ಗಣೇಶ ವಿಸರ್ಜನೆಗೆ ಕ್ಯಾಮೆರಾ ಕಣ್ಗಾವಲು
ವಿಸರ್ಜನಾ ಮಹೋತ್ಸವ; ಡಿವೈಎಸ್ಪಿ ಕಚೇರಿ ಆವರಣದಲ್ಲಿ ಶಾಂತಿ ಸಭೆ
ಕನ್ನಡಪ್ರಭ ವಾರ್ತೆ, ಅರಸೀಕೆರೆ, ಅ.23
ಪೊಲೀಸ್ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಆಳವಡಿಸಿರುವುದರಿಂದ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕದಡುವ ಕಿಡಿಗೇಡಿಗಳನ್ನು ಕ್ಷಣಮಾತ್ರದಲ್ಲಿ ಪತ್ತೆ ಹಚ್ಚಿ ನ್ಯಾಯಾಲಯದಲ್ಲಿ ಸಾಕ್ಷಿ ಸಮೇತ ಹಾಜರುಪಡಿಸಲು ಸಾಧ್ಯವಾಗಿದ್ದು, ಯಾರೇ ತಪ್ಪು ಮಾಡಿದರೂ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಡಿವೈಎಸ್ಪಿ ಐ.ಜಿ. ಮಂಜುನಾಥ್ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಅ.25ರಿಂದ ಎರಡು ದಿನಗಳ ಕಾಲ ನಡೆಯಲಿರುವ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ ಅಂಗವಾಗಿ ಪಟ್ಟಣದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ಗಣೇಶೋತ್ಸವದಲ್ಲಿ 180ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಬಳಸುವುದರಿಂದ ಯಾರಾದರೂ ದುಷ್ಕೃತ್ಯ ನಡೆಸಿದಲ್ಲಿ ಸಾಕ್ಷಿ ಸಮೇತ ಸಿಕ್ಕಿ ಬೀಳಲಿದ್ದಾರೆ ಎಂದರು.
ಎಲ್ಲಾ ಧರ್ಮಗಳ ಆಚರಣೆಯನ್ನು ನಾವುಗಳು ಗೌರವಿಸುವ ಸದ್ಗುಣಗಳನ್ನು ರೂಢಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಯಾವುದೇ ರೀತಿಯಲ್ಲಿ ಗಲಭೆಗಳು ನಡೆಯಲು ಸಾಧ್ಯವಿಲ್ಲ. ಎಲ್ಲಾ ಧರ್ಮದ ಜನರು ವಿಶಾಲ ಹೃದಯಿಗಳಾಗಿ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಸಲು ಸಹಕಾರ ನೀಡಬೇಕೆಂದು ಹೇಳಿದರು.
ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಂಗಾಧರಪ್ಪ ಮಾತನಾಡಿ, ಪೊಲೀಸ್ ಇಲಾಖೆ ಪಟ್ಟಣದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ವಿಶೇಷ ರಕ್ಷಣಾ ವ್ಯವಸ್ಥೆ ಮಾಡುತ್ತಿದೆ. ಕಳೆದ ವರ್ಷದ ಆಕಸ್ಮಿಕವಾಗಿ ನಡೆದ ಕಹಿ ಘಟನೆ ಮತ್ತೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಪೊಲೀಸ್ ಇಲಾಖೆ ಕೈಗೊಂಡಿದೆ. ಈ ಬಗ್ಗೆ ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ತಾಲೂಕು ವಿಶ್ವ ಹಿಂದು ಪರಿಷತ್ನ ಕಾರ್ಯದರ್ಶಿ ಟಿ.ವಿ. ಅರುಣ್ಕುಮಾರ್ ಮಾತನಾಡಿ, 72 ವರ್ಷದ ಇತಿಹಾಸವುಳ್ಳ ಗಣಪತಿ ವಿಸರ್ಜನಾ ಮಹೋತ್ಸವದ ಪ್ರತಿಯೊಂದು ಹಂತದ ಕಾರ್ಯಕ್ರಮಗಳಲ್ಲಿ ಉತ್ಸವ ಸಮಿತಿ ಸದಸ್ಯರು ಜವಾಬ್ದಾರಿ ತೆಗೆದುಕೊಂಡು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದ ರೀತಿಯಲ್ಲಿ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಪುರಸಭೆ ಸದಸ್ಯೆ ನಸೀಮಾ ಭಾನು, ಪ್ರಭಾರಿ ತಹಸೀಲ್ದಾರ್ ಭಾಗ್ಯಮ್ಮ ಮಾತನಾಡಿದರು. ಪುರಸಭೆ ಅಧ್ಯಕ್ಷ ಮೋಹನ್ಕುಮಾರ್, ಮುಸ್ಲಿಂ ಜಮಾತೇ ಸಮಿತಿ ವ್ಯವಸ್ಥಾಪಕ ಮೀರ್ ಮಹಮದ್, ಜಮಾತೇ ಸಮಿತಿ ಮಾಜಿ ಕಾರ್ಯದರ್ಶಿ ಅಬ್ದುಲ್ ಜಮೀಲ್, ಪುರಸಭೆ ಮಾಜಿ ಸದಸ್ಯರಾದ ಉಮಾಶಂಕರ್, ಎ.ಎಲ್. ನಾರಾಯಣ್, ಕನ್ನಡ ಪಡೆ ಅಧ್ಯಕ್ಷ ಬೋರೆಹಳ್ಳಿ ವೆಂಕಟೇಶ್, ಹಿರಿಯ ಪತ್ರಕರ್ತರಾದ ಬಿ.ಎಸ್. ಸೇತುರಾಮು, ಎಚ್.ಡಿ. ಸೀತಾರಾಮು ಸಲಹೆಗಳನ್ನು ನೀಡಿದರು.
ಮಂಡಲಿ ಕಾರ್ಯದರ್ಶಿ ಶಾಂತವೀರಯ್ಯ ಮಾತನಾಡಿ, ಉತ್ಸವದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ನಿರ್ದೇಶಕರಾದ ಕೆ.ಎನ್. ದುರ್ಗಪ್ಪಶೆಟ್ಟಿ, ಸಿ. ರಾಜಣ್ಣ. ಪುರಸಭೆ ಸದಸ್ಯೆ ಅನ್ನಪೂರ್ಣ ಹಾಗೂ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಇದ್ದರು. ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಂದಕುಮಾರ್ ಸ್ವಾಗತಿಸಿ, ವಂದಿಸಿದರು.
ವಾಲಿಬಾಲ್: ಹಾಸನ ತಂಡ ಚಾಂಪಿಯನ್
ಗುರುಮಠಕಲ್: ಪಟ್ಟಣದ ಸರ್.ಎಂ. ವಿಶ್ವೇಶ್ವರಯ್ಯ ಯುವಕ ಸಂಘ ಇಲ್ಲಿಯ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಹಾಸನ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಪಂದ್ಯವಾಳಿಯ ಪೈನಲ್ ಪಂದ್ಯದಲ್ಲಿ ಎದುರಾಳಿ ಸಿಂದಗಿ ತಂಡವನ್ನು ಮಣಿಸಿ ಹಾಸನ ತಂಡ ಪ್ರಶಸ್ತಿ ಗಿಟ್ಟಿಸಿಕೊಂಡಿತು. ಎರಡು ದಿನಗಳ ವಾಲಿಬಾಲ್ ಪಂದ್ಯಾವಳಿಯಲ್ಲಿ ಆಂಧ್ರಪ್ರದೇಶದ ಹೈದ್ರಾಬಾದ್, ವಿಜಯವಾಡ, ಕೋಸ್ಗಿ, ಮದ್ದೂರ್, ನಾರಾಯಣಪೇಟ್, ಮಹಾರಾಷ್ಟ್ರದ ಲಾತೂರ್, ಔರಂಗಬಾದ್, ಸೊಲ್ಲಾಪುರ, ಬೆಂಗಳೂರು, ಹಾಸನ, ಮಂಗಳೂರು, ಬಿಜಾಪುರ, ತುಮಕೂರು, ಬೀದರ್, ಗುಲ್ಬರ್ಗ ಸೇರಿದಂತೆ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು. ಹಾಸನ ತಂಡ ತುಮಕೂರನ್ನು ಸೋಲಿಸಿ ಪೈನಲ್ಗೆ ಅರ್ಹತೆ ಪಡೆದಿತ್ತು. ಶ್ರೇಷ್ಠ ಶೂಟರ್ ಪ್ರಶಸ್ತಿಯನ್ನು ಕಾರ್ತಿಕ ಹಾಸನ, ಶ್ರೇಷ್ಠ ಲಿಪ್ಟರ್ ಪ್ರಶಸ್ತಿ ಹರ್ಷ ತುಮಕೂರು, ಸರಣಿ ಶ್ರೇಷ್ಠ ಪ್ರಶಸ್ತಿ ಈಶ್ವರ ಸಿಂದಗಿ ಪಡೆದರು.