ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕರಡಿ ದಾಳಿ; ರೈತನಿಗೆ ತೀವ್ರ ಗಾಯ

Srinivasa Murthy VN
Updated On : 24 Oct 2013, 12:15 pm

ಕನ್ನಡಪ್ರಭ ವಾರ್ತೆ, ಅರಸೀಕೆರೆ, ಅ.23
ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದ ರೈತನ ಮೇಲೆ ಕರಡಿಯೊಂದು ಏಕಾಏಕಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ಗೊಲ್ಲರಹಳ್ಳಿ ವಡ್ಡರಹಟ್ಟಿಯಲ್ಲಿ ಮಂಗಳವಾರ ರಾತ್ರಿ 9.30ರಲ್ಲಿ ನಡೆದಿದೆ.
ಗ್ರಾಮದ ರಾಮಾಭೋವಿ(45) ಗಾಯಗೊಂಡ ರೈತ. ಅವರು ಹೊಲದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಪೊದೆಯಲ್ಲಿ ಅಡಗಿದ್ದ ಕರಡಿಯೊಂದು ಹಠಾತ್ತನೆ ಮೇಲೆರಗಿ ಮುಖ, ಕಿವಿ ಹಾಗೂ ಎದೆಯ ಭಾಗವನ್ನು ಉಗುರುಗಳಿಂದ ಪರಚಿ ಗಾಯಗೊಳಿಸಿದೆ. ದಾಳಿಯಿಂದ ಗಾಬರಿಗೊಂಡ ಈತ ಸಹಾಯಕ್ಕಾಗಿ ಕೂಗಿಕೊಂಡಾಗ ಬೆದರಿದ ಕರಡಿ ಅಲ್ಲಿಂದ ಕಾಲ್ಕಿತ್ತಿದೆ.
ಗಾಯಗೊಂಡು ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಈತನನ್ನು ತಕ್ಷಣವೇ ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಿಕೊಡಲಾಗಿದೆ.
ಗ್ರಾಮಸ್ಥರ ಆಕ್ರೋಶ: ತಾಲೂಕಿನಾದ್ಯಂತ ಪದೇ ಪದೇ ಕರಡಿ ದಾಳಿ ಪ್ರಕರಣಗಳು ಮರುಕಳಿಸುತ್ತಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ನಿದ್ರೆಗೆ ಜಾರಿದೆ. ಸಮರ್ಥ ಸಿಬ್ಬಂದಿಯನ್ನು ನಿಯೋಜಿಸಿ ಕರಡಿಗಳನ್ನು ಸೆರೆ ಹಿಡಿದು ರೈತ ಕಾರ್ಮಿಕರ ಜೀವ ರಕ್ಷಣೆ ಮಾಡಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಅಧಿಕಾರಿ ಸ್ಪಷ್ಟನೆ: ಅರಣ್ಯ ವಲಯಾಧಿಕಾರಿ ಜೆ.ಜಿ. ರವಿ ಅವರು ಕರಡಿ ದಾಳಿಯ ಬಗ್ಗೆ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಮಳೆಯಿಲ್ಲದೆ ಸತತ ಬರಗಾಲ ಬಂದಿರುವ ಕಾರಣ ಕಾಡಿನಲ್ಲಿ ಪ್ರಾಣಿಗಳಿಗೆ ಅವಶ್ಯಕ ಆಹಾರಗಳು ಲಭ್ಯವಾಗುತ್ತಿಲ್ಲ. ಅಂತೆಯೇ ಕೆರೆಕಟ್ಟೆಗಳಲ್ಲಿ ಪ್ರಾಣಿಗಳಿಗೆ ನೀರಿಲ್ಲದ ಕಾರಣ ಕೆಲವು ಕಾಡು ಪ್ರಾಣಿಗಳು ಆಹಾರ ಮತ್ತು ನೀರನ್ನು ಹುಡುಕಿಕೊಂಡು ಕಾಡಿನ ಸಮೀಪದಲ್ಲಿನ ಜಮೀನುಗಳಿಗೆ ಮತ್ತು ಗ್ರಾಮಗಳಿಗೆ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಎದುರಾಗುವ ಮನುಷ್ಯರ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಗಾಯಗೊಂಡಿರುವ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, 2 ಸಾವಿರ ತಾತ್ಕಾಲಿಕ ಖರ್ಚಿಗಾಗಿ ತಾವುಗಳು ನೀಡಿದ್ದು, ಸದ್ಯದಲ್ಲಿಯೇ ಅರಣ್ಯ ಇಲಾಖೆ ಮೂಲಕ ನೀಡುವ ಸೂಕ್ತ ಪರಿಹಾರ ದೊರಕಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement