ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದಿನಿಂದ ಹಾಸನಾಂಬೆ ದರ್ಶನ

Srinivasa Murthy VN
Updated On : 24 Oct 2013, 12:13 pm

ಕನ್ನಡಪ್ರಭ ವಾರ್ತೆ ಹಾಸನ ಅ.23
ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಅಧಿದೇವತೆ ಹಾಸನಾಂಬೆ ದರ್ಶನ ಅ.24ರಿಂದ 13 ದಿನಗಳ ಕಾಲ ದೇವಾಲಯದ ಬಾಗಿಲು ತೆರೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ನಡೆಸಿದೆ.
ಅಶ್ವಯುಜ ಮಾಸದ ಪೂರ್ಣಿಮ ನಂತರ ಬರುವ ಗುರುವಾರದಂದು ಬಾಗಿಲು ತೆರೆದರೆ ಅನಂತರ ಬಲಿಪಾಡ್ಯಮಿ ಮಾರನೇ ದಿನವಾದ ನ.5ರಂದು ಬೆಳಗ್ಗೆ 7ಕ್ಕೆ ಬಾಗಿಲು ಮುಚ್ಚಲಾಗುತ್ತದೆ. 13 ದಿನಗಳು ದೇವಿಯ ದರ್ಶನಕ್ಕೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಮಧ್ಯಾಹ್ನ 12.30ಕ್ಕೆ ಹಾಸನಾಂಬೆ ಬಾಗಿಲನ್ನು ತೆರೆಯಲಾಗುವುದು. ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯಲು ಸುವ್ಯವಸ್ಥಿತ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು, ತುರ್ತು ದರ್ಶನ ಪಡೆಯುವುದಕ್ಕೆ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ದೇವಸ್ಥಾನದ ಹಿಂಭಾಗ ಹೊಸ ಲೈನ್ ರಸ್ತೆಯಿಂದ ಪ್ರವೇಶಿಸಲು ಪ್ರತ್ಯೇಕ ಬ್ಯಾರಿಕೇಡಿಂಗ್ ಇದೆ. ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಪ್ರತ್ಯೇಕವಾದ ಪ್ರವೇಶಕ್ಕೆ ಆದ್ಯತೆ ನೀಡಲಾಗಿದೆ.
ಮಜ್ಜಿಗೆ, ಕುಡಿಯುವ ನೀರು ಸೇರಿದಂತೆ ಇತರೆಗಳ ಗುಣಮಟ್ಟ ಕಾಪಾಡಲು ಆರೋಗ್ಯ ಇಲಾಖೆಯಿಂದ ತಂಡ ರಚನೆ ಮಾಡಲಾಗಿದೆ. ದೇವಿಯ ದರ್ಶನಕ್ಕೆ ಬರುವಂತಹ ಭಕ್ತಾದಿಗಳಿಗೆ ಅನುಕೂಲಕರವಾದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ಮರಳಿನ ಗಣಪತಿ ಈ ಬಾರಿಯ ವಿಶೇಷ: ಹಾಸನಾಂಬ ದೇವಾಲಯದ ಆವರಣದಲ್ಲಿ ದೇವಿಯ ದರ್ಶನಕ್ಕೆ ಬರುವಂತಹ ಭಕ್ತರಿಗೆ ಮೊದಲು ವಿನಾಯಕನ ದರ್ಶನ ನೀಡುವ ಉದ್ದೇಶದಿಂದ ಇದೇ ಪ್ರಥಮವಾಗಿ ಜಿಲ್ಲಾಡಳಿತದ ವತಿಯಿಂದ ಮರಳಿನಿಂದ ವಿನಾಯಕನ ಮೂರ್ತಿಯನ್ನು ಸಿದ್ಧಪಡಿಸಲಾಗುತ್ತಿದೆ. ಮೈಸೂರಿನ ಮರಳಿನಿಂದ ಮೂರ್ತಿಯನ್ನು ತಯಾರಿಸುವಂತಹ ಕಾಲವಿದೆ ಗೀತಾ ಅವರು ದೇವಾಲಯದ ಆವರಣದಲ್ಲಿ ಸಿದ್ಧಪಡಿಸಿದ್ದಾರೆ.

 ದೇವಿಯ ದರ್ಶನ ವೇಳೆ
ಅ.24ರಂದು ಮಧ್ಯಾಹ್ನ 12ಕ್ಕೆ ಬಾಗಿಲನ್ನು ತೆಗೆಯಲಾಗುವುದು. ನಂತರ ಸಂಪ್ರೋಕ್ಷಣೆ  ಕಾರ್ಯಕ್ರಮ ನಡೆಯಲಿದೆ. ಆದರೆ ಅಂದು ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ. ಅ.25ರಂದು ಬೆಳಗ್ಗೆ 6ರಿಂದ ಸಂಜೆ 4.30, ರಾತ್ರಿ 10.30ರಿಂದ ಮಧ್ಯರಾತ್ರಿ 12ರವರೆಗೆ ದರ್ಶನಕ್ಕೆ ಅವಕಾಶವಿದೆ. ಸಂಜೆ 4.30ರಿಂದ ರಾತ್ರಿ 10.30ರವರೆಗೆ ನೇವೈದ್ಯದ ಸಮಯ.
ಅ.26ರಿಂದ ನ.3ರವರೆಗೆ ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯಾಹ್ನ 1ರವರೆಗೆ, ಮಧ್ಯಾಹ್ನ 3ರಿಂದ  ರಾತ್ರಿ 10.30 ರವರೆಗೆ ದರ್ಶನಕ್ಕೆ ಅವಕಾಶವಿದೆ ಎಂದು ತಿಳಿಸಿರುವ ಅವರು, ಮಧ್ಯಾಹ್ನ 1ರಿಂದ, ಮಧ್ಯಾಹ್ನ 3ರವರೆಗೆ ನೈವೇದ್ಯದ ಸಮಯವಾಗಿದ್ದು, ಈ ಸಮಯದಲ್ಲಿ ಭಕ್ತರಿಗೆ ಅಮ್ಮನವರ ದರ್ಶನ ಇರುವುದಿಲ್ಲ ಎಂದು ಹೇಳಿದ್ದಾರೆ.
ನ.4ರ ದೀಪಾವಳಿ ಹಬ್ಬದ ದಿನ ಬೆಳಗ್ಗೆ 6ರಿಂದ ಸಂಜೆ 4.30ರವರೆಗೆ ಹಾಗೂ ರಾತ್ರಿ 10.30ರಿಂದ ಮಾರನೇ ದಿನ ಬೆಳಗ್ಗೆ 7ರವರೆಗೆ ದರ್ಶನಕ್ಕೆ ಅವಕಾಶವಿದೆ. ಇದೇ ದಿನ ರಾತ್ರಿ 10.30ಕ್ಕೆ ಸಿದ್ದೇಶ್ವರಸ್ವಾಮಿಯ ಚಂದ್ರಮಂಡಲ ರಥೋತ್ಸವವಿದೆ ಎಂದು ತಿಳಿಸಿದ್ದಾರೆ.
ನ.5ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕ ದರ್ಶನ ಇರುವುದಿಲ್ಲ. ಮಧ್ಯಾಹ್ನ 12.30ಕ್ಕೆ ದೇವಾಲಯದ ಬಾಗಿಲನ್ನು ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.
ವರ್ಷಕ್ಕೊಂದು ಬಾರಿ ಅಶ್ವಯುಜ ಮಾಸದ ಪೂರ್ಣಿಮ ನಂತರ ಬರುವ ದಿನದಂದು ಬಾಗಿಲು ತೆರೆದರೆ ಆನಂತರ ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚುವುದು. ಪುನಃ ಒಂದು ವರ್ಷದ ಕಾಲ ದೇವಿಯ ದರ್ಶನ ದೊರೆಯುವುದಿಲ್ಲ ಎಂದು ಹೇಳಿದ್ದಾರೆ.

ವಿಶೇಷತೆ

ದೇವಾಲಯದ ಬಾಗಿಲು ಮುಚ್ಚುವ ದಿನ ಹಚ್ಚಿದ ದೀಪವು ನಂದದೇ ಹಾಗೂ ಅಲಂಕರಿಸಿದ ಪುಷ್ಪಗಳು ಮುಂದಿನ ವರ್ಷ ಬಾಗಿಲು ತೆರೆಯುವ ತನಕ ಬಾಡದೇ ಇದ್ದು, ದೇವಿಯ ಗರ್ಭ ಗುಡಿಯಲ್ಲಿ ನಿರಂತರವಾಗಿ ದೀಪ ಉರಿಯುವುದು ಮಹಿಮೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement