶೀಲಿಸಿ ಹೊರಗುಳಿದ ಮಕ್ಕಳ ಹೆಸರು ಪಟ್ಟಿ ಮಾಡಲಾಗುವುದು. ನಂತರ ಶಾಲಾ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ಅಂತಹ ಮಕ್ಕಳನ್ನು ಗುರುತಿಸಿ ಪುನಾ ಶಾಲಾ ವ್ಯಾಪ್ತಿಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ನ.13ರಿಂದ 17ವರೆಗೆ ನಡೆಯ ಲಿರುವ ಎರಡನೇ ಹಂತದ ಕುಟುಂಬ ಸಮೀಕ್ಷೆಯಲ್ಲಿ ಯಾವ ಕುಟುಂಬದಲ್ಲಿ ಎಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬುದರ ಕುರಿತು ಸಮಗ್ರ ಮಾಹಿತಿ ಕಲೆ ಹಾಕಲಾಗುವುದು. ಇದಲ್ಲದೇ ಸಾಮಾನ್ಯ ಮತ್ತು ತೀರ ಹಿಂದುಳಿದ ಪ್ರದೇಶದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಇಲಾಖೇತರ ತಂಡಗಳನ್ನು ರಚಿಸುವ ಮೂಲಕ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕಲ್ಪಿಸಲು ಪ್ರಯತ್ನಿಸಲಾಗುವುದು. ಸಮೀಕ್ಷಾ ಕಾರ್ಯಕ್ಕೆ ನಾನಾ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ತಾಪಂ ಇಓ ಶಿವರಾಂ, ಡಯಟ್ ಉಪನ್ಯಾಸಕ ಶಿವರಾಜ್, ಪಪಂ ಮುಖ್ಯಾಧಿಕಾರಿ ಸುರೇಶ್ಬಾಬು, ಡಾ. ಸ್ವಾಮಿಗೌಡ, ಸಿಡಿಪಿಓ ಮಲ್ಲೇಗೌಡ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜು, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಬಸವರಾಜು ಮತ್ತು ನಾನಾ ಇಲಾಖೆ ಅಧಿಕಾರಿಗಳು ಇದ್ದರು.
ದೇವಾಲಯ ಇತಿಹಾಸ ಅಭ್ಯಸಿಸಿದ ವಿದ್ಯಾರ್ಥಿಗಳು
ಹಾರನಹಳ್ಳಿ: ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಮಾರಕ ಸಂರಕ್ಷಣೆ ವೇದಿಕೆ ವಿದ್ಯಾರ್ಥಿಗಳಿಂದ ಐತಿಹಾಸಿಕ ಪರಂಪರಾ ಕೂಟ ಹಾರನಹಳ್ಳಿ ಚೆನ್ನಕೇಶವ ಸೋಮೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ಇತಿಹಾಸವನ್ನು ಅಭ್ಯಸಿದರು. ಹಾರನಹಳ್ಳಿ ಸ್ಮಾರಕ ಶಾಸನಗಳನ್ನು ವಿಕ್ಷೀಸಿ ಪ್ರಾಂಶುಪಾಲ ಎಂ.ಬಿ.ಇರ್ಷಾದ್ ಮಾತಾಡಿ ಹಾರನಹಳ್ಳಿ ಚೆನ್ನಕೇಶವ ಸೋಮೇಶ್ವರ ದೇವಾಲಯಗಳು 12ನೇ ಶತಮಾನದಲ್ಲಿ ಹೊಯ್ಸಳರ ದೊರೆ ಸೋಮೇಶ್ವರ ಕಾಲದಲ್ಲಿ ನಿರ್ಮಿಸಿದ ಅಪರೂಪ ಶಿಲ್ಪಕಲೆ ದೇವಾಲಯವಾಗಿದೆ. 12 ನೇ ಶತಮಾನದ ಸಮಾಜಿಕ ಚಿತ್ರಗಳನ್ನು ಶಿಲ್ಪಿ ಅತ್ಯುತ್ತಮವಾಗಿ ಕೆತ್ತನೆ ಮಾಡಿ ದೇವಾಲಯ ವಿಗ್ರಹಗಳು ಹಾಗೂ ನವರಂಗಗಳ ಕೆತ್ತನೆ ಅದ್ಭುತವಾಗಿದೆ.
ಹೀಗೆ ಜಿಲ್ಲೆಯ ಎಲ್ಲಾ ಪ್ರಾಚೀನ ಪರಂಪರೆ ದೇವಾಲಯಗಳ ವೀಕ್ಷಣೆ ಹಾಗೂ ದೇವಾಲಯಗಳ ಇತಿಹಾಸ ಬಗ್ಗೆ ಮಾಹಿತಿ ನೀಡವ ಕಾರ್ಯಕ್ರಮಗಳನ್ನು ಕಳೆದ 1 ದಶಕಗಳಿಂದಲೂ ಪರಂಪರೆ ಕೂಟಗಳನ್ನು ಆಯೋಜಿಸಿ ವಿದ್ಯರ್ಥಿಗಳಿಗೆ ಅರಿವೂ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಸೋಮೇಶ್ವರ ದೇವಾಲಯ ಸ್ವಚ್ಛತೆಯನ್ನು ಎನ್ಎನ್ಎಸ್ ವಿದ್ಯಾರ್ಥಿಗಳಿಂದ ಶ್ರಮದಾನ ಮಾಡಿಸುದಾಗಿ ತಿಳಿಸಿದ್ದಾರೆ.ತಾಲೂಕು ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ ಅಧ್ಯಕ್ಷ ಹಾರಹನಹಳ್ಳಿ ನಾಗೇಂದ್ರ ಹಾರನಹಳ್ಳಿಯಲ್ಲಿ ಅನೇಕ ಪ್ರಾಚೀನ ಕಾಲದ ಸ್ಮಾರಕಗಳು ಕೋಟೆಗಳು ಕೊತ್ತಲುಗಳು ನಾವು ಕಾಣಬಹುದಾಗಿದೆ ಎಂದು ಹೇಳಿದರು.