ಕಣ್ಣುಗಳ ಆರೋಗ್ಯ ನಿರ್ಲಕ್ಷ್ಯ ಸಲ್ಲ
ಕ.ಪ್ರ.ವಾರ್ತೆ ಹೊಳೆನರಸೀಪುರ ಅ.25
ನೋಡುವ ಹಕ್ಕು ಮನುಷ್ಯನ ಮೂಲಭೂತ ಹಕ್ಕುಗಳಲ್ಲೊಂದಾಗಿದ್ದು, ಯಾವ ನಾಗರಿಕನೂ ಕೂಡ ಅನಾವಶ್ಯಕವಾಗಿ ಕುರುಡಾಗುವಂತಾಗಬಾರದು ಅಥವಾ ಕುರುಡಾಗಿರುವ ವ್ಯಕ್ತಿಯು ಹಾಗೆಯೇ ಇರುವಂತಾಗಬಾರದು ಈ ನಿಟ್ಟಿನಲ್ಲಿ ಅತ್ಯಮೂಲ್ಯ ಕಣ್ಣುಗಳ ರಕ್ಷಣೆಗೆ ಅಗತ್ಯ ಎಚ್ಚರಿಕೆಗಳನ್ನು ವಹಿಸುವುದು ಅವಶ್ಯಕ ಎಂದು ಪಟ್ಟಣದ ನೇತ್ರ ತಜ್ಞ ಡಾ.ಕೆ.ಶ್ರೀನಿವಾಸಮೂರ್ತಿ ಕಿವಿಮಾತು ಹೇಳಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಕಣ್ಣಿನ ಮಹತ್ವ, ಅವುಗಳ ರಕ್ಷಣೆ, ಹಾಗೂ ಕಣ್ಣುಗಳಿಗೆ ಸಂಬಂಧಿಸಿದಂತೆ ಎದುರಾಗಬಹುದಾದ ಸಮಸ್ಯೆಗಳು ಹಾಗೂ ಇರುವ ಪರಿಹಾರಗಳ ಕುರಿತು ಮಾಹಿತಿ ನೀಡಿದ ಅವರು, ಕಣ್ಣಿನ ಕುರಿತಾದ ನಮ್ಮ ಒಂದು ಸಣ್ಣ ಪ್ರಮಾಣದ ನಿರ್ಲಕ್ಷ್ಯತೆಯು ನಮ್ಮ ದೃಷ್ಟಿಯನ್ನು ಕಿತ್ತುಕೊಂಡು ಶಾಶ್ವತ ಅಂಧತ್ವ ತರಬಹುದು ಎಂದು ಎಚ್ಚರಿಸಿದರು.
ಮಕ್ಕಳ ಬಗ್ಗೆ ಎಚ್ಚರಿಂದಿದರಬೇಕು: ಸಾಮಾನ್ಯವಾಗಿ ಮಕ್ಕಳಲ್ಲಿ ಕಣ್ಣಿನ ಕುರಿತಂತೆ ಅಪಾಯಗಳು ಎದುರಾಗುವ ಸಂಭವಗಳು ಹೆಚ್ಚಾಗಿದ್ದು, ಈ ಕಾರಣದಿಂದಾಗಿಯೇ ಪೋಷಕರುಗಳು ತಮ್ಮ ಮಕ್ಕಳಿಗೆ ಹಾಗೂ ತಾವುಗಳೂ ಕೂಡ ಕಣ್ಣಿನ ಆರೈಕೆ ಹಾಗೂ ಪೋಷಣೆ ಕುರಿತಂತೆ ಉಪಯುಕ್ತ ಮಾಹಿತಿ ಹೊಂದಿರುವುದು ಅವಶ್ಯಕ ಎಂದು ಕಿವಿಮಾತು ಹೇಳಿದರು.
ನಾಗರಿಕರು ಜಾಗೃತರಾಗಬೇಕು: ಒಂದು ವೇಳೆ ಸೂಕ್ತ ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ನೆರವಿನಿಂದ ಮನುಷ್ಯನ ದೃಷ್ಟಿಯು ಹಾಳಾಗುವುದನ್ನು ತಪ್ಪಿಸಲು ಸಾಧ್ಯವಾಗುವುದಾದರೆ, ಇಲ್ಲವೇ ಈಗಾಗಲೇ ಹಾಳಾಗಿರುವ ದೃಷ್ಟಿಯನ್ನು ಮತ್ತೆ ಸರಿಪಡಿಸಬಹುದಾದರೆ, ಅಂತಹ ಕೆಲಸವನ್ನು ಪ್ರಜ್ಞಾವಂತ ಸಮಾಜ ಅಗತ್ಯವಾಗಿ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು. ಅರವಳಿಕೆ ತಜ್ಞ ಡಾ.ವಿಜಯಕುಮಾರ್ ಮಾತನಾಡಿ, ದೃಷ್ಟಿ ಇರುವವರು ದೃಷ್ಟಿ ಇಲ್ಲದವರಿಗೆ ಮಾನವೀಯತೆ ನೆಲೆಯಲ್ಲಾದರೂ ನೆರವಾಗಬೇಕು. ಮಾತ್ರವಲ್ಲ, ನಮ್ಮ ಮರಣಾನಂತರದಲ್ಲಿ ನಮ್ಮ ಕಣ್ಣುಗಳು ನಮ್ಮೊಂದಿಗೇ ಮಣ್ಣಾಗುವ ಬದಲಿಗೆ ನಮ್ಮೆರಡು ಕಣ್ಣುಗಳು ಇನ್ನಿಬ್ಬರ ಅಂಧಕಾರದ ಬಾಳಿಗೆ ಬೆಳಕು ನೀಡುವಂತಾದರೆ ನಮ್ಮ ಜನ್ಮ ಸಾರ್ಥಕವಾದಂತೆ, ಆದ್ದರಿಂದಲೇ ದಯಮಾಡಿ ನಮ್ಮ ಮರಣದ ನಂತರದಲ್ಲಿ ಇನ್ನೊಬ್ಬರಿಗೆ ದೃಷ್ಟಿ ನೀಡಲು ಸಹಕರಿಸಿ ಎಂದರು.
ಪಟಾಕಿ ಬೇಡ: ಹಬ್ಬ ಹರಿದಿನಗಳಲ್ಲಿ ಹಚ್ಚುವ ಪಟಾಕಿಗಳು ಕಣ್ಣಿಗೆ ಅತಿ ಹೆಚ್ಚಿನ ಹಾನಿಯುಂಟುಮಾಡುವ ಸಂಭವ ಇದ್ದು, ಹಿರಿಯರು ಈ ಸಂದರ್ಭದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಿ ಜಾಗೃತ ಸಮಾಜವನ್ನು ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.
ಹಿರಿಯ ನೇತ್ರಾಧಿಕಾರಿ ಲೀಲಾಗಂಗಾಧರ್, ಹಳ್ಳಿಮೈಸೂರು ಸಾರ್ವಜನಿಕ ಆಸ್ಪತ್ರೆಯ ನೇತ್ರಾಧಿಕಾರಿ ಡಾ.ನಂದೀಶ್, ಕಿರಿಯ ಪುರುಷ ಆರೋಗ್ಯಾಧಿಕಾರಿ ಜೆ.ಟಿ.ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.