ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೇಲ್ವೆ ಮೇಲ್ಸೇತುವೆಗೆ ಆಗ್ರಹಿಸಿ ಪ್ರತಿಭಟನೆ

Srinivasa Murthy VN
Updated On : 26 Oct 2013, 12:11 pm

ಕ.ಪ್ರ.ವಾರ್ತೆ ಹಾಸನ ಅ.25
ಹೈಟೆಕ್ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ರೇಲ್ವೆ ಹಳಿ ಹಾದು ಹೋಗಿದ್ದು, ಇಲ್ಲಿ ಮೇಲ್ಸುತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ರೇಲ್ವೆ ಹಳಿ ಮುಂದೆ ಕೆಲ ಸಮಯ ಧರಣಿ ನಡೆಸಿ ಕೂಡಲೇ ಮೇಲ್ಸುತುವೆ ನಿರ್ಮಿಸುವಂತೆ ಆಗ್ರಹಿಸಿ ರಸ್ತೆ ತಡೆಸಿದ ಪರಿಣಾಮ ಕೆಲ ಸಮಯ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಂತರ ಅವರು ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ನಗರದ ಹೃದಯ ಭಾಗವಾದ ಎನ್.ಆರ್.ವೃತ್ತದಿಂದ ಹೈಟೆಕ್ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ರೇಲ್ವೆ ಹಳಿ ಹಾದು ಹೋಗಿದೆ. ಮೇಲ್ಸುತುವೆ ಇಲ್ಲದ ಕಾರಣ ರೈಲು ಸಂಚರಿಸುವ ಸಂದರ್ಭದಲ್ಲಿ ಗಂಟೆಗಟ್ಟಲೆ ಕಾದು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸುಗಮ ವಾಹನ ಸಂಚಾರಕ್ಕೆ ತೀರಾ ತೊಂದರೆ ಉಂಟಾಗುತ್ತಿದೆ. ತುರ್ತು ಕಾರ್ಯಗಳಿಗೆ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಸಾರ್ವಜನಿಕರಿಗೆ ನರಕ ಯಾತನೆ: ರೇಲ್ವೆ ಗೇಟ್ ಬಂದ್ ಮಾಡುವುದರಿಂದ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡು ವಾಹನ ದಟ್ಟಣೆ ಹೆಚ್ಚಾಗಲಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಜೊತೆಗೆ ಸಮಯದ ವ್ಯರ್ಥವಾಗುತ್ತಿದ್ದು, ಕಿರಿದಾದ ಹಾಗೂ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಸಾರ್ವಜನಿಕರು ನರಕ ಯಾತನೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್.ಆರ್. ವೃತ್ತದಿಂದ ಹೈಟೆಕ್ ಬಸ್‌ನಿಲ್ದಾಣದವರೆಗೂ ರಸ್ತೆಗಳು ಗುಂಡಿ ಹಾಗೂ ಧೂಳಿನಿಂದ ಕೂಡಿದ್ದು, ಸಾರ್ವಜನಿಕರಿಗೆ ಓಡಾಡಲು ಬಹಳ ತೊಂದರೆಯಾಗುತ್ತಿದ್ದು, ಈ ರಸ್ತೆಯಲ್ಲಿ ಎಷ್ಟೋ ಅಪಘಾತ ನಡೆದು, ಸಾರ್ವಜನಿಕರು ಗಾಯಕ್ಕಾಳಕ್ಕಾಗಿ ದಿನನಿತ್ಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಜಿಲ್ಲಾಡಳಿತ ರಸ್ತೆ ಹದಗೆಟ್ಟಿರುವ ಕುರಿತು ಯಾವುದೇ ರೀತಿಯಲ್ಲಿಯೂ ತಲೆಕೆಡೆಸಿಕೊಳ್ಳುತ್ತಿಲ್ಲ ಎಂದು ದೂರಿದರು. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀರ ತೊಂದರೆಯಾಗಿದ್ದು, ಈ ಬಗ್ಗೆ ಲೋಕೋಪಯಾಗಿ ಇಲಾಖಾ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಈ ಕೂಡಲೇ ಕ್ರಮಕೈಗೊಂಡು ಮೇಲು ಸೇತುವೆ ಪ್ರಾರಂಭಿಸುವಂತೆ ಒತ್ತಾಯಿಸಿದರು.
ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಚ್.ಎನ್.ನಟೇಶ್, ಕಾರ್ಯದರ್ಶಿ ಬಿ.ಎಸ್.ನವೀನ್‌ಕುಮಾರ್, ತಾಲೂಕು ಅಧ್ಯಕ್ಷ ಬಿ.ವಿ.ಭಾನುಪ್ರಕಾಶ್, ಸಂಘಟನಾ ಕಾರ್ಯದರ್ಶಿ  ಸಯ್ಯದ್ ಮತ್ತಿತರರು ಪ್ರತಿಭಟನೆ  ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement