ರಸ್ತೆಯಲ್ಲೇ ಸರ್ಕಸ್ ನೋಡೋಣ ಬನ್ನಿ...!
-ದಯಾಶಂಕರ ಮೈಲಿ
ಹಾಸನ: ನಗರದಲ್ಲಿ ಉತ್ತಮ ರಸ್ತೆಗಳು ಸೂಕ್ಷ್ಮದರ್ಶಕದಲ್ಲಿ ಹುಡುಕಿದರೂ ಸಿಗುವುದಿಲ್ಲ. ರಸ್ತೆಗಳೆಲ್ಲಾ ಗುಂಡಿಮಯವಾಗಿವೆ. ಜನರು ಜೀವ ಹಿಡಿದುಕೊಂಡು ಗುಂಡಿಗಳಿಂದ ತುಂಬಿರುವ ರಸ್ತೆಗಳಲ್ಲಿ ಸಂಚರಿಸಬೇಕಾದ ದುಸ್ಥಿತಿ ಇದ್ದರೆ, ವಾಹನ ಸವಾರರು ಚಾಲನೆ ಮಾಡಲು ಹರಸಾಹಸ ಪಡುವುದು ಮೂಮೂಲಿ ದೃಶ್ಯವಾಗಿದೆ.
ದಿನೇ ದಿನೇ ಜನಸಂಖ್ಯೆ ಜೊತೆಯಲ್ಲೇ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಈಗೆಲ್ಲಾ ಸೈಕಲ್ಗಳು ಕಡಿಮೆಯಾಗಿ ಹೆಚ್ಚು ಕಡಿಮೆ ಎಲ್ಲಾರೂ ಬೈಕ್ ಮತ್ತು ಕಾರುಗಳನ್ನು ಹೊಂದಿದ್ದಾರೆ.
ಆದರೆ ಜನ, ವಾಹನಗಳು ಹೆಚ್ಚಾದಂತೆ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡುತ್ತಿಲ್ಲ. ಹಾಸನ ನಗರ ಹಾಗೂ ಹೊರ ಜಿಲ್ಲೆಗಳಿಗೆ ಸಂಪರ್ಕಿಸುವ ರಸ್ತೆಗಳ ಸ್ಥಿತಿ ಹೇಳತೀರದು. ಪ್ರತಿ ದಿನ ರಸ್ತೆ ಅಪಘಾತಗಳು ಸಂಭವಿಸಿ, ಸಾವು ನೋವು ಘಟಿಸುವುದು ನಿರಂತರವಾಗಿದೆ.
ರಸ್ತೆಯಲ್ಲಿ ಬಿದ್ದಿರುವ ಆಳುದ್ದ ಗುಂಡಿಯಲ್ಲಿ ಮಳೆಗಾಲದಲ್ಲಿ ನೀರು ತುಂಬಿಕೊಂಡು ವಾಹನಗಳು ಸಂಚರಿಸಲು ಹರಸಾಹಸ ಪಡುವಂತಾದರೆ, ಮಳೆಗಾಲದ ನಂತರ ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದೇ ವಾಹನಗಳು ಅಪಘಾತಕ್ಕೀಡಾಗುತ್ತಿವೆ.
ಮತ್ತೊಂದು ಅಚ್ಚರಿ ಸಂಗತಿಯೆಂದರೇ, ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ಆಟೋ ಮತ್ತಿತರ ವಾಹನಗಳಲ್ಲಿ ಮಹಿಳೆಯರನ್ನು ಆಸ್ಪತ್ರೆಗೆ ಕರೆ ತರುವ ಮಾರ್ಗದಲ್ಲೇ ಹೆರಿಗೆ ಆಗಿರುವುದು ಘಟನೆ ನಡೆದಿವೆ ಎನ್ನಿ. ಅಷ್ಟರ ಮಟ್ಟಿಗೆ ರಸ್ತೆಗಳು ಗುಂಡಿಯಾಗಿವೆ. ರಸ್ತೆಗಳು ಎನ್ನುವುದಕ್ಕಿಂತ ಗುಂಡಿಗಳೇ ಎಂದೇ ಹೇಳುವುದು ಸೂಕ್ತವಾಗುತ್ತದೆ.
ಹಾಸನದಿಂದ ದುದ್ದ ಮಾರ್ಗವಾಗಿ ತಿಪಟೂರು ಸಂಪರ್ಕಿಸುವ ರಸ್ತೆ, ಹಾಸನ- ಗೊರೂರು ಸಂಪರ್ಕಿಸುವ ರಸ್ತೆ, ಅಭಿವೃದ್ಧಿಗೆ ಸಂಬಂಧಪಟ್ಟವರು ಮುಂದಾಗುತ್ತಿಲ್ಲ. ಹಾಸನ-ದುದ್ದ-ತಿಪಟೂರು ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯ ರಸ್ತೆ ಸಾರಿಗೆ ಬಸ್ ಟೈರ್ಗಳು ಪಂಚರ್ ಆಗಿ ಪ್ರಯಾಣಿಕರು ವ್ಯಥೆ ಪಡುತ್ತಿದ್ದಾಗಿದ್ದರೂ ಸಹ ಸರ್ಕಾರವಾಗಲೀ ಹಾಗೂ ಜಿಲ್ಲಾಡಳಿತವಾಗಲೀ ಗಮನ ಹರಿಸುತ್ತಿಲ್ಲ.ಇನ್ನೂ ಹಾಸನದಿಂದ ಆರಕಲಗೂಡಿಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಯು ಹಾಸನ ಕ್ಷೇತ್ರ, ಸಕಲೇಶಪುರ-ಆಲೂರು-ಕಟ್ಟಾಯ ಕ್ಷೇತ್ರ ಮತ್ತು ಅರಕಲಗೂಡು ಕ್ಷೇತ್ರಕ್ಕೆ ಒಳಪಡಿಸುವುದರಿಂದ ಇಲ್ಲಿನ ಈ ಮೂವರು ಶಾಸಕರು ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಮಾಡಿಸುವಂತಹ ಪ್ರಯತ್ನ ಮಾಡಿಲ್ಲ. ಚಾಲಕರು ಜೀವ ಬಿಗಿ ಹಿಡಿದು ವಾಹನ ಚಾಲನೆ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ಈಗ ಮಳೆಗಾಲ ಆಗಿರುವುದರಿಂದ ನೀರು ತುಂಬಿಕೊಂಡು ಗುಂಡಿಗಳು ಕಾಣದಾಗಿವೆ. ಇದು ಅಪಘಾತಗಳಿಗೆ ಅಹ್ವಾನ ನೀಡುತ್ತಿದೆ. ಕೆಲವೆಡೆ ಗುಂಡಿ ಮುಚ್ಚಲು ಹಾಕಿರುವ ಮಣ್ಣಿನಿಂದ ರಸ್ತೆ ಕೆಸರುಗದ್ದೆಯಾಗಿದೆ. ರಸ್ತೆಯಲ್ಲಿ ಪ್ರತಿ ನಿತ್ಯ ಸಂಚರಿಸುವ ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ.
ಬಿಜೆಪಿ ಸರ್ಕಾರದ ಹಾದಿ ಕೈ ಸರ್ಕಾರ: ಹಿಂದಿನ ಬಿಜೆಪಿ ಸರ್ಕಾರ ಸರಿಯಾಗಿ ಹಣವನ್ನು ಬಿಡುಗಡೆ ಮಾಡದೇ ವಿಳಂಬ ಮಾಡಿರುವುದು ಹಾಗೂ ರಾಜಕೀಯ ದ್ವೇಷದಿಂದ ಜಿಲ್ಲೆಯನ್ನು ಕಡೆಗಣಿಸಿದ ಪರಿಣಾಮವಾಗಿ ಸಾಕಷ್ಟು ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತು ಹೋಗಿವೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಜನರು ಕಾಂಗ್ರೆಸ್ ಸರ್ಕಾರದಲ್ಲಾದರೂ ಅಭಿವೃದ್ಧಿ ಕಾಣಬಹುದು ಎಂಬ ಆಸೆ ಹೊಂದಿದ್ದರು. ಆದರೆ 5 ತಿಂಗಳಾದರೂ ಯಾವುದೇ ಕ್ರಮ ಜರುಗಿಸದೇ ಇರುವುದರಿಂದ ಕಾಂಗ್ರೆಸ್ ಸರ್ಕಾರವೂ ಅನ್ಯಾಯ ಮಾಡುತ್ತಿದೆ ಎಂದು ವಿಷಾದಿಸಲಾಗುತ್ತಿದೆ.
ಸರ್ಕಾರ ಕೇವಲ ಸಬೂಬು ಹೇಳುವ ಬದಲು ಹಾಳಾಗಿರುವ ರಸ್ತೆ ಗಳ ಅಭಿವೃದ್ಧಿಗೆ ಮನಸ್ಸು ಮಾಡಲಿ ಎಂಬ ಸಾರ್ವಜನಿಕರು ಮನವಿಗೆ ಸರ್ಕಾರ ಸ್ಪಂದಿಸಬೇಕು.