ಸಭಾಪತಿ ಪ್ರವಾಸ
ರಾಜ್ಯ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರವಾಸ ಕಾರ್ಯಕ್ರಮದನ್ವಯ ಅ.26 ರಂದು ಬೆಳಿಗ್ಗೆ 10.15ಕ್ಕೆ ಹೊಳೆನರಸೀಪುರಕ್ಕೆ ಆಗಮಿಸುವರು. ಹೊಳೆನರಸೀಪುರದಲ್ಲಿ ಅಂದು ಬೆಳಿಗ್ಗೆ 11ಕ್ಕೆ ನಡೆಯುವ ಶ್ರೀವಾಸವಾಂಬ ಕೋ-ಆಪರೇಟೀವ್ ಬ್ಯಾಂಕ್ ಶತಮಾನೋತ್ಸವ ಸಮಾರಂಭದಲ್ಲಿ ಸಭಾಪತಿ ಭಾಗವಹಿಸುವರು.
ನ್ಯಾಯಾಲಯ ಕಟ್ಟಡ ಉದ್ಘಾಟನೆ ಇಂದು
ಹಾಸನ: ಅ.26 ರಂದು ಬೆಳಿಗ್ಗೆ 10.30ಕ್ಕೆ ಅರಕಲಗೂಡು ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಕಟ್ಟಡದ ಮೊದಲ ಅಂತಸ್ತಿನ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯ ನ್ಯಾಯಾಧೀಶ ವಿ.ಗೋಪಾಲಗೌಡ ಉದ್ಘಾಟಿಸುವರು. ಹಾಸನ ಜಿಲ್ಲಾ ನ್ಯಾಯಾಧೀಶ ಎಚ್.ಬಿಲ್ಲಪ್ಪ ಅಧ್ಯಕ್ಷತೆ ವಹಿಸುವರು. ನ್ಯಾಯಾಧೀಶರಾದ ಕೆ.ಎಲ್.ಮಂಜುನಾಥ್, ಎನ್.ಕೆ.ಪಾಟೀಲ್, ಕೆ.ಎನ್.ಕೇಶವನಾರಾಯಣ, ಅರವಿಂದ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಸಚಿವ ಟಿ.ಬಿ.ಜಯಚಂದ್ರ, ಶಾಸಕ ಎ.ಮಂಜು, ವಕೀಲರಾದ ಎ.ಸಿ.ಚಂದ್ರಶೇಖರ್, ಸಿ.ಆರ್.ಗೋಪಾಲಸ್ವಾಮಿ, ಬೋಜೇಗೌಡ,ತಿಮ್ಮೇಗೌಡ ಭಾಗವಹಿಸುವರು.
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪ್ರವಾಸ ಕಾರ್ಯಕ್ರಮದನ್ವಯ ಅ.26ರಂದು ಬೆಳಿಗ್ಗೆ 10.30ಕ್ಕೆ ಅರಕಲಗೂಡಿಗೆ ಆಗಮಿಸುವರು. ಅರಕಲಗೂಡಿನಲ್ಲಿ ನೂತನವಾಗಿ ನಿರ್ಮಿಸಿರುವ ನ್ಯಾಯಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.ನಂತರ ಸಚಿವರು ಮಧ್ಯಾಹ್ನ 12.45ಕ್ಕೆ ಗೊರೂರಿಗೆ ಆಗಮಿಸಿ ಹೇಮಾವತಿ ಜಲಾಶಯದ ಮುಂಭಾಗದಲ್ಲಿ ಉದ್ಯಾನವನ ನಿರ್ಮಿಸುವ ಕುರಿತು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸುವರು. ಮ. 3.30ಕ್ಕೆ ಮೈಸೂರಿಗೆ ಪ್ರಯಾಣ ಮಾಡುವರು.
ವಿದ್ಯುತ್ ವ್ಯತ್ಯಯ
ಅ.30 ರಂದು 66 ಕೆವಿ ವಿವಿ ಕೇಂದ್ರ ಹಳೇಬೀಡಿನಲ್ಲಿ ಬೆಳಗ್ಗೆ 10ರಿಂದ ಮದ್ಯಾಹ್ನ 4ರವರೆಗೆ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಹಳೇಬೀಡು, ಮತ್ತಿಗಟ್ಟ, ಚೀಲನಾಯಕನಹಳ್ಳಿ, ಗೋಣಿಸೋಮನಹಳ್ಳಿ, ಅಡಗೂರು, ರಾಜನಸಿರಿಯೂರು, ಹರುಬಿಹಳ್ಳಿ, ಹುಲ್ಲೇನಹಳ್ಳಿ ಸುತ್ತಮುತ್ತ ಇರುವ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ, ಆದುದರಿಂದ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕೆಂದು ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮನವಿ ಮಾಡಿದೆ.
ಮದ್ಯ ನಿಷೇಧ
ಅರಸೀಕೆರೆ ಪಟ್ಟಣದಲ್ಲಿ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಅ.25ರ ಸಂಜೆ 5 ರಿಂದ 26ರ ಮಧ್ಯರಾತ್ರಿ 12 ರವರೆಗೆ ಅರಸೀಕೆರೆ ಪಟ್ಟಣದ ಸುತ್ತ 5 ಕಿಮೀ ವ್ಯಾಪ್ತಿಯಲ್ಲಿ ಮದ್ಯ ಹಾಗೂ ಅಮಲು ಪಾನೀಯಗಳ ಸೇವನೆಯನ್ನು ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಆದೇಶ ಹೊರಡಿಸಿದ್ದಾರೆ.
'ಬಿಸ್ಸೆನ್ನೆಲ್ ಟ್ಯಾಬ್ಲೆಟ್ ಪಾತಾಳ ಕಚ್ಚಿವೆ'
ಹಾಸನ: ಆಕಾಶ್‌ನಂತೆಯೇ ಬಿಎಸ್ ಎನ್‌ಎಲ್ ಟ್ಯಾಬ್ಲೆಟ್‌ಗಳು ಪಾತಾಳ ಕಚ್ಚಿವೆ ಎಂದು ಆಕಾಶವಾಣಿಯ ಬೇಂದ್ರೆ ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ. ಅ.22 ರಂದು 'ಕನ್ನಡಪ್ರಭ'ದಲ್ಲಿ ಪ್ರಕಟವಾದ ಆಕಾಶ್ ಟ್ಯಾಬ್ಲೆಟ್ ಕುರಿತ ವರದಿ ಸಮಸ್ಯೆಯ ಒಂದು ಮುಖವನ್ನಷ್ಟೇ ತೋರಿಸಿದೆ. ಡಾಟಾವಿಂಡ್ ಕಂಪೆನಿ ಸರಬರಾಜು ಮಾಡಿದ 6440 ಟ್ಯಾಬ್‌ಗಳಲ್ಲಿ 5790 ಟ್ಯಾಬ್‌ಗಳು ತಾಂತ್ರಿಕವಾಗಿ ದೋಷಪೂರಿತ ಎಂದು ವರದಿ ಹೇಳುತ್ತಿದೆ. ಮುಖ್ಯವಾಗಿ 1 ಜಿ.ಬಿ. ಗಿಂತ ಕಡಿಮೆ ರ್ಯಾಮ್ ಇರುವ ಟ್ಯಾಬ್‌ಗಳಲ್ಲಿ ವೇಗದ ಕೊರತೆ, ಸ್ಪರ್ಶದ ಸಮಸ್ಯೆ ಮತ್ತು ಪದೇ ಪದೇ ಕ್ರಾಷ್ ಆಗುತ್ತಿರುವುದು ಸಾಮಾನ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಸೇನೆ ಹುದ್ದೆಗಳಿಗೆ ನೇಮಕಾತಿ ಮೇಳ
ಹಾಸನ: ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ನ.6 ರಿಂದ ನ.14 ರವರೆಗೆ ಸಿಪಾಯಿ ಟೆಕ್ನಿಕಲ್, ನರ್ಸಿಂಗ್, ಕ್ಲರ್ಕ್, ಟ್ರೇಡ್ಸ್‌ಮನ್‌ಗಳ ನೇಮಕಾತಿ ಮೇಳ ನಡೆಯಲಿದೆ. ಯಾವುದೇ ವಿಷಯದಲ್ಲಿ ಪಿಯುಸಿಯಲ್ಲಿ ಶೇ.40. ಅಂಕ ಗಳಿಸಿರ ಬೇಕು. 90 ರಿಂದ 6-5-96 ರೊಳಗೆ ಜನಿಸಿರಬೇಕು. ಸಿಪಾಯಿ ಜಿಡಿಗೆ 10ನೇ ತರಗತಿಯಲ್ಲಿ ಕನಿಷ್ಠ ಶೇ. 45 ಅಂಕಗಳೊಂದಿಗೆ ಪಾಸಾಗಿದ್ದು ಪ್ರತಿ ವಿಷಯದಲ್ಲೂ ಕನಿಷ್ಠ ಶೇ.32 ಅಂಕ ಪಡೆದಿರಬೇಕು. ಹೆಚ್ಚಿನ ಮಾಹಿತಿಗೆ- ದೂ. 08172- 245135,ಮೊ. 9845 581710 ಸಂಪರ್ಕಿಸಲು ಕೋರಲಾಗಿದೆ.