ವೈಭವದ ರಾಜ್ಯೋತ್ಸವ ಆಚರಣೆಗೆ ಪೂರ್ವಭಾವಿ ಸಭೆಯಲ್ಲಿ ನಿರ್ಣಯ
ಅರಸೀಕೆರೆ: ಪಟ್ಟಣದ ಬಸವರಾಜೇಂದ್ರ ಪೌಢಶಾಲಾ ಆವರಣದಲ್ಲಿ ನ.1 ರ ಶುಕ್ರವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ವೈಭವದಿಂದ ಆಚರಿಸಲು ಗುರುವಾರ ನಡೆದ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಪೂರ್ವ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಮಾತನಾಡಿ, ರಾಜ್ಯದ ಸಂಸ್ಕೃತಿಯ ಹಿರಿಮೆಯನ್ನು ಪರಿಚಯಿಸುವ ವಿವಿಧ ಸಾಂಸ್ಕೃತಿಕ ಕಲಾತಂಡಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಸೇರಿದಂತೆ ಸಮಗ್ರವಾಗಿ ಎಲ್ಲವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಬೇಕು ಎಂದು ಹೇಳಿದರು.
ಅಧಿಕಾರಿಗಳ ವಿರುದ್ಧ ಆಕ್ರೋಶ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಚರಿಸುವ ದಿನಾಚರಣೆ ಕಾರ್ಯಕ್ರಮಗಳಿಗೆ ಪ್ರತಿಬಾರಿಯೂ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಗೈರು ಹಾಜರಾಗುತ್ತಿದ್ದು, ಈ ಸಂಬಂಧ ತಹಸಿಸೀಲ್ದಾರ್ ಹೆಚ್ಚಿನ ಗಮನಹರಿಸಿ ಎಲ್ಲರೂ ಕಡ್ಡಾಯವಾಗಿ ಕಾರ್ಯಕ್ರಮಕ್ಕೆ ಹಾಜರಾಗಲು ಸೂಚನೆ ನೀಡಬೇಕೆಂದರು.
ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ತಹಸೀಲ್ದಾರ್ ಕೇಶವಮೂರ್ತಿ, ತಾಪಂ ಇಒ ಟಿ.ಎನ್.ಮೂರ್ತಿ, ಬಿಇಒ ಎಸ್.ಪಿ.ನಟರಾಜ್, ಪುರಸಭೆ ಅಧ್ಯಕ್ಷ ಮೋಹನ್‌ಕುಮಾರ್, ಉಪಾಧ್ಯಕ್ಷೆ ಭಾಗ್ಯಲತಾ, ಸದಸ್ಯ ಪಂಚಾಕ್ಷರಿ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಮತ್ತಿತರರು ಸಭೆಯಲ್ಲಿ ಇದ್ದರು.