ನಮ್ಮೂರ ಸೇವೆ ಸಂಘಟನೆಯಿಂದ ನಗರದಲ್ಲಿ ಸ್ವಚ್ಛತಾ ಆಂದೋಲನ
ಕನ್ನಡಪ್ರಭ ವಾರ್ತೆ ಹಾಸನ ಅ.22
ನಗರದ ನಮ್ಮೂರ ಸೇವೆ ಸಂಘಟನೆ ಹಾಗೂ ಪ್ರಗತಿ ನಗರದ ನಿವಾಸಿಗಳು ಸ್ವಚ್ಛತಾ ಆಂದೋಲನ ಕೈಗೊಂಡು ಪ್ರಗತಿ ನಗರದ ಮೂರನೇ ಮುಖ್ಯರಸ್ತೆ, ಆರನೇ ಅಡ್ಡರಸ್ತೆಯಲ್ಲಿರುವ ಆಟದ ಮೈದಾನ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಿದರು.
ಸಂಘಟಕರು ಆಟದ ಮೈದಾನದಲ್ಲಿ ಬೆಳೆದಿದ್ದ ಗಿಡ, ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು. ರಸ್ತೆಗಳ ಇಕ್ಕೆಲ್ಲಗಳಲ್ಲಿ ಬೆಳೆದಿದ್ದ ಪಾರ್ಥೇನಿಯಂ ಹಾಗೂ ಮುಳ್ಳು ಗಿಡಗಳನ್ನು ಕತ್ತರಿಸಿದರು.
ಕಸ, ಪ್ಲಾಸ್ಟಿಕ್, ಕಾಗದ ಸೇರಿದಂತೆ ಹಲವು ಅನುಪಯುಕ್ತ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಿ ನೀರು ಚರಂಡಿಯಲ್ಲಿ ಸರಾಗವಾಗಿ ಹೋಗುವಂತೆ ಮಾಡಿದರು. ಈ ಕಾರ್ಯದಲ್ಲಿ ನಮ್ಮೂರ ಸೇವೆ ಸಂಚಾಲಕ ರಾಜೀವಗೌಡ, ಪಂಜಾಬ್ ನ್ಯಾಷನಲ್ ಬ್ಯಾಂಕಿನ ರಮೇಶ್, ಇಂಜಿನಿಯರ್ ನಂದೀಶ್, ನಂಜುಂಡಸ್ವಾಮಿ, ಪ್ರಾಧ್ಯಾಪಕ ಹನುಮಂತರಾಯ, ವಕೀಲ ನಾಗೇಶ್‌ಗುಪ್ತ, ಡಾ. ಗಿರೀಶ್, ವಿದ್ಯಾಶಂಕರ್, ಮೋಹನ್‌ಕುಮಾರ್, ವಸಂತಕುಮಾರ್, ನಾಗೇಂದ್ರ ಸೇರಿದಂತೆ ಮಹಿಳೆಯರು, ಮಕ್ಕಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದರು.
ಹಾಸ್ಟೆಲ್ ನೌಕರರ ಜಿಲ್ಲಾ ಸಮಾವೇಶ
ಕನ್ನಡಪ್ರಭ ವಾರ್ತೆ ಹಾಸನ ಅ.22
ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ದಿನಗೂಲಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ದುಡಿಯಿತ್ತಿರುವ ನೌಕರರಿಗೆ ನಿಗದಿತ ಕನಿಷ್ಟ ವೇತನ, ಭವಿಷ್ಯ ನಿಧಿ, ಕೆಲಸ, ಭದ್ರತೆ, ಕಾಯಂ ಹಾಗೂ ಇನ್ನಿತರೆ ಸೇವಾ ಸೌಲಭ್ಯಗಳಿಗೆ ಆಗ್ರಹಿಸಿ, ಹಾಸನ ಜಿಲ್ಲಾ ಹಾಸ್ಟೆಲ್ ಹಾಗೂ ವಸತಿ ಶಾಲೆ ನೌಕರರು ಸಿಐಟಿಯು ನೇತೃತ್ವದಲ್ಲಿ ಜಿಲ್ಲಾ ಸಮಾವೇಶ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಿತು.
ಸಮಾವೇಶದಲ್ಲಿ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಉಪಾಧ್ಯಕ್ಷ ವಿ.ಸುಕುಮಾರ್ ಮಾತನಾಡಿ, ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ಮಾಡಿಸ ಬಾರದು. ಅವರನ್ನು ಕಾಯಂ ಮಾಡಿಕೊಳ್ಳುವ ಮೂಲಕ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರಸ್ತುತದಲ್ಲಿ ಎಲ್ಲಾ ವಿಭಾಗದಲ್ಲೂ ಗುತ್ತಿಗೆ ಪದ್ಧತಿ ನಡೆಯುತ್ತಿದೆ. ಇದು ಕಾನೂನಿನಲ್ಲಿ ಸಂಪೂರ್ಣ ಉಲ್ಲಂಘನೆ ಎಂದು ತಿಳಿದಿದ್ದರೂ ಇಂತಹ ಕಾರ್ಯ ನಿರಂತರವಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದರ ನಿವಾರಣೆಗಾಗಿ ಮೊದಲು ಕಾರ್ಮಿಕರು ಸಂಘಟಿತರಾಗುವ ಮೂಲಕ ಹೋರಾಟ ಮಾಡಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪುರುಷೋತ್ತಮ್, ಧರ್ಮೇಶ್, ಅರವಿಂದ್ ಇದ್ದರು.