ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಸೀಕೆರೆ ಗಣೇಶ ವಿಸರ್ಜನೆಗೆ ಚಾಲನೆ

Srinivasa Murthy VN
Updated On : 26 Oct 2013, 12:12 pm

ಕನ್ನಡಪ್ರಭ ವಾರ್ತೆ ಅರಸೀಕೆರೆ ಅ. 25
ನಾಡಿನಲ್ಲೇ ಹೆಸರಾಗಿದ್ದ ಅರಸೀಕೆರೆ ಅದ್ಧೂರಿ ಗಣೇ ವಿಸರ್ಜನೋತ್ಸವಕ್ಕೆ ಶುಕ್ರವಾರ ಸಂಜೆ 4.30ಕ್ಕೆ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಾನಾ ಪೂಜೆ-ಪುನಸ್ಕಾರಗಳನ್ನು ನೆರವೇರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಪ್ರಸನ್ನ ಗಣಪತಿ ಆಸ್ಥಾನ ಮಂಟಪದಿಂದ ಪುಷ್ಪಾಲಂಕೃತ ರಥದಲ್ಲಿ ಶೃಂಗಾರಗೊಂಡ ಮೆರವಣಿಗೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಹಾಸನ ವೃತ್ತದಿಂದ ಜಾನಪದ ಕಲಾ ತಂಡಗಳೊಂದಿಗೆ ಸುಮಾರು 20 ಸಾವಿರಕ್ಕೂ ಜನಸ್ತೋಮದೊಂದಿಗೆ ಹೊರಟು ಗ್ರಂಥಾಲಯ ರಸ್ತೆ, ಶ್ಯಾನುಭೋಗರ ಬೀದಿಯ ಮೂಲಕ ಶಿವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಪೇಟೆಬೀದಿಯ ಮೂಲಕ ಮೆರವಣಿಗೆ ಸಾಗಿ ಹೋಗುತ್ತಿದ್ದರೆ ನೆರೆದಿದ್ದ ಜನಸ್ತೋಮ  ಮೆರವಣಿಗೆಯಲ್ಲಿ ಮಡಿಕೇರಿ ಟ್ಯಾಬ್ಲೋ, ಕೇರಳದ ಚಂಡೆವಾದ್ಯ, ತಮಿಳುನಾಡಿನ ತಂಜಾವೂರು ನಾಯಂಡಿ ಗ್ರೂಪ್ ವತಿಯಿಂದ ಆಯೋಜಿಸಿರುವ ಆಕರ್ಷಕ ಕೀಲುಕುದುರೆ, ನಾಯಂಡಿ ಮೇಳ, ರೋಡ್ ಆರ್ಕೆಸ್ಟ್ರಾ, ಕರಡೇವಾದ್ಯ, ವೀರಭದ್ರದೇವರ ಕುಣಿತ, ವೀರಗಾಸೆ ನೃ, ಅಣ್ಣಮ್ಮದೇವಿ ತಮಟೆವಾದ್ಯ, ನಂದಿಧ್ವಜ ಪೂಜಾ ಕುಣಿತ, ಮಂಗಳೂರಿನ ಯಕ್ಷಗಾನ, ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳ ನರ್ತನ ಕಂಡ ಜನ ಬೆಕ್ಕಸ ಬೆರಗಾಗಿ ಗತಕಾಲದ ಇತಿಹಾಸ ಮರುಕಳಿಸಿದೆ ಎಂದು ಉದ್ಘರಿಸಿದರು.ಮೆರವಣಿಗೆ ವಾಚನಾಲಯ ರಸ್ತೆ ಮಾರ್ಗವಾಗಿ ಪೇಟೆ ಬೀದಿ, ಬಿಹೆಚ್.ರಸ್ತೆ, ಕೃಷಿ ಉತ್ಪನ್ನ ಮಾರುಕಟ್ಟೆ ಆವರಣ, ಲಕ್ಷ್ಮೀಪುರ, ರೇಲ್ವೆ ನಿಲ್ದಾಣ ರಸ್ತೆ, ರಂಗೇಗೌಡರ ಬೀದಿ, ಹಾಸನ ರಸ್ತೆ ಸೇರಿದಂತೆ ನಾನಾ ಬಡಾವಣೆಗಳಲ್ಲಿ ಸಂಚರಿಸಲಿದೆ. ಈ ವೇಳೆ ಸದ್ಭಕ್ತರು ಮಹಾಮಂಗಳಾರತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.ಅಭೂತಪೂರ್ವ ಭದ್ರತೆ: ಕಳೆದ ಬಾರಿಯಂತೆ ಅಹಿತಕರ ಘಟನೆ ಜರುಗಬಾರದೆಂಬ ಉದ್ದೇಶದಿಂದ ಮೆರವಣಿಗೆಗೆ ಅಭೂತಪೂರ್ವ ಬಿಗಿ ಭದ್ರತೆ ಕಲ್ಪಿಸಲಾಗಿದೆ.  
 ಡಿವೈಎಸ್ಪಿ 2, ಸಿಪಿಐ 9, ಪಿಎಸ್‌ಐ. 23, ಎಎಸ್‌ಐ 23, ಮುಖ್ಯ ಪೇದೆಗಳು 59, ಪೇದೆಗಳು 157, ಮಹಿಳಾ ಪೊಲೀಸರು 10, ಹಾಗೂ 197 ಮಂದಿ ಗೃಹರಕ್ಷಕ ದಳ  ಸಿಬ್ಬಂದಿ ನಿಯೋಜಿಸಲಾಗಿದೆ. ಪಟ್ಟಣದಲ್ಲಿ ಹಲವೆಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.
ಭಕ್ತಮಂಡಳಿ ಅಧ್ಯಕ್ಷ ಸುಬ್ಬಣ್ಣ, ಕಾರ್ಯದರ್ಶಿ ಶಾಂತವೀರಪ್ಪ, ರಾಜಣ್ಣ, ಪರಪ್ಪ, ನಾಗಭೂಷಣ, ಮಾಜಿ ಶಾಸಕರಾದ ಜಿ.ಎಸ್.ಪರಮೇಶ್ವರಪ್ಪ, ಎ.ಎಸ್.ಬಸವರಾಜ್, ಪುರಸಭಾಧ್ಯಕ್ಷ ಮೋಹನ್‌ಕುಮಾರ್, ಉಪಾಧ್ಯಕ್ಷೆ ಭಾಗ್ಯಲತಾ ಮಂಜುನಾಥ್, ತಾಪಂ ಅಧ್ಯಕ್ಷ ಹೆಚ್.ಟಿ,ಶಿವಮೂರ್ತಿ, ಉದ್ಯಮಿ ಅರುಣ್‌ಕುಮಾರ್, ಪುರಸಭೆ ಸದಸ್ಯರಾದ ಪಂಚಾಕ್ಷರಿ, ಮಂಜುನಾಥ್, ಫೈರೋಜ್‌ಖಾನ್, ನಾಜೀಮಾ, ಬಿಜೆಪಿ ತಾಲೂಕು ಕಾರ್ಯದರ್ಶಿ ಮನೋಜ್‌ಕುಮಾರ್, ಕೆ.ಎನ್.ದುರ್ಗಪ್ಪಶೆಟ್ಟಿ, ಎ.ಎಲ್.ನಾರಾಯಣ್ ಸೇರಿದಂತೆ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದೆ ವೇಳೆ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement