ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಶೋಷಣೆ ಕೇಂದ್ರಗಳಾಗಬಾರದು

Srinivasa Murthy VN
Updated On : 24 Oct 2013, 12:17 pm

ಕನ್ನಡಪ್ರಭ ವಾರ್ತೆ ಹಾಸನ ಅ.23
ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಶೋಷಣೆ ಕೇಂದ್ರಗಳಾಗಬಾರದು. ಕೊರತೆ ನೆಪ ಹೇಳದೆ ಲಭ್ಯವಿರುವ ಸೌಲಭ್ಯದಲ್ಲಿ ಜನಸಾಮಾನ್ಯರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಎಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಸೇವೆಗಾಗಿಯೇ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಶೋಷಣೆಗಳಾಗದಂತೆ ಚಿಕಿತ್ಸೆ ಒದಗಿಸಿ ಎಂದರು.
ಈ ಮೊದಲು ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದ ಜಿಲ್ಲಾ ಆಸ್ಪತ್ರೆಯನ್ನು ಸದುದ್ದೇಶದಿಂದ ಹಾಸನ ವೈದ್ಯಕೀಯ ಮಹಾವಿದ್ಯಾಲಯಕ್ಕೆ ವಹಿಸಲಾಗಿದೆ. ಇದರಿಂದ ತೊಂದರೆಗಳು ಹುಟ್ಟಿಕೊಳ್ಳದೆ ಜನರಿಗೆ ಹೆಚ್ಚಿನ ಅನುಕೂಲವಾಗಬೇಕು. ಉತ್ತಮ ವೈದ್ಯಕೀಯ ಸೌಲಭ್ಯಗಳು ಸಕಾಲದಲ್ಲಿ ಸಾರ್ವಜನಿಕರಿಗೆ ದೊರೆಯಬೇಕು ಲೋಪ ಸಲ್ಲ ಎಂದು ಹೇಳಿದರು.
ಮಾನಸಿಕವಾಗಿ ತಯಾರಾಗಿ: ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರ ಪ್ರತಿ ಎಂಬಿಬಿಎಸ್ ವಿದ್ಯಾರ್ಥಿಗೆ 35ರಿಂದ 45 ಲಕ್ಷ ಹಾಗೂ ಸ್ನಾತಕೋತ್ತರ ವ್ಯಾಸಂಗದ ಪ್ರತಿ ವಿದ್ಯಾರ್ಥಿಗೆ 50ರಿಂದ 60 ಲಕ್ಷ ವೆಚ್ಚ ಮಾಡುತ್ತಿದೆ. ಇದು ಜನಸಾಮಾನ್ಯರ ತೆರಿಗೆ ಹಣ ಈ ಋಣವನ್ನು ತೀರಿಸುವಂತಹ ಮನೋಭಾವ ಪ್ರತಿ ವಿದ್ಯಾರ್ಥಿಗಳಲ್ಲಿ ಬರುವಂತಾಗಬೇಕು ಈ ಬಗ್ಗೆ ಬೋಧನೆ ಸಮಯದಲ್ಲೇ ಮನವರಿಕೆ ಮಾಡಿಕೊಟ್ಟು ರಾಜ್ಯದ ಯಾವುದೇ ಭಾಗದಲ್ಲಾದರೂ ಸೇವೆ ಮಾಡುವಂತೆ ಮಾನಸಿಕವಾಗಿ ಹೊಸ ವೈದ್ಯರನ್ನು ತಯಾರು ಮಾಡಬೇಕು ಎಂದು ಸಚಿವರು ಹೇಳಿದರು.
ಸಿಬ್ಬಂದಿ ಕೊರತೆ ರಾಜ್ಯ ವ್ಯಾಪಿ ಸಮಸ್ಯೆಯಾಗಿದ್ದು, ಅದನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಗಳಲ್ಲಿ ಆಂತರಿಕವಾಗಿ ನಿಯೋಜನೆ ಮತ್ತಿತರ ವ್ಯವಸ್ಥೆಗಳನ್ನು ಮಾಡಿಕೊಂಡು ತೊಂದರೆಗಳ ತಾತ್ಕಾಲಿಕ ನಿರ್ವಹಣೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅಧಿಕಾರ ವಹಿಸಲಾಗಿದೆ. ವೈದ್ಯರ ನೇಮಕಾತಿ ವೇಳೆ ಕೌನ್ಸೆಲಿಂಗ್ ವ್ಯವಸ್ಥೆ ತೆಗೆದು ಹಾಕುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಿದೆ ಎಂದು ಸಭೆಯಲ್ಲಿ ಖಾದರ್ ತಿಳಿಸಿದರು.
ಔಷಧಿಗಳಿಗೆ ಕೊರತೆ ಇಲ್ಲ: ಔಷಧಿಗಳಿಗೆ ಯಾವುದೇ ಕೊರತೆ ಇಲ್ಲ. ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಂಜೂರಾತಿ ಈ ವರ್ಷದ ಮಟ್ಟಿಗೆ ತಡೆಹಿಡಿಯಲಾಗಿದೆ. ರಾಜ್ಯಾದ್ಯಂತ ಏಡ್ಸ್ ನಿಯಂತ್ರಣ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಪ್ತ ಸಮಾಲೋಚಕರು ಹಾಗೂ ಲ್ಯಾಬ್ ಟೆಕ್ನಿಷಿಯನ್‌ಗಳನ್ನು ಕಾಯಂಗೊಳಿಸುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಹಾಸನ ವೈದ್ಯಕೀಯ ಕಾಲೇಜಿನ ಹೌಸ್ ಸರ್ಜನ್‌ಗಳನ್ನು ಸಹ ಜಿಲ್ಲೆಯಲ್ಲಿ ಅಗತ್ಯವಿರುವೆಡೆ ತಾತ್ಕಾಲಿಕವಾಗಿ ಸೇವೆಗೆ ಬಳಸಿಕೊಳ್ಳಲು ತಿಳಿಸಿದ ಸಚಿವರು ಯಾವುದೇ ಜನಸಾಮಾನ್ಯ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ನೊಂದುಕೊಳ್ಳದಂತೆ ಮತ್ತು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸದಭಿಪ್ರಾಯ ಬರುವಂತೆ ಚಿಕಿತ್ಸೆ ಸೌಲಭ್ಯ ಒದಗಿಸಿ ಎಂದು ಹೇಳಿದರು.
ಕನಿಷ್ಠ ಇಬ್ಬರು ವೈದ್ಯರ ನೇಮಿಸಿ: ಶಾಸಕ ಎ. ಮಂಜು ಮಾತನಾಡಿ, ಜಿಲ್ಲೆಯಲ್ಲಿ 24್ಢ7 ನಡೆಯುವ ಆಸ್ಪತ್ರೆಗಳಿಗೆ ಕನಿಷ್ಠ ಇಬ್ಬರು ವೈದ್ಯರನ್ನು ನೇಮಿಸಬೇಕು. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಪ್ತ ಸಮಾಲೋಚಕರನ್ನು ಕಾಯಂಗೊಳಿಸಬೇಕು. ಕೇರಳಾಪುರ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಆಸ್ಪತ್ರೆಗೆ ಅಗತ್ಯವಿರುವ ಬಾಕಿ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಭರವಸೆ ನೀಡಿದ್ದು ಅಧಿಕಾರಿಗಳು ಈ ಬಗ್ಗೆ ಪ್ರಸ್ತಾವನೆ ಕಳುಹಿಸಬೇಕು ಎಂದರು. ಶಾಸಕ  ವೈ.ಎನ್. ರುದ್ರೇಶಗೌಡ ಮಾತನಾಡಿ, ಹಳೇಬೀಡು ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ಬಗ್ಗೆ ನಿರಂತರ ಪ್ರತಿಭಟನೆ ನಡೆಯುತ್ತಿದ್ದು, ಕಾಯಂ ವೈದ್ಯರನ್ನು ನಿಯೋಜಿಸಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಕೆಳಹಂತದ ಸಿಬ್ಬಂದಿಯಿಂದ ನಡೆಯುವ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲು ಆಸ್ಪತ್ರೆಯ ನಿರ್ದೇಶಕರು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಆಲೂರಲ್ಲಿ 100 ಬೆಡ್ ಆಸ್ಪತ್ರೆ ತೆರೆಯಿರಿ: ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಮಲೆನಾಡು ಭಾಗದ ವೈದ್ಯಕೀಯ ಸೌಲಭ್ಯಗಳ ಕೊರತೆ, ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆ ಸಮಸ್ಯೆ, ತುರ್ತಾಗಿ ಅಪಘಾತ ಚಿಕಿತ್ಸಾ ಕೇಂದ್ರ ಒದಗಿಸುವ ಅಗತ್ಯ, ಗೊರೂರಿನಲ್ಲಿ ಹೆಚ್ಚುವರಿಯಗಿರುವ ಪುನರ್ವಸತಿ ಕೇಂದ್ರವನ್ನು ಕಟ್ಟಾಯಕ್ಕೆ ವರ್ಗಾಯಿಸಬೇಕು. ಆಲೂರಿನಲ್ಲಿ 100 ಬೆಡ್‌ಗಳ ಆಸ್ಪತ್ರೆ ತೆರೆಯಬೇಕು ಎಂದು ಸಚಿವರ ಗಮನ ಸೆಳೆದರು. ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ವೈದ್ಯರ ನಿಯೋಜನೆ ರದ್ಧತಿಯನ್ನು ತೆಗೆದು ಹಾಕಿ ಕೌನ್ಸೆಲಿಂಗ್ ನಿಯಮ ತೆಗೆದುಹಾಕಬೇಕು. ಜಿಲ್ಲೆಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎಂದರು. ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲಾ ಆಸ್ಪತ್ರೆಯಲ್ಲಿರುವ ಹಲವು ಕೊರತೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ಹೊಸ ಕಟ್ಟಡ, ಶೀಘ್ರ ಕಾರ್ಯಾರಂಭದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಉಪಾಧ್ಯಕ್ಷ ಬಿಳಿಚೌಡಯ್ಯ  ಅವರೂ ಸಹ ಜಿಲ್ಲೆಯಲ್ಲಿರುವ ವೈದ್ಯಕೀಯ ಸೌಲಭ್ಯಗಳ ಕೊರತೆ ಬಗ್ಗೆ ಸಚಿವರ ಗಮನಕ್ಕೆ ತಂದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಪಿ. ಸಿಂಗ್ ಇದ್ದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಂಕರ್, ಹಾಸನ ವೈದ್ಯಕೀಯ ಕಾಲೇಜಿನ ನಿರ್ದೇಶಕ  ಡಾ. ರಾಚೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಎಲ್. ಶ್ಯಾಮಲಾದೇವಿ, ತಾಲೂಕು ವೈದ್ಯಾಧಿಕಾರಿಗಳು ಸೇರಿದಂತೆ ನಾನಾ ಅಧಿಕಾರಿಗಳು ಸಚಿವರ ಪ್ರಶ್ನೆಗಳಿಗೆ ಉತ್ತರಿಸಿ ಹಲವು ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement