ಕೇಸರಿ ಬದಲು ಹಸಿರು ಶಾಲು ಹೊದ್ದು ಭ್ರಷ್ಟಾಚಾರ
ಕ.ಪ್ರ. ವಾರ್ತೆ ಹಾಸನ ಅ 22
2008 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ದಿನದಿಂದ 5 ವರ್ಷ ಭ್ರಷ್ಟಾಚಾರ ರಾಜ್ಯವಾಗಿ ಪರಿವರ್ತನೆ ಗೊಂಡಿದ್ದು ದುರಂತ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಟೀಕಾ ಪ್ರಹಾರ ನಡೆಸಿದರು.
ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ರಾಜ್ಯವನ್ನು ವಿಶ್ವವೇ ಕರ್ನಾಟಕದತ್ತ ನೋಡುವಂತೆ ಮಾಡಿದ್ದರು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭ್ರಷ್ಟತೆಯಿಂದ ರಾಜ್ಯ 14ನೇ ಸ್ಥಾನಕ್ಕೆ ಕುಸಿಯಿತು ಎಂದು ಕಿಡಿಕಾರಿದರು.
ಬಿಜೆಪಿ ತನ್ನದೇ ತತ್ವ ಸಿದ್ದಾಂತ ಹೊಂದಿದ್ದು, ವಿಭಿನ್ನವಾಗಿದೆ ಎಂದು ಹೇಳುತ್ತಿದ್ದರು. ಆದರೆ ನಮಗೆ ಆಗ ಆಶ್ಚರ್ಯವಾಯಿತು. ಯಡಿಯೂರಪ್ಪನವರು ಕೇಸರಿ ಶಾಲು ಹಾಕಿಕೊಂಡು ಅಧಿಕಾರ ಸ್ವೀಕರಿಸದೇ ಹಸಿರು ಶಾಲು ಹಾಕಿಕೊಂಡು ಅಧಿಕಾರ ಸ್ವೀಕರಿಸುವ ಮೂಲಕ ಅವರ ಬಣ್ಣ ಬದಲಿಸಿದ್ದರು. ಹೀಗೆ ರಾಜ್ಯವನ್ನು ಭ್ರಷ್ಟ ರಾಜ್ಯವನ್ನಾಗಿ ಮಾಡಿದ್ದೇ ಅವರ ಪಕ್ಷದ ತತ್ವ ಸಿದ್ದಾಂತವಾಗಿತ್ತು ಎಂದು ಲೇವಡಿ ಮಾಡಿದರು. 21 ದಿನಗಳ ಕಾಲ ಬಳ್ಳಾರಿವರಿಗೆ ಕಾಂಗ್ರೆಸ್ ಕಾಲ್ನಡೆಗೆ ಮೂಲಕ ಪಾದಯಾತ್ರೆ ನಡೆಸಿತು. ಕಾಂಗ್ರೆಸ್ ನಡಿಗೆ ಕೃಷ್ಣದೆಡೆಗೆ, ಜಾತಿ ಧರ್ಮದ ಆಧಾರ ಮೇಲೆ ಸಮಾಜವನ್ನು ಇಬ್ಭಾಗಿಸುವುದನ್ನು ಖಂಡಿಸಿ ಉಲ್ಲಾಳದಿಂದ ಉಡುಪಿಯವರೆಗೆ ಪಾದಚಾತ್ರೆ ನಡೆಸುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಸಾಕಷ್ಟು ಹೋರಾಟಗಳನ್ನು ಮಾಡಲಾಯಿತು. ಅದರ ಫಲವಾಗಿ ರಾಜ್ಯದ ಜನತೆ ವಿಧಾನಸಭೆ ಚುನಾವಣೆಯಲ್ಲಿ 122 ಸ್ಥಾನದಲ್ಲಿ ಕಾಂಗ್ರೆಸ್ನ್ನು ಗೆಲ್ಲಿಸಿಕೊಟ್ಟಿದ್ದಾರೆ. ಮತದಾರರನ್ನು ಅಭಿನಂದಿಸುತ್ತೇನೆ ಎಂದರು.
ಹಾಸನ ಟಾರ್ಗೆಟ್: ದೇವೇಗೌಡರು ವಯಸ್ಸಿನಲ್ಲಿ ಹಿರಿಯರಾಗಿದ್ದು, ಅವರ ಹಿರಿತನಕ್ಕೆ ಗೌರವ ನೀಡುತ್ತೇವೆ. ಆದರೆ ರಾಜಕೀಯದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಉಪ ಚುನಾವಣೆಯಲ್ಲಿ ಗೆದ್ದಿದ್ದೇವೆ. ಮುಂದೆ ನಮಗೆ ಹಾಸನ ಜಿಲ್ಲೆ ಟಾರ್ಗೇಟ್. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ವಂತ ಬಲದಿಂದ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ಹೇಳಿದರು. ನಾವು ಜೆಡಿಎಸ್ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಈಗಾಗಲೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದು, ನಾವು ಸ್ವಂತ ಬಲದಿಂದ ಚುನಾವಣೆಗೆ ಹೋಗುತ್ತೇವೆ ಅಂತ. ಆದ್ದರಿಂದ ಈ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಅನುಮಾನಗಳು ಬೇಡ ಎಂದು ಸ್ವಷ್ಟಪಡಿಸಿದರು. ದೇಶದಲ್ಲಿ ಬದಲಾವಣೆ ಬರಬೇಕಾದರೆ ಯುವ ನಾಯಕ ರಾಹುಲ್ಗಾಂಧಿ ಅವರನ್ನು ಜನತೆ ಬೆಂಬಲಿಸಬೇಕೆಂದು ಮನವಿ ಮಾಡಿದರು.
ನೀರಾವರಿಗೆ 10 ಸಾವಿರ ಕೋಟಿ ಮೀಸಲು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣೆ ಪ್ರನಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಸಾಧಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಕೂಡಲ ಸಂಗಮದಲ್ಲಿ ಸಿದ್ದರಾಮಯ್ಯ ಮತ್ತು ನಾನು ತೆಂಗಿನ ಕಾಯಿ ಹಿಡಿದು ಪ್ರತಿ ವರ್ಷ ನೀರಾವರಿಗೆ 10 ಸಾವಿರ ಕೋಟಿ ರು.ಗಳನ್ನು ಮೀಸಲಿಡುವುದಾಗಿ ಪ್ರಮಾಣ ಮಾಡಿದ್ದೇವು. ಅದರಂತೆ ಈ ಬಾರಿ ಬಜೆಟ್ನಲ್ಲಿ ನೀರಾವರಿಗಾಗಿ 10 ಸಾವಿರ ಕೋಟಿ ರು.ಗಳನ್ನು ಮೀಸಲು ಇಡಲಾಗಿದೆ ಎಂದು ತಿಳಿಸಿದರು.
ಸಚಿವ ಅಭಯಚಂದ್ರ ಜೈನ್, ಎಐಸಿಸಿ ಕಾರ್ಯದರ್ಶಿ ಸೆಲ್ವ ಕುಮಾರ್, ಶಾಸಕ ಎ.ಮಂಜು, ರುದ್ರೇಶ್ಗೌಡ, ಪ್ರೊ. ಚಂದ್ರಶೇಖರ್, ಮಲ್ಲಿಗೆ ವೀರೇಶ್, ಅಶ್ವಿನ್, ಮುಖಂಡರಾದ ವೇಣುಗೋಪಾಲ್, ಎಸ್.ಎಂ.ಆನಂದ್, ಎಚ್.ಕೆ.ಮಹೇಶ್, ಸಿ.ಎಸ್.ಪುಟ್ಟೇಗೌಡ, ಎಚ್.ಕೆ.ಜವರೇಗೌಡ ಇತರರು ಇದ್ದರು.
ವಂದಿಮಾಗಧರ ದೂರ ಇರಿಸೋದು ಸಿಎಂಗೇ ಬಿಟ್ಟಿದ್ದು: ಡಾ. ಪರಮೇಶ್ವರ್
ಹಾಸನ: ಕೆಲ ಸಾಹಿತಿಗಳು ಸೇರಿದಂತೆ ತಮ್ಮ ಸುತ್ತಮುತ್ತಲು ಇರುವ ಹೊಗಳುಭಟರ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುವ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇನೆ ಬಿಟ್ಟಿದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದರು.
ಸಾಹಿತಿ ಡಾ. ಯು.ಆರ್.ಅನಂತಮೂರ್ತಿ ಸೇರಿದಂತೆ ಸ್ವಜಾತಿ ಬಾಂಧವರು ಮತ್ತಿತರರು ಸಿಎಂ ಸುತ್ತಲೂ ಇದ್ದು, ಅನಾವಶ್ಯಕವಾಗಿ ಹೊಗಳಿ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದು ನಿಲ್ಲಬೇಕು ಎಂಬ ವಿಚಾರ ಸಿಎಂಗೆ ಬಿಟ್ಟಿದ್ದು ಎಂದರು.
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಿರಿಯ ಮುಖಂಡ ರಮೇಶ್ಕುಮಾರ್ ಅವರು ಐಟಿ ರಿಟರ್ನ್ ಇರುವವರಿಗೂ ಟಿಕೆಟ್ ನೀಡದೇ ಪ್ರಾಮಾಣಿಕರಿಗೆ ಅವಕಾಶ ನೀಡಬೇಕು ಎಂದು ನೀಡಿರುವ ಸಲಹೆಯನ್ನು ಪರಿಗಣಿಸುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಕುಗ್ಗಿಸುವುದಾಗಿ ಸವಾಲು ಹಾಕಿರುವ ಸವಾಲನ್ನು ಸ್ವೀಕರಿಸಿದ್ದು, ಜನರು ಬಳಿಗೆ ಅವರೂ ಹೋಗಲಿ ನಾವು ಹೋಗುತ್ತೇವೆ. ಯಾರನ್ನು ಬೆಂಬಲಿಸುತ್ತಾರೆ ನೋಡೋಣ ಎಂದು ಪರಮೇಶ್ವರ್ ಪ್ರತಿ ಸವಾಲು ಹಾಕಿದರು.
ಕಾಂಗ್ರೆಸ್ ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲಬೇಕು ಅಂತ ಹೊರಟಿದ್ದೇವೆ. ಚುನಾವಣೆಯಲ್ಲಿ ಮತದಾರರು ಯಾರನ್ನು ಗೆಲ್ಲಿಸಬೇಕು ಅನ್ನೋದನ್ನು ಮತದಾರರು ತೀರ್ಮಾನಿಸಲಿದ್ದಾರೆ. ಅವರ ತೀರ್ಪನ್ನು ಒಪ್ಪಲೇಬೇಕಾಗಿದೆ. ಈಗಾಗಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರ ಬಲ ಏನು ಅನ್ನೊಂದು ತಿಳಿದಿದೆ ಎಂದು ಹೇಳಿದರು.
ಜಿಲ್ಲೆ ಕಡೆಗಣಿಸುವುದಿಲ್ಲ: ಹಾಸನ ನಮ್ಮದು ಟಾರ್ಗೇಟ್ ಅಂತ ಅಭಿವೃದ್ಧಿ ದೃಷ್ಟಿಯಿಂದಲೇ ಹೇಳಿರುವಂತಹದು. ಹಾಸನ ಸೇರಿದಂತೆ ಇತರೆ ಯಾವುದೇ ಜಿಲ್ಲೆಯನ್ನು ಕಡೆಗಣಿಸುವುದಿಲ್ಲ. ಚುನಾವಣೆ ಪ್ರಳಾಣಿಕೆಯಲ್ಲಿ ಹೇಳಿದಂತೆ ಒಂದೊಂದೆ ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿದ ಅವರು, ಜಿಲ್ಲೆಯಲ್ಲಿನ ರಸ್ತೆ, ನೀರಾವರಿ ಯೋಜನೆಯ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದರು.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭ
ಬರುವ ಲೋಕಸಭೆ ಚುನಾವಣೆಗೆ ಪಕ್ಷ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕೂಡಲೇ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ದಪಡಿಸುವುದಾಗಿ ಹೇಳಿದ ಅವರು, ಚುನಾವಣೆಯ ತಯಾರಿಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕಾರಿಣಿ ಸಮಿತಿಯನ್ನು ಸ್ಥಾಪಿಸಿದ್ದು, ಈ ಮೂಲಕ ಸ್ಥಳೀಯ ಸಮಸ್ಯೆಗಳ ಬಗ್ಗೆ ದೀರ್ಘ ಚರ್ಚೆಯನ್ನು ನಡೆಸಿ ಅದನ್ನು ಪರಿಹರಿಸುವಂತಹ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಯಡಿಯೂರಪ್ಪನವರು ಕೇಸರಿ ಶಾಲು ಹಾಕಿಕೊಂಡು ಅಧಿಕಾರ ಸ್ವೀಕರಿಸದೇ ಹಸಿರು ಶಾಲು ಹಾಕಿಕೊಂಡು ಅಧಿಕಾರ ಸ್ವೀಕರಿಸುವ ಮೂಲಕ ಅವರ ಬಣ್ಣ ಬದಲಿಸಿದ್ದರು. ಹೀಗೆ ರಾಜ್ಯವನ್ನು ಭ್ರಷ್ಟ ರಾಜ್ಯವನ್ನಾಗಿ ಮಾಡಿದ್ದೇ ಅವರ ಪಕ್ಷದ ತತ್ವ ಸಿದ್ಧಾಂತವಾಗಿತ್ತು
-ಡಾ. ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ