ದೌರ್ಜನ್ಯ ಖಂಡಿಸಿ ಎಬಿವಿಪಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಅರಸೀಕೆರೆ ಅ.23
ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ, ಕೊಲೆ ಇತ್ಯಾದಿ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಕಠಿಣ ಕಾನೂನು ಜಾರಿಗೆ ತರಬೇಕೆಂದು ಎಬಿವಿಪಿ ಕಾರ್ಯಕರ್ತರು ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಹೊಯ್ಸಳೇಶ್ವರ ಕಾಲೇಜು ಆವರಣದಿಂದ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ಬಸವೇಶ್ವರ ವೃತ್ತಕ್ಕೆ ಬಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸರ್ಕಾರದ ವಿರೋಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜಿಲ್ಲಾ ಸಂಚಾಲಕ ಕಣಕಟ್ಟೆ ಮಂಜುನಾಥ್ ಮಾತನಾಡಿ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಸೇರಿದಂತೆ ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಅಮಾನವೀಯ ರೀತಿಯಲ್ಲಿ ನಡೆದಿದ್ದು, ಈ ಬಗ್ಗೆ ಎಬಿವಿಪಿ ವಿದ್ಯಾರ್ಥಿ ಸಂಘಟನೆಯು ಪ್ರಸ್ತುತ ಸಮಾಜದಲ್ಲಿನ ಅಸುರಕ್ಷತೆ ಕುರಿತು ಕಾಲೇಜು ಕ್ಯಾಂಪಸ್‌ನಿಂದ ಸಂಸತ್ ಭವನದವರೆಗೂ ನಿರಂತರ ಹೋರಾಟವನ್ನು ಮಾಡುತ್ತಾ ಬಂದಿರುವುದಾಗಿ ಹೇಳಿದರು.
ವಿದ್ಯಾರ್ಥಿನಿಯರ ಮುಖಂಡೆ ನಗ್ಮಾಭಾನು ಮಾತನಾಡಿದರು. ನಗರ ಕಾರ್ಯದರ್ಶಿ ನಂದಿನಿ ಮೆಳವಂಕಿ, ಭವಾನಿ ಮಾತನಾಡಿ, ದೇಶದಾದ್ಯಂತ ಮಹಿಳಾ ಸುರಕ್ಷಾ ಜನಜಾಗೃತಿ ಅಭಿಯಾನ ಕೈಗೊಳ್ಳಲಾಗಿದ್ದು, ಅ.23ರಿಂದ ಮಹಿಳಾ ಸುರಕ್ಷತೆಗಾಗಿ ವಿದ್ಯಾರ್ಥಿನಿಯರ ನಡಿಗೆ ಎಂಬ ಅಭಿಯಾನವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಹಿ ಸಂಗ್ರಹ, ಕರಪತ್ರ ವಿತರಣೆ, ಬೀದಿ ನಾಟಕ, ವಿಚಾರ ಸಂಕಿರಣ, ಸುರಕ್ಷತೆಗಾಗಿ ನಡಿಗೆ, ಪ್ರತಿಭಟನಾ ಧರಣಿ ಮುಂತಾದ ಕಾರ್ಯಕ್ರಮಗಳ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ಉಜಿರೆಯಲ್ಲಿನ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನ್ಯಾಯ ಸಮ್ಮತವಾಗಿ ನಡೆಸಬೇಕೆಂದು ಆಗ್ರಹಿಸಿದರು. ನಂತರ ಪ್ರತಿಭಟನಕಾರರು ತಾಲೂಕು ಕಚೇರಿಗೆ ತೆರಳಿ ಮನವಿ ಪತ್ರವನ್ನು ಸಲ್ಲಿಸಿದರು.
ವಿದ್ಯಾರ್ಥಿ ಸಂಘಟನೆ ಮುಖಂಡರಾದ ತಾಲೂಕು ಪ್ರಮುಖ ಪುಲ್‌ಚಂದ್, ಸಹ ಕಾರ್ಯದರ್ಶಿ ವೇದಾಂತ, ಪ್ರವೀಣ್, ಗಣೇಶ್‌ಗೌಡ, ಗಿರೀಶ್, ತ್ರಿವೇಣಿ, ವಿದ್ಯಾ, ಯೋಗಲಕ್ಷ್ಮೀ, ಶಮಂತ, ಅನುಷಾ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಅರ್ಥಪೂರ್ಣ ರಾಜ್ಯೋತ್ಸವ; ಜಿಲ್ಲಾಡಳಿತ ನಿರ್ಧಾರ
ಕನ್ನಡಪ್ರಭ ವಾರ್ತೆ ಹಾಸನ ಅ.23
ಪ್ರತಿ ವರ್ಷದಂತೆ ಈ ಬಾರಿಯೂ ನ.1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ರಾಜ್ಯೋತ್ಸವವನ್ನು ಮತ್ತಷ್ಟು ಆಕರ್ಷಣೆಯಿಂದ ಆಚರಿಸಲು ತೀರ್ಮಾನಿಸಲಾಯಿತು. ರಾಜ್ಯೋತ್ಸವದ ಯಶಸ್ವಿ ಆಚರಣೆಗಾಗಿ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಮೆರವಣಿಗೆ ಸಮಿತಿ, ಪಥ ಸಂಚಲನ ಸಮಿತಿ, ಸನ್ಮಾನ ಸಮಿತಿ ಸೇರಿದಂತೆ ನಾನಾ ಉಪ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು.
ಕನ್ನಡ ನಾಡು ನುಡಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಹಾಗೂ ಸಂಜೆ ಹಾಸನಾಂಬ ಕಲಾ ಭವನದಲ್ಲಿ ನಡೆಯುವ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಗುಣಮಟ್ಟ ಕಾಯ್ದುಕೊಂಡು ಏರ್ಪಡಿಸುವಂತೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಇದರ ಸಮನ್ವಯತೆ ನೋಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಭೆಯಲ್ಲಿ ಸೂಚನೆ ನೀಡಿದರು.
ನಾನಾ ಇಲಾಖೆಗಳ ಮೂಲಕ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಪ್ರಮುಖ ಯೋಜನೆಗಳನ್ನು ಬಿಂಬಿಸುವ ಸ್ಥಬ್ಧಚಿತ್ರಗಳನ್ನು ಸಿದ್ಧಪಡಿಸಿ ಮೆರವಣಿಗೆ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ಕೊಂಡೊಯ್ಯಲು ಕ್ರಮ ವಹಿಸುವಂತೆ ಪ್ರಮುಖ ಇಲಾಖಾ ಅಧಿಕಾರಿಗಳಿಗೆ ತಿಳಿಸಲಾಯಿತು.
ನಗರದಾದ್ಯಂತ ತಳಿರು ತೋರಣಗಳ ಶೃಂಗಾರಕ್ಕೆ ನಗರಸಭೆ ಹಾಗೂ ನಾನಾ ಸಂಘ-ಸಂಸ್ಥೆಗಳಿಗೆ ತಿಳಿಸಲಾಯಿತು. ಸಾರ್ವಜನಿಕರು ತಮ್ಮ ತಮ್ಮ ಮನೆಗಳು, ರಸ್ತೆಗಳಲ್ಲಿ ಅಲಂಕಾರ ಕೈಗೊಂಡು ಈ ನಾಡ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಲಾಯಿತು. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ವಿದ್ಯುತ್ ದೀಪಾಲಂಕಾರ ಮಾಡುವಂತೆ ಸಭೆಯಲ್ಲಿ ಸೂಚಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಸಭೆಯಲ್ಲಿ ಸಲಹೆ ನೀಡಿದರು. ಉಪ ವಿಭಾಗಾಧಿಕಾರಿ ಶರತ್, ಅಧಿಕಾರಿಗಳು ಇದ್ದರು.