ಹುತಾತ್ಮ ಪೊಲೀಸರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಬೇಲೂರು: ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಹುತಾತ್ಮರ ದಿನಾಚರಣೆಗೆ ಅಂಗವಾಗಿ ತಾಲೂಕಿನ ಪ್ರಗತಿಪರ ಸಂಘಟನೆಗಳು ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಠಾಣೆ ಮುಂಭಾಗದ ಧ್ವಜ ಸಮೀಪದಲ್ಲಿ ಮೇಣದ ಬತ್ತಿ ಹಚ್ಚುವ ಮೂಲಕ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪ್ರಗತಿಪರ ಗೌರವಾಧ್ಯಕ್ಷ ಕೆ. ಸುದರ್ಶನ್, ಕರ್ನಾಟಕ ಪೊಲೀಸರು ಧೈರ್ಯ, ಸಾಹಸಗಳಿಗೆ ಹೆಸರುವಾಸಿಯಾಗಿದ್ದು, ಕಾನೂನು ಸುವ್ಯವಸ್ಥೆ ಪಾಲನೆ ಮಾಡುವಲ್ಲಿ ಮತ್ತು ಸಾರ್ವಜನಿಕರ ಆಸ್ತಿ ರಕ್ಷಣೆ ಹಾಗೂ ಅಪರಾಧ ತಡೆ, ಸಂಚಾರಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಪೊಲೀಸರು ಕೆಲ ಸಂದರ್ಭದಲ್ಲಿ ಸಮಾಜದ ಸುರಕ್ಷೆಗಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ ಎಂದರು. ಬೇಲೂರು ವೃತ್ತ ನೀರಿಕ್ಷಕ ಗಣೇಶ್ ಮಾತನಾಡಿ, ಪೊಲೀಸರ ಹುತಾತ್ಮರ ದಿನವನ್ನು ಸಾಮಾನ್ಯವಾಗಿ ಇಲಾಖೆಗಳು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಆದರೆ ಬೇಲೂರಿನ ಪ್ರಗತಿಪರ ಸಂಘಟನೆಗಳು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪೊಲೀಸರು ಮತ್ತು ಸಾರ್ವಜನಿಕರಲ್ಲಿ ಉತ್ತಮ ಬಾಂಧವ್ಯ ಬೆಳೆಯುತ್ತದೆ ಎಂದರು. ತಾಲೂಕು ಜಯ ಕರ್ನಾಟಕ ಅಧ್ಯಕ್ಷ ಐ.ಎನ್. ಅರುಣ್ಕುಮಾರ್, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಹಾಗೂ ಪತ್ರಕರ್ತ ರಾಘವೇಂದ್ರ ಹೊಳ್ಳ, ಬಿ.ಎಲ್. ಲಕ್ಷ್ಮಣ್, ಸೋಮೇಶ್, ಹೆಬ್ಬಾಳು ಸೋಮಣ್ಣ, ಶಿವರಾಜ್, ಪೊಲೀಸ್ ಅಧಿಕಾರಿಗಳಾದ ಚಂದ್ರಪ್ಪ, ರಾಜಶೇಖರ್ ಇತರರು ಇದ್ದರು.
ದತ್ತಮಾಲಾ ಅಭಿಯಾನಕ್ಕೆ ಚಾಲನೆ
ಕ.ಪ್ರ. ವಾರ್ತ್ಣೆ ಸಕಲೇಶಪುರ ಅ.23
ಶ್ರೀರಾಮ ಸೇನೆ ವತಿಯಿಂದ ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಾಲ್ಕು ದಿನಗಳ ಉಚಿತ ದತ್ತಮಾಲಾ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಮೊದಲ ದಿನವಾದ ಬುಧವಾರ ಸುಮಾರು 25ಕ್ಕೂ ಹೆಚ್ಚಿನ ಭಕ್ತಾದಿಗಳು ದತ್ತಮಾಲೆ ಧರಿಸುವ ಮೂಲಕ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆ ಅಧ್ಯಕ್ಷ ಉಮೇಶ್, ಈ ತಿಂಗಳ 27ರವರೆಗೆ ಉಚಿತ ದತ್ತಮಾಲಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಸುಮಾರು 500 ಭಕ್ತರು ದತ್ತಮಾಲೆ ಧಾರಿಗಳಾಗಲಿದ್ದಾರೆ. ಅ.25ರಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ನೇತೃತ್ವದಲ್ಲಿ ದತ್ತಮಾಲಾ ಜಾಥಾವನ್ನು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ನ್ಯಾ. ಚಂದ್ರಶೇಖರ್ ಅವರಿಗೆ ಸನ್ಮಾನ
ಹಾಸನ: ಅರಕಲಗೂಡಿನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿದ ಎ.ವಿ. ಚಂದ್ರಶೇಖರ್ ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ರಾಷ್ಟ್ರಪತಿ ಅಂಕಿತ ಹಾಕಿರುವುದಾಗಿ ತಿಳಿದು ಬಂದಿದೆ.
ಚಂದ್ರಶೇಖರ್ ಅವರಿಗೆ ಅ.24ರಂದು ಉಚ್ಚ ನ್ಯಾಯಾಲಯದಲ್ಲಿ ಪ್ರಮಾಣ ವಚನವನ್ನು ಮುಖ್ಯ ನ್ಯಾಯಮೂರ್ತಿಗಳು ಬೋಧಿಸಲಿದ್ದಾರೆ. ನೈಗೆರೆ ಶ್ಯಾನುಭೋಗ್ ದಿ. ಎ.ಪಿ. ವೆಂಕಟರಾಮಯ್ಯ ಅವರ ಮಗ ಎ.ವಿ. ಚಂದ್ರಶೇಖರ್ ಅವರು ಹೊಳೆನರಸೀಪುರದ ವಕೀಲ ಎ. ತಾಂಡವೇಶ್ವರ್ ಅವರ ಮಾರ್ಗದರ್ಶನದಲ್ಲಿ ವೃತ್ತಿ ಪ್ರಾರಂಭಿಸಿ 1996ರಲ್ಲಿ ನೇರ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡು ಉಡುಪಿ, ಕೋಲಾರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪ್ರಧಾನ ನ್ಯಾಯಾಧೀಶರಾಗಿದ್ದರು. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಗಳ ಪ್ರಧಾನ ನ್ಯಾಯಾಧೀಶರಾಗಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರಾಗಿಸಿ ಅನುಭವ ಹೊಂದಿದ್ದಾರೆ.