ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೈತರ ಸಾಲ ವಿತರಣೆಯಲ್ಲಿ ಬ್ಯಾಂಕ್‌ಗಳಿಂದ ಅನ್ಯಾಯ

Srinivasa Murthy VN
Updated On : 24 Oct 2013, 12:16 pm

ಕನ್ನಡಪ್ರಭ ವಾರ್ತೆ ಹಾಸನ ಅ.23
ಜಿಲ್ಲೆಯಲ್ಲಿ ಬಡ ರೈತರಿಗೆ ಬೆಳೆ ಸಾಲವನ್ನು ಕಾನೂನಿನ ಚೌಕಟ್ಟಿನಲ್ಲೇ ನೀಡದ ಲೀಡ್ ಬ್ಯಾಂಕ್‌ನಡಿ ಬರುವ ರಾಷ್ಟ್ರೀಕೃತ ಬ್ಯಾಂಕ್‌ಗಳ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಕೇಂದ್ರ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಲೀಡ್ ಬ್ಯಾಂಕ್ ಮತ್ತಿತರ ಬ್ಯಾಂಕ್‌ಗಳ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಕಂಡು ಹೌಹಾರಿದ ಗೌಡರು, ಜಿಲ್ಲೆಯಲ್ಲಿ ರಿಸರ್ವ್ ಬ್ಯಾಂಕ್, ನಬಾರ್ಡ್ ಮಾರ್ಗಸೂಚಿಯ ಪ್ರಕಾರವೇ 26 ನಾನಾ ಯೋಜನೆಗಳಿಗೆ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು. ಆದರೆ ಸೂಕ್ತ ಪ್ರಮಾಣದಲ್ಲಿ ಸಾಲ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವ್(ಲೀಡ್ ಬ್ಯಾಂಕ್ ಅಧಿಕಾರಿಗಳು) ಹೇಳಿದ್ದನ್ನು ಕೇಳಿಕೊಂಡು ಹೋಗಲಿಕ್ಕೆ ಬಂದಿಲ್ಲ. ಸಾಲ ನೀಡುವಾಗ ಬೆಳೆ ಕಳೆದುಕೊಂಡ ರೈತ ಬೆಳೆ ವಿಮೆ ಮಾಡಿಸದಿದ್ದರೇ ಯಾವ ರೀತಿ ಸಾಲ ನೀಡಬೇಕು. ಅಥವಾ ರೈತ ಯಾವ ರೀತಿ ಸಾಲ ಪಡೆದುಕೊಳ್ಳಬೇಕು. ಬೆಳೆ ವಿಮೆ ಮಾಡಿಸದಿದ್ದವರು ಎಷ್ಟು ಸಾಲ ಪಡೆದಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಸೂಚನೆಗಳಿಲ್ಲ. ಲೀಡ್ ಬ್ಯಾಂಕ್  ಅಧಿಕಾರಿಗಳು ತಿಂಗಳಿಗೊಮ್ಮೆ ನಾನಾ ಬ್ಯಾಂಕ್‌ಗಳ ಸಭೆ ಕರೆದು ಸಾಲ ವಿತರಣೆ ಎಷ್ಟರ ಮಟ್ಟಿಗಾಗಿದೆ ಎಂಬ ಬಗ್ಗೆ ಮಾಹಿತಿ ಪಡೆಯಬೇಕು. ಅದನ್ನು ತಮಗೆ ಇಂಥಹ ಸಭೆ ನಡೆಸುವ 2 ಅಥವಾ 3 ದಿನಗಳ ಮುಂಚೆ ನೀಡಿದರೇ ಹೋಂ ವರ್ಕ್ ಮಾಡಿಕೊಂಡು ಬಂದು ಸಂಬಂಧಪಟ್ಟ ರಿಸರ್ವ್ ಬ್ಯಾಂಕ್ ಮತ್ತಿತರ ಇಲಾಖೆ ಉನ್ನತಾಧಿಕಾರಿಗಳಿಗೆ ಪತ್ರ ಬರೆಯಬಹುದು ಎಂದು ಗೌಡರು ಹೇಳಿದರು.
ಅರ್ಹ ರೈತರಿಗೆ ಸಾಲ ನೀಡಿ: ಜಿಲ್ಲಾಧಿಕಾರಿ ವಾಣಿಜ್ಯ ಬ್ಯಾಂಕ್‌ಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿಗಳ ಸಭೆ ಕರೆದು ಸಾಲ ವಿತರಣೆ ಅರ್ಹ ರೈತರಿಗೆ ಸಕಾಲದಲ್ಲಿ ನೀಡುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮಳೆಯೊಡನೆ ಜೂಜಾಡುವ ರೈತ ನೇಣಿಗೆ ಕೊರಳನ್ನು ಒಡ್ಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್‌ಗಳು ಸಣ್ಣ ಮತ್ತು ಅತೀ ಸಣ್ಣ ರೈತರ ಹಿತಕಾಯಲು ಬದ್ಧತೆ ಪ್ರದರ್ಶಿಸಬೇಕು. ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸಿ ಕೃಷಿ ಉತ್ಪಾದನೆಗೆ ನೆರವಾಗುವ ಮೂಲಕ ರಾಷ್ಟ್ರೀಯ ಅಭಿವೃದ್ಧಿಗೂ ಪಾಲುದಾರರಾಗಬೇಕು. ಕೃಷಿ ಹಾಗೂ ಆದ್ಯತಾ ವಲಯಗಳಿಗೆ ಮೀಸಲಿರಿಸಿರುವ ಹಣ ಸದ್ಬಳಕೆಯಾಗಬೇಕು. ಕೇವಲ ಉಳ್ಳವರಿಗೆ ಮಾತ್ರ ಇದರ ಅನುಕೂಲ ದೊರೆಯುವಂತೆ ಆಗಬಾರದು ಎಂದು ತಾಕೀತು ಮಾಡಿದರು.
ಉಪ್ಪಿಟ್ಟು, ಕಾಫಿಗೆ ಮೀಟಿಂಗ್ ಕರೆಯುತ್ತಾರೆ: ಲೀಡ್ ಬ್ಯಾಂಕ್‌ಗಿಂತ ಪ್ರತಿ ತಿಂಗಳು ಬ್ಯಾಂಕ್ ಮ್ಯಾನೇಜರ್‌ಗಳ ಸಭೆಯನ್ನು ಕರೆಯಲಾಗುತ್ತದೆ. ಈ ಸಭೆಯನ್ನು ಕರೆಯುವ ಉದ್ದೇಶ ರೈತರಿಗೆ ಸಾಲ ನ್ಯಾಯವಾಗಿ ವಿತರಣೆ ಎಂಬುದೇ ಆಗಿದೆ. ಆದರೆ ಅಧಿಕಾರಿಗಳ ನೀಡಿದ ಅಂಕಿ-ಅಂಶ ನೀಡಿದರೆ ಸಾಲ ಸರಿಯಾಗಿ ಅರ್ಹ ಫಲಾನುಭವಿಗಳಿಗೆ ನೀಡಿಲ್ಲ. ಬ್ಯಾಂಕ್ ಅಧಿಕಾರಿಗಳು ಉಪ್ಪಿಟ್ಟು, ಕಾಫಿ ತಿನ್ನಲಿಕ್ಕೆ ಸಭೆ ಕರೆಯುತ್ತಾರಾ, ಮಾರ್ವಾಡಿಗಳ ರೀತಿ ಶ್ರೀಮಂತರಿಗೆ ಸಾಲ ನೀಡುವ ವ್ಯವಸ್ಥೆ ಇದೆ. ಇದು ತಪ್ಪಬೇಕು ಎಂದು ಶಾಸಕ ರೇವಣ್ಣ ವಾದಿಸಿದರು.
ತನಿಖೆಯಾಗಲಿ: ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಮ್ಯಾನೇಜರ್‌ಗಳು ಅತ್ಯಂತ ಬಡ ರೈತರಿಗೆ ಸಾಲ ನೀಡುವುದಿಲ್ಲ. ಸಾಲಕ್ಕೆ ಭದ್ರತೆ ನೀಡುವವರಿಗೆ ನೀಡಲಾಗುತ್ತದೆ. ಸರ್ಕಾರಿ ನೌಕರರಿಗೂ ಸಾಲ ನೀಡಲಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ವಾಣಿಜ್ಯ ಬ್ಯಾಂಕ್‌ಗಳು ನಿಜವಾದ ಅರ್ಹರಿಗೆ ಸಾಲ ಸೌಲಭ್ಯಗಳನ್ನು ನೀಡದೆ ಉಳ್ಳವರಿಗೆ, ತೆರಿಗೆದಾರರಿಗೆ ಆದ್ಯತೆ ನೀಡುತ್ತಿವೆ. ಇದರಿಂದ ಬಡವರ ಏಳಿಗೆಗೆ ಹಿನ್ನಡೆಯಾಗುತ್ತದೆ. ಬ್ಯಾಂಕ್‌ಗಳು ಈ ಧೋರಣೆಯನ್ನು ಬಿಡಬೇಕು.
 ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರು ಜಿಲ್ಲೆಯ ಎಲ್ಲಾ 264 ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿ ಅನುಷ್ಠಾನವಾಗುತ್ತಿರುವ ಬಗ್ಗೆ ಅನುಪಾಲನಾ ವರದಿ ಪಡೆದು ಗಮನಿಸಬೇಕು ಎಂದು ಒತ್ತಾಯಪಡಿಸಿದರು.
ನಿರ್ದೇಶನಕ್ಕೆ ಸೂಚನೆ: ಬ್ಯಾಂಕ್‌ಗಳ ಮೂಲಕ ಅನುಷ್ಠಾನವಾಗುತ್ತಿರುವ ನಾನಾ ಇಲಾಖೆಗಳ ಇಪ್ಪತ್ತಾರಕ್ಕೂ ಅಧಿಕ ಕೇಂದ್ರ ಪುರಸ್ಕತ ಯೋಜನೆಗಳಲ್ಲಿನ ಸಾಲ ಹಾಗೂ ಸೌಲಭ್ಯ ಸಮರ್ಪಕವಾಗಿ ತಲುಪುತ್ತಿರುವ ಬಗ್ಗೆ ಪರಿಶೀಲನೆ ಮತ್ತು ಮೇಲ್ವಿಚಾರಣೆ ಲೀಡ್ ಬ್ಯಾಂಕ್‌ನ ಹೊಣೆಗಾರಿಕೆ, ಇದರಲ್ಲಿ ಲೋಪಗಳು ಕಂಡು ಬಂದರೆ ಲೀಡ್ ಬ್ಯಾಂಕ್ ಅನ್ನು ಜವಾಬ್ದಾರರನ್ನಾಗಿ ಮಾಡಬೇಕಾಗುತ್ತದೆ ಎಂದ ಮಾಜಿ ಪ್ರಧಾನಿ, ಈ ಬಗ್ಗೆ ಗಮನ ಹರಿಸಿ ಈವರೆಗೆ ಅನುಕೂಲ ಪಡೆದಿರುವ ಫಲಾನುಭವಿಗಳ ಪಟ್ಟಿಯನ್ನು ಪಡೆದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆದು ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡುವಂತೆ ಸೂಚಿಸಿದರು.ಸಾಲದ ಹಣವನ್ನು ಬಿಡುಗಡೆ ಮಾಡದೆ ಸಬ್ಸಿಡಿ ಹಣವನ್ನು ಠೇವಣಿ ಇರಿಸಿಕೊಳ್ಳಲಾಗುತ್ತಿದೆ. ಇದರಿಂದ ಸರ್ಕಾರದ ಯೋಜನೆಗಳ ಉದ್ದೇಶ ಈಡೇರುತ್ತದೆಯೇ, ಲೀಡ್ ಬ್ಯಾಂಕ್ ಇಂತಹವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಪ್ರಶ್ನಿಸಿದರು.
ಶೇ.50ರಷ್ಟು ಬೆಳೆ ಹಾನಿ: ಬ್ಯಾಂಕ್ ವ್ಯವಸ್ಥಾಪಕರು ಹೇಳಿದವರಿಗೆ ನಾವು ಪತ್ರ ನೀಡಬೇಕೆಂದಾದರೆ ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಔಚಿತ್ಯವೇನು. ಶೋಷಿತರನ್ನು ಮೇಲೆತ್ತುವುದಾದರೂ ಹೇಗೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಕೇಳಿದರು.
ಕಾಫಿ ಬೆಳೆ ಹಾನಿ ಬಗ್ಗೆ ಕಾಫಿ ಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದ ಎಚ್.ಡಿ. ದೇವೇಗೌಡ ಅವರು ಬೆಳೆಗಾರರಿಗೆ ಪರಿಹಾರ ನೀಡಲು ವಹಿಸಿರುವ ಕ್ರಮಗಳೇನೆಂದು ಪ್ರಶ್ನಿಸಿದರು. ಇದಕ್ಕೆ ಮಾಹಿತಿ ನೀಡಿದ ಕಾಫಿ ಮಂಡಳಿ ಅಧಿಕಾರಿಗಳು ಜಿಲ್ಲೆಯ ಯಸಳೂರು, ಹಾನುಬಾಳು ಹಾಗೂ ಸಕಲೇಶಪುರ ತಾಲೂಕಿನ 153 ಗ್ರಾಮಗಳಲ್ಲಿ 1125 ಎಕರೆ ಪ್ರದೇಶದ ಶೇ.50ಕ್ಕೂ ಅಧಿಕ ಬೆಳೆ ಹಾನಿ ಸಂಭವಿಸಿದೆ.
ಯಸಳೂರು ಹೋಬಳಿಯಲ್ಲಿ 53ರಿಂದ 65, ಹಾನುಬಾಳಿನಲ್ಲಿ ಶೇ.20ರಿಂದ 80, ಸಕಲೇಶಪುರ ಹೋಬಳಿಯಲ್ಲಿ ಶೇ.50ರಿಂದ 80ರಷ್ಟು ಬಂದಿದ್ದು, 1900 ಅಧಿಕ ಅರ್ಜಿ ಸ್ವೀಕರಿಸಲಾಗಿದೆ. ಶೇ.60ರಷ್ಟು ಅರ್ಜಿಗಳಲ್ಲಿ ಶೇ.50ಕ್ಕೂ ಅಧಿಕ ಪ್ರಮಾಣದ ಬೆಳೆ ಹಾನಿ ಸಂಭವಿಸಿದರೆ ಶೇಕಡ 50ಕ್ಕಿಂತ ಕಡಿಮೆ ಬೆಳೆ ಹಾನಿ ಸಂದರ್ಭ ನಷ್ಟ ಪರಿಹಾರ ನೀಡಲಾಗುವುದಿಲ್ಲ ಇನ್ನೂ ಪರಿಶೀಲನಾ ಕಾರ್ಯ ಮುಂದುವರಿದಿದೆ ಎಂದರು.

ಪಡೆಯದ ಸಾಲಕ್ಕೆ ನೋಟಿಸ್!
ಹಾಸನ:
ಸಾಲವನ್ನು ನೀಡಿಲ್ಲ. ಹೋಗಲಿ ಸಾಲದ ಸಬ್ಸಿಡಿ ಹಣವನ್ನು ನೀಡಿಲ್ಲ. ಆದರೆ ಬಡ್ಡಿ, ಸಾಲ ಕಟ್ಟಲು ನೋಟಿಸ್ ಜಾರಿ...! ಸಾಲ ಪಡೆದಿದ್ದು 31 ಲಕ್ಷ, ಬಡ್ಡಿಯೇ 71 ಲಕ್ಷ...!
ಹೀಗೆ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ನಿಗಮ ಮತ್ತು ವಾಣಿಜ್ಯ ಬ್ಯಾಂಕ್ ಪ್ರಮಾದ ಎಸಗಿರುವುದನ್ನು ಮಾಜಿ ಸಚಿವ ಶಾಸಕ ಎಚ್.ಡಿ. ರೇವಣ್ಣ ಬುಧವಾರ ಜಿಪಂನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಹಿರಂಗಪಡಿಸಿದರು.
ನೋಡಿ ಸ್ವಾಮಿ... ಹೊಳೆನರಸೀಪುರ ತಾಲೂಕು ಹರದಹಳ್ಳಿ ಗ್ರಾಮದ ಬೆಟ್ಟದ ಸಮೀಪದ ಕಲ್ಲು ವಡ್ಡರಹಳ್ಳಿ ಅಂಥ ಇದೆ. ಅಲ್ಲಿನ 30 ಕುಟುಂಬಗಳು ಕಲ್ಲುಗಾರಿಕೆ ಕಾಯಕ ಮಾಡಿ ಹೊಟ್ಟೆಪಾಡು ನಡೆಸುತ್ತಾರೆ. ಅವರಿಗೆ ಎಸ್ಸಿ, ಎಸ್ಟಿ ನಿಗಮದಿಂದ ಸಾಲವನ್ನು ಕೊಟ್ಟೆ ಇಲ್ಲ. ಸಾಲದ ಸಬ್ಸಿಡಿನೂ ನೀಡಿಲ್ಲ. ಆದರೆ ಸಾಲ ಮರುಪಾವತಿ ಮಾಡಿ ಎಂದು ನೋಟಿಸ್ ನೀಡಲಾಗಿದೆ. ಸಾಲ ಮತ್ತು ಸಬ್ಸಿಡಿ ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟುಕೊಂಡು ಅಧಿಕಾರಿಗಳು ಬಡ್ಡಿ ಪಡೆದು ವಂಚನೆ ಮಾಡುತ್ತಿದ್ದಾರೆ ಎಂದು ರೇವಣ್ಣ ಆರೋಪ ಮಾಡಿದರು.
ಇನ್ನೊಂದು ಘಟನೆ ಹೇಳ್ತೀನಿ ಕೇಳಿ... ದೊಡ್ಡ ಕರಡೇವು ಗ್ರಾಮದ ರೈತರೊಬ್ಬರು ಉದ್ದಿಮೆ ನಡೆಸಲು ವಾಣಿಜ್ಯ ಬ್ಯಾಂಕಿನಿಂದ 31 ಲಕ್ಷ ಸಾಲ ಪಡೆದಿದ್ದಾರೆ. ಆದರೆ 71 ಲಕ್ಷ ಬಡ್ಡಿ ಬಿಗಿಯಲಾಗಿದೆ. ಹೀಗಾದ್ರೆ ರೈತರು ಏನ್ ಮಾಡೋದು?. ಜಿಲ್ಲಾಧಿಕಾರಿ ಬ್ಯಾಂಕ್‌ಗಳು ಮಾಡುತ್ತಿರುವುದನ್ನು ತಪ್ಪಿಸಿ, ಅರ್ಹ ಬಡ ರೈತರಿಗೆ ಸಾಲ ಸಕಾಲದಲ್ಲಿ ಸಿಗುವಂತೆ ಮಾಡಬೇಕು. ಬ್ಯಾಂಕ್ ಮ್ಯಾನೇಜರ್‌ಗಳು ಬಡವರನ್ನು ಅಲೆಸಿ, ಅಲೆಸಿ ಮತ್ತಷ್ಟು ಬಡವರನ್ನಾಗಿ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement