ನಿಗದಿತ ಸ್ಥಳದಲ್ಲೇ ಆಟೋ ನಿಲುಗಡೆಗೆ ಎಸ್ಸೈ ಸೂಚನೆ
ಹಿರೀಸಾವೆ (ಚನ್ನರಾಯಪಟ್ಟಣ ತಾ.): ಇಲ್ಲಿನ ಶ್ರೀಕಂಠಯ್ಯ ವೃತ್ತ, ಬಸವೇಶ್ವರ ವೃತ್ತ ಹಾಗೂ ಡಾ. ಅಂಬೇಡ್ಕರ್ ವೃತ್ತ ಸೇರಿದಂತೆ ರಸ್ತೆಯ ಎರಡೂ ಬದಿಯಲ್ಲಿ ಸಿಕ್ಕಸಿಕ್ಕ ಕಡೆ ಆಟೋಗಳನ್ನು ನಿಲ್ಲಿಸುವಂತಿಲ್ಲ. ನಿಗದಿಪಡಿಸಿದ ಸ್ಥಳದಲ್ಲೇ ಆಟೋಗಳನ್ನು ನಿಲ್ಲಿಸಬೇಕು. ಪರವಾನಗಿ ಇಲ್ಲದೇ ಕುಡಿದು ಚಾಲನೆ ಮಾಡುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್ಐ ರೇಖಾಬಾಯಿ ಎಚ್ಚರಿಸಿದ್ದಾರೆ.
ಹಿರೀಸಾವೆಯಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಹಾಗೂ ಆಟೋ ಚಾಲಕರಿಗೆ ಯುನಿಫಾರಂ ಕಡ್ಡಾಯಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ. ಹಿರೀಸಾವೆ ಎಸ್ಐ ತಿಂಗಳ ಹಿಂದೆಯೇ ಆಟೋ ಚಾಲಕರನ್ನು ಠಾಣೆಗೆ ಕರೆಯಿಸಿ ಸಭೆ ನಡೆಸಿ ಅ.20ರೊಳಗೆ ಕಡ್ಡಾಯವಾಗಿ ಯೂನಿಫಾರಂ ಧರಿಸುವಂತೆ ಸೂಚಿಸಿದ್ದರು. ಅದರಂತೆ ಅವರು ನಿಗದಿಪಡಿಸಿದ್ದ ದಿನಾಂಕ ಮುಗಿದಿದ್ದು, ಅ.21 ರಿಂದ ಯೂನಿಫಾರಂ ಧರಿಸದ ಆಟೋ ಚಾಲಕರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಇನ್ನು ಇಷ್ಟು ದಿನ ಹೆಲ್ಮೆಟ್ ಇಲ್ಲದೇ ತಿರುಗಾಡುತ್ತಿದ್ದ ವಾಹನ ಸವಾರರು ನ.1 ರಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಬೈಕ್ ಸವಾರರು ಡ್ರೈವಿಂಗ್ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ಪೊಲೀಸರು ಪರಿಶೀಲಿಸಿದಾಗ ಅವುಗಳನ್ನು ತೋರಿಸಬೇಕು ಎಂದು ಹೇಳಿದ್ದಾರೆ. ಹಿರೀಸಾವೆ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವುದಲ್ಲದೇ, ಪ್ರವಾಸಿ ಸ್ಥಳ ಶ್ರವಣಬೆಳಗೊಳಕ್ಕೆ ತೆರಳುವ ಕೇಂದ್ರ ಸ್ಥಾನವಾಗಿದೆ. ಆದರೆ ಇಲ್ಲಿ ಎಲ್ಲೆಂದರಲ್ಲಿ ಬೈಕ್, ಲಾರಿ, ಆಟೋ ಸೇರಿದಂತೆ ಇತರೆ ವಾಹನಗಳನ್ನು ನಿಲ್ಲಿಸುತ್ತಿದ್ದರು. ಸೂಕ್ತ ಕ್ರಮಕ್ಕೆ ಮುಂದಾಗಿದ್ದು, ಟ್ರಾಫಿಕ್ ನಿರ್ವಹಣೆಗೆ ಇಬ್ಬರು ಪೊಲೀಸರನ್ನು ನಿಯೋಜಿಸಲು ಮುಂದಾಗಿದ್ದಾರೆ.