ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗ್ರಾಮ ಸಮಾಲೋಚನಾ ಸಭೆ

Srinivasa Murthy VN
Updated On : 26 Oct 2013, 12:17 pm

ಹೊಳೆನರಸೀಪುರ: ತಾಲೂಕಿನ ಹಳೆಕೋಟೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮ ಸಮಾಲೋಚನಾ ಸಭೆ ಹಾಗೂ ಸ್ವಸಹಾಯ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಗುತ್ತಿಗೆದಾರ ಎಚ್.ಜಿ. ರಮೇಶ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಗ್ರಾಮಾಭಿವೃದ್ಧಿ ಯೋಜನೆ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳು ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸಲು ಹಾಕಿಕೊಂಡ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಗ್ರಾಮಗಳ ಜನರು ಅದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಯೋಜನೆಯ ಜಿಲ್ಲಾ ನಿರ್ದೇಶಕಿ ಜಯಶೀಲಾ ಮಾತನಾಡಿ, ಯೋಜನೆಯು ಲೋಕ ಕಲ್ಯಾಣಕ್ಕಾಗಿ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದ ಸವಿನೆನಪಿಗಾಗಿ ಪೂಜ್ಯರು ಹಾಕಿಕೊಂಡ ಯೋಜನೆಯಾಗಿದ್ದು, ಯೋಜನೆಯಲ್ಲಿ ಗ್ರಾಮಗಳ ಅಭಿವೃದ್ಧಿಗಾಗಿ ನಾನಾ ಕಾಲಘಟ್ಟಗಳಲ್ಲಿ 49 ಪ್ರಮುಖ ಕಾರ್ಯಕ್ರಮ ರೂಪಿಸಿದ್ದು, ಅವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಜನರು ಮುಖ್ಯವಾಗಿ ಎರಡು ರೀತಿಯ ಬಡತನಗಳಿಂದ ಬಳಲುತ್ತಿದ್ದು ಇದರಲ್ಲಿ ಒಂದು ಹಣದಿಂದ, ಇನ್ನೊಂದು ಮಾಹಿತಿ ಕೊರತೆ ಇವುಗಳಲ್ಲಿ ಎರಡನೆಯದಾದ ಬಡತನ  ನೀಗಿಸಲು ಯೋಜನೆ ತನ್ನದೇ ಆದ ಸಿಬ್ಬಂದಿ ವರ್ಗ ಹೊಂದಿದ್ದು ಸಂಪೂರ್ಣವಾಗಿ ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು  ತಿಳಿಸಿದರು.
ಮುಖ್ಯ ಅತಿಥಿ ಸ್ಥಾನ ವಹಿಸಿದ್ದ ನಿವೃತ್ತ ಶಿಕ್ಷಕ ಬಸವಯ್ಯ ಮಾತನಾಡಿ,  ಜನರು ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಯ ಮಾಹಿತಿ ಪಡೆಯಬೇಕೇ ಹೊರತು ಸಾಲಕ್ಕಾಗಿ ಸಾಲ ಮಾಡಿ, 'ಸಾಲ ಮಾಡಿ ಓಲೆ ತಂದ ಓಲೆ ಮಾರಿ ಬಡ್ಡಿ ಕಟ್ಟಿದ' ಎಂಬ ನಾಣ್ಣುಡಿಯಂತೆ ನಷ್ಟ ಅನುಭವಿಸಬಾರದು. ಕುರಿ ಸಾಕಾಣಿಕೆಯಂತಹ ಚಟುವಟಿಕೆಗಳ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಎಚ್.ಕೆ. ಬಸವರಾಜು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣರ ಬದುಕು ಬೆಳಗಿಸಲು ಪ್ರಯತ್ನಿಸುತ್ತಿದೆ ಎಂದರು.
ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಪುರುಷೋತ್ತಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ. ಸದಸ್ಯರಾದ ಮಹಾಲಿಂಗಪ್ಪ, ಅಂಬುಜ, ಚಂದ್ರಮ್ಮ ಉಪಸ್ಥಿತರಿದ್ದರು. ಯೋಜನೆಯ ಕೃಷಿ ಅಧಿಕಾರಿ ಚಂದ್ರಪ್ಪ ಸ್ವಾಗತಿಸಿದರು. ಮೇಲ್ವಿಚಾರಕ ಮಧುಕುಮಾರ್ ನಿರೂಪಿಸಿದರು. ಸೇವಾ ಪ್ರತಿನಿಧಿ ಇಂದ್ರಾಣಿ ವಂದಿಸಿದರು. ಸುಮಾರು 150 ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೆದ್ದಾರಿಗಳಲ್ಲಿ ಹೆಲ್ಮೆಟ್ ಕಡ್ಡಾಯ: ಎಸ್ಪಿ
ಹಾಸನ:
ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ತಿಳಿಸಿದ್ದಾರೆ.  
ಹಾಸನ ಜಿಲ್ಲೆಯ ಹಿರೀಸಾವೆ, ಚನ್ನರಾಯಪಟ್ಟಣ, ಶಾಂತಿಗ್ರಾಮ, ಹಾಸನ, ಆಲೂರು, ಸಕಲೇಶಪುರಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಹಾಗೂ ಅರಸೀಕೆರೆ, ಬಾಣಾವರಗಳಲ್ಲಿ  ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-206ರಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು  ಕಡ್ಡಾಯವಾಗಿ ಹೆಲ್ಮೆಟ್ ಧರಿಸತಕ್ಕದ್ದು.
ನಿಯಮಗಳನ್ನು ಪಾಲಿಸದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಹಾಸನ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದು ಕಡ್ಡಾಯವಿಲ್ಲದಿದ್ದರೂ ಸುರಕ್ಷತಾ ದೃಷ್ಟಿಯಿಂದ ದ್ವಿಚಕ್ರ ವಾಹನ ಸವಾರರು ಸ್ವಯಂ ಪ್ರೇರಣೆಯಿಂದ ಹೆಲ್ಮೆಟ್ ಧರಿಸುವಂತೆ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement