ಚನ್ನರಾಯಪಟ್ಟಣ ಗಣೇಶ ವಿಸರ್ಜನೆ 28 ರಂದು
ಚನ್ನರಾಯಪಟ್ಟಣ: ಪಟ್ಟಣದ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಪಟ್ಟಣದ ಗಣಪತಿ ಪೆಂಡಾಲ್ನಲ್ಲಿ ಪ್ರತಿಷ್ಠಾಪಿಸಿರುವ ಗೌರಿ-ಗಣೇಶ ಮೂರ್ತಿಯನ್ನು ಅ.28ರಂದು ವಿಸರ್ಜಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಸಿ.ಎನ್ ಅಶೋಶ್ ಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ತಿಯನ್ನು ಗೌರಿ ಗಣೇಶ ಹಬ್ಬದಂದು ಪ್ರತಿಷ್ಠಾಪಿಸಿ 48 ದಿನಗಳ ಕಾಲ ಮೂರ್ತಿಗೆ ವಿವಿದ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಾಗಿದೆ ಎಂದು ತಿಳಿಸಿದರು. ವಿಸರ್ಜನೆ ಅಂಗವಾಗಿ ಅ.27ರಂದು ಬೆಳಗ್ಗೆ ಪುರಸಭಾಧ್ಯಕ್ಷ ಮಂಜಣ್ಣ ನೇತೃತ್ವದಲ್ಲಿ ಹೋಮ ಹಾಗೂ ವಿವಿದ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದ್ದು, ರಾತ್ರಿ ಪೂರ್ಣ ನಡೆಯುವ ಉತ್ಸವದ ಅಂಗವಾಗಿ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಟ ಶಿವರಾಜ್ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಲೇಸರ್ ಷೋ, ಪಟಾಕಿ ಪ್ರದರ್ಶನ ಏರ್ಪಡಿಸಲಾಗಿದೆ. ಅ.28ರಂದು ಮುಂಜಾನೆ ವಿಶೇಷ ಅಲಂಕೃತ ವಾಹನದಲ್ಲಿ ವಿವಿದ ಸ್ತಬ್ಧ ಚಿತ್ರಗಳೊಂದಿಗೆ ಮೆರವಣಿಗೆ ನಡೆಸಿ ಸಂಜೆ ಪಟ್ಟಣದ ಹೊರ ವಲಯದ ಅಮಾನಿಕೆರೆಯಲ್ಲಿ ವಿಸರ್ಜನೆ ನಡೆಸಲಾಗುವುದು.
ವಾಸವಾಂಬ ಬ್ಯಾಂಕ್ ಶತಮಾನೋತ್ಸವ
ಹೊಳೆನರಸೀಪುರ: ಇಲ್ಲಿನ ವಾಸವಾಂಬ ಕೋ-ಆಪರೇಟಿವ್ ಬ್ಯಾಂಕ್ಗೆ ನೂರು ವರ್ಷ ತುಂಬುತ್ತಿದ್ದು, ಈ ಸವಿನೆನಪಿಗಾಗಿ ಶತಮಾನೋತ್ಸವ ಸಮಾರಂಭವನ್ನು ಅ.26 ಮತ್ತು 27 ರಂದು ಆಚರಿಸಲಾಗುವುದೆಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ.ಆರ್.ರವಿಕುಮಾರ್ ತಿಳಿಸಿದ್ದಾರೆ. ಇಂದು ವಾಸವಾಂಬ ಕೋ ಆಪರೇಟಿವ್ ಬ್ಯಾಂಕ್ ಆಗಿ ಸೇವೆ ನೀಡುವಲ್ಲಿ ಯಶಸ್ವಿಗೊಂಡಿದ್ದು, ಶತಮಾನ ಸಮಾರಂಭವನ್ನು ಅರ್ಥಪೂರ್ಣ ಎರಡು ದಿನಗಳ ಕಾಲ ನಡೆಯಲಿದೆ ಎಂದರು. ಗುತ್ತಮ್ಮ ತಮ್ಮೇಗೌಡ ಕಲ್ಯಾಣಮಂಟಪದಲ್ಲಿ ನಡೆಯಲಿರುವ ಸಮಾರಂಭವನ್ನು ಅ.26 ರಂದು ಬೆಳಗ್ಗೆ 10.45ಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.ಪುಷ್ಪಗಿರಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಡಿ.ಎಚ್.ಶಂಕರಮೂರ್ತಿ ಭಾಗವಹಿಸಲಿದ್ದಾರೆ. ಸಹಕಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ನೂತನ ನಗದುಪತ್ರ ಬಿಡುಗಡೆ ಮಾಡಲಿದ್ದಾರೆ ಎಂದು ವಿವರಿಸಿದರು.