ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಸ್ತೆಯಲ್ಲಿ ಮಳೆ ನೀರು; ಸಂಚಾರಕ್ಕೆ ಕಿರಿಕಿರಿ

Srinivasa Murthy VN
Updated On : 23 Oct 2013, 12:34 pm

ಅರಕಲಗೂಡು: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಾಮನಾಥಪುರ ಪಟ್ಟಣದ ರಸ್ತೆಗಳಲ್ಲಿ ಮಳೆ ನೀರು ನಿಂತು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಕಟ್ಟೇಪುರ ನಾಲೆಯಿಂದ ಗದ್ದೆಗೆ ಹೆಚ್ಚಿನ ನೀರು ಬಿಡಲಾಗಿತ್ತು.
 ಈ ಹಿಂದೆ ಇದ್ದ ಮೋರಿಯನ್ನು ತೆಗೆದುಹಾಕಿ,  ಚಿಕ್ಕ ಕಾಲುವೆ ಮಾಡಲಾಗಿದ್ದು, ಚಿಕ್ಕದಾದ ಪೈಪನ್ನು ಅಳವಡಿಸಲಾಗಿದೆ. ಆದ್ದರಿಂದ ಮಳೆ ಬಿದ್ದಾಗ ನೀರಿನ ಒತ್ತಡ ಹೆಚ್ಚಾಗಿ ಪಟ್ಟಣದ ಮುಖ್ಯ ರಸ್ತೆಗಳಲ್ಲೂ ರಸ್ತೆಯಲ್ಲಿ ನೀರು ನಿಲ್ಲುವ ಪರಿಸ್ಥಿತಿ ಎದುರಾಗಿದೆ ಎಂದು ನಾಗರಿಕರು ದೂರಿದ್ದಾರೆ.
ಈ ಹಿಂದೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ ಧಾನ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿತ್ತು. ಕಟ್ಟೇಪುರ ನಾಲೆ ವ್ಯಾಪ್ತಿಗೆ ಬರುವುದರಿಂದ ನಾಲೆಯ ಕೆಳಭಾಗದಲ್ಲಿರುವ ಕಾಲುವೆಯನ್ನು ಅಗಲೀಕರಣಗೊಳಿಸಿ ಪಟ್ಟಣಕ್ಕೆ ನೀರು ಬರದಂತೆ ಮಾಡಿಸಬೇಕೆಂದು ನೀರಾವರಿ ಇಲಾಖೆ ಅಧಿಕಾರಿಗಳನ್ನು ಗ್ರಾಮದ ಮುಖಂಡ ಶ್ರೀನಿವಾಸ್ ಒತ್ತಾಯಿಸಿದ್ದಾರೆ. ರಾಮನಾಥಪುರ ಕೇರಳಾಪುರ ಮಧ್ಯೆ ಇರುವ ಕಾಳೇನಹಳ್ಳಿ ಗ್ರಾಮದ ಕೆರೆಯ ಬಳಿಯ ಸೇತುವೆಯಲ್ಲಿ ನೀರು ಹರಿಯಲು ಸಾಧ್ಯವಾಗದೇ ಪಕ್ಕದ ತೋಟದಲ್ಲಿ ಬಾಳೆ, ವೀಳ್ಯದಲೆ, ಭತ್ತ ಜಮೀನುಗಳಲ್ಲಿ ಯಥೇಚ್ಛ ನೀರು ಹರಿದು ಬೆಳೆ ಹಾಳಾಗಿವೆ. ಬೆಳವಾಡಿ ಗ್ರಾಮದ ಕೆರೆ ಭಾರಿ ಮಳೆಗೆ ಕೋಡಿ ಬಿದ್ದಿದೆ. ಇದರಿಂದ ಅಕ್ಕಪಕ್ಕದ ತೋಟ ಹಾಗೂ ಗದ್ದೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಒಟ್ಟಿನಲ್ಲಿ ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನತೆಉತ್ತಮ ಮಳೆಯಿಂದ ರೈತರು ಹಿಂಗಾರಿನಲ್ಲಿ ಮಾಡಿರುವ ತಮ್ಮ ಜಮೀನಿನಲ್ಲಿ ಬೆಳೆ ಕಡೆ ಹೆಚ್ಚಿನ ಜಾಗೃತರಾಗಿದ್ದಾರೆ.

ಲೋಕಾಯುಕ್ತ ಬಲೆಗೆ ಗ್ರಾಮ ಲೆಕ್ಕಿಗ
ಆಲೂರು: ಗ್ರಾಮ ಲೆಕ್ಕಿಗರೊಬ್ಬರು ಲಂಚ ಪಡೆಯುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ  ಸೋಮವಾರ ತಾಲೂಕಿನ ಅನಿಗಳಲೆ ಗ್ರಾಮ ಕಚೇರಿಯಲ್ಲಿ ನಡೆದಿದೆ. ಕೆ.ಹೊಸಕೋಟೆ ಹೋಬಳಿಯ ಅನಿಗಳಲೆ ಗ್ರಾಮದ ಪರಮೇಶ್ ಎಂಬುವರು ತಮ್ಮ ತಂದೆಯ ಹೆಸರಿನಲ್ಲಿರುವ ಜಮೀನಿನ ಖಾತೆಯನ್ನು ತನ್ನ ತಾಯಿಯ ಹೆಸರಿಗೆ ಬದಲಾವಣೆ ಮಾಡಿಸುವ ಸಲುವಾಗಿ ಗ್ರಾಮ ಲೆಕ್ಕಿಗ ರುದ್ರಸ್ವಾಮಿಯನ್ನು ಸಂಪರ್ಕಿಸಿದ್ದು, ಖಾತೆ ಬದಲಾವಣೆಗಾಗಿ ರುದ್ರಸ್ವಾಮಿ 5000 ರು. ಲಂಚ ನೀಡುವಂತೆ ಕೇಳಿದ್ದರು. ಮಧ್ಯಾಹ್ನ 12 ರ ಸುಮಾರಿಗೆ ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಲೋಕಾಯುಕ್ತ ಇನ್ಸ್‌ಪೆಕ್ಟರ್ ನರಸಿಂಹಮೂರ್ತಿ ಹಾಗೂ ಸಿಬ್ಬಂದಿಗೆ ಲಂಚ ಪಡೆಯುತ್ತಿದ್ದ ರುದ್ರಸ್ವಾಮಿ ಸಾಕ್ಷ್ಯ ಸಮೇತ ಸಿಕ್ಕಿ ಬಿದ್ದಿದ್ದಾರೆ. ಲಂಚದ ಹಣ ಹಾಗೂ ದಾಖಲೆಗಳನ್ನು ವಶ ಪಡಿಸಿಕೊಂಡ ಲೋಕಾಯುಕ್ತ ಪೊಲೀಸರು ರುದ್ರಸ್ವಾಮಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement