ಅತಿವೃಷ್ಟಿ: 200 ಹೆ. ಬತ್ತ ಹಾನಿ
ಕ.ಪ್ರ.ವಾರ್ತೆ ಹಾಸನ ಸೆ.1
ಅರಸೀಕೆರೆ ತಾಲೂಕು ಬೇಲೂರಿನ ಹಳೇಬೀಡು, ಮಾದಿಹಳ್ಳಿ ಮತ್ತು ಹಾಸನದ ದುದ್ದ ಹೋಬಳಿಗಳಲ್ಲಿ ಈ ವರ್ಷವೂ ಮಳೆ ಕೊರತೆ ಉಂಟಾಗಿ ಬರ ಎದುರಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವರಾಜ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ ಹೇಮಾವತಿ ಸಭಾಂಗಣದಲ್ಲಿ ನಡೆದ ನಾನಾ ಇಲಾಖೆಗಳ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಳೆ, ಬೆಳೆ ಪರಿಸ್ಥಿತಿ ಬಗ್ಗೆ ಅವರು ವಿವರ ನೀಡಿದರು. ಜಿಲ್ಲೆಯ ಇತರೆಡೆ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಸಕಲೇಶಪುರದಲ್ಲಿ 200 ಹೆಕ್ಟೇರ್ ಬತ್ತದ ಬೆಳೆ ಹಾಗೂ ಅರಕಲಗೂಡು ತಾಲೂಕಿನಲ್ಲಿ 5260 ಹೆಕ್ಟೇರ್ ಮುಸುಕಿನ ಜೋಳ ಹಾಗೂ ಹೊಗೆಸೊಪ್ಪು ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು.
6 ಸಾವಿರ ತೆಂಗಿನಮರಗಳಿಗೆ ಹಾನಿ: ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಕೀಲ್ ಅಹಮದ್ ಮಾತನಾಡಿ, ಆಲೂ ಬೆಳೆಗೆ ಅಂಗಮಾರಿ ರೋಗ, ಪರಿಹಾರ ಕ್ರಮಗಳ ಬಗ್ಗೆ ವಿವರಿಸಿ, ಜಿಲ್ಲೆಯಲ್ಲಿ ತೆಂಗು ಸುಳಿ ರೋಗದಿಂದ 6 ಸಾವಿರ ಹೆಕ್ಟೇರ್ನಲ್ಲಿರುವ ತೆಂಗಿನ ಮರಗಳು ಹಾನಿಗೀಡಾಗಿವೆ. ಅವುಗಳ ಸಮೀಕ್ಷೆಗೆ ತಂಡ ರಚಿಸಲಾಗಿದ್ದು, ಶೀಘ್ರದಲ್ಲಿ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಮರ್ಪಕ ಅನುಷ್ಠಾನಕ್ಕೆ ಸೂಚನೆ: ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಹಾಗೂ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿ, ಸಿಬ್ಬಂದಿ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ್ನಾಯಕ್ ಸೂಚಿಸಿದರು.
ಸರ್ಕಾರ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದೆ. ಅವುಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಹಲವು ಕಾರ್ಯಕ್ರಮಗಳನ್ನು ಒಂದಕ್ಕೊಂದು ಪೂರಕವಾಗಿ ಜೋಡಣೆ ಮಾಡಿ ಕಾರ್ಯಗತಗೊಳಿಸಿದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿನ ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ತೊಂದರೆ ಗೀಡಾಗಿದವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಹಾಗೂ ಬರ ಪರಿಸ್ಥಿತಿ ಮುಂದುವರೆದಿರುವ ಅರಕಲಗೂಡು ತಾಲೂಕಿನಲ್ಲಿ ಗೋಶಾಲೆಗಳನ್ನು ಮುಂದುವರೆಸುವಂತೆ ಸೂಚಿಸಿದರು.
ತೆಂಗು ಬೆಳೆ ಹಾನಿ ಬಗ್ಗೆ ಸಮಗ್ರ ವಿವರ ತಯಾರಿಸಿ ಶೀಘ್ರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ ಅವರು, ಉದ್ಯೋಗ ಖಾತರಿ ಯೋಜನೆಯಡಿ ನಡೆಯುವ ಕಾಮಗಾರಿಗಳು ಸಮರ್ಪಕವಾಗಿರಬೇಕು. ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಅಚ್ಚುಕಟ್ಟಾಗಿರುವಂತೆ ಗಮನಿಸಿ ಹೆಚ್ಚಿನ ಪ್ರೋತ್ಸಾಹ ನೀಡಿ ಎಂದು ಅವರು ಸಲಹೆ ಮಾಡಿದರು.
ರಾಗಿಮರೂರು ಘಟನೆ ಬಗ್ಗೆ ತನಿಖೆ: ಜೀತ ಪದ್ಧತಿ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ ಅವರು ಯಾರೂ ಬಲವಂತವಾಗಿ ದುಡಿಸಿಕೊಳ್ಳುವಂತಿಲ್ಲ. ತಮ್ಮದೇ ಜಮೀನಿನಲ್ಲಿ ಕೆಲಸಕ್ಕೆಂದು ಒತ್ತಾಯ ಹೇರುವಂತಿಲ್ಲ. ರಾಗಿಮರೂರಿನ ಘಟನೆ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದರು.
ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಮತ್ತು ಕ್ಷೀರ ಭಾಗ್ಯ ಯೋಜನೆ ಅನುಷ್ಠಾನದಲ್ಲಿ ಯಾವುದೆ ಲೋಪವಾಗಬಾರದು. ಅಲ್ಲದೇ ಕುಡಿಯುವ ನೀರು ಪೂರೈಕೆ ಯೋಜನೆ ವಿಳಂಬವಾಗದಂತೆ ಎಚ್ಚರಿಕೆ ವಹಿಸಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯು.ಪಿ.ಸಿಂಗ್ ಮಾತನಾಡಿ, ಕುಡಿಯುವ ನೀರು ಯೋಜನೆಗಳನ್ನು ಪ್ರಥಮ ಆದ್ಯತೆ ಮೇರೆಗೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲಾ ಗ್ರಾಮ ಪಂಚಾಯ್ತಿಗಳ ವಿದ್ಯುತ್ ಬಿಲ್ ಪಾವತಿಗೆ ಕ್ರಮ ವಹಿಸಲಾಗಿದೆ. ಉದ್ಯೋಗ ಖಾತರಿ ಯೋಜನೆ ಜಾರಿಯಲ್ಲಿ ವೈಯುಕ್ತಿಕ ಫಲಾನುಭವಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
5 ಕೋಟಿ ರು. ಅನುದಾನ: ಅಪರ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ನೆರೆ ಹಾಗೂ ಬರ ಪರಿಹಾರಕ್ಕಾಗಿ 5 ಕೋಟಿ ರು. ಅನುದಾನ ಒದಗಿಸಿದು,್ದ ಇದರಲ್ಲಿ 2 ಕೋಟಿ ರು. ಗಳನ್ನು ಬರ ಪರಿಹಾರ ಕಾಮಗಾರಿಗಳಿಗೆ ಬಳಸಲಾಗುತ್ತಿದೆ. ಉಳಿದ ಅನುದಾನದಲ್ಲಿ ಸಕಲೇಶಪುರ ಹಾಗೂ ಅರಕಲಗೂಡು ತಾಲೂಕಿನಲ್ಲಿ ಮಳೆಯಿಂದ ಉಂಟಾಗಿರುವ ಜನ, ಜಾನುವಾರುಗಳ ಜೀವ ಹಾನಿ, ಬೆಳೆ ನಷ್ಟ ಪರಿಹಾರ ಸಾರ್ವಜನಿಕ ಆಸ್ತಿಗಳ ತಾತ್ಕಾಲಿಕ ಸರಿಪಡಿಸುವಿಕೆಗೆ ಬಳಸಲಾಗುತ್ತಿದೆ. ಬೆಳೆ ಹಾನಿಯನ್ನು ಅಂದಾಜಿಸಲಾಗುತ್ತಿದ್ದು ಸರ್ಕಾರದ ಮಾರ್ಗಸೂಚಿಯನ್ವಯ ಪರಿಹಾರ ಒದಗಿಸಲಾಗುವುದು ಎಂದು ವಿವರಿಸಿದರು.
ಜಿಪಂ ಉಪ ಕಾರ್ಯದರ್ಶಿ ಕರಿಯಪ್ಪ, ಜಿಪಂ ವ್ಯಾಪ್ತಿಯಲ್ಲಿ ಜಾರಿಯಾಗುತ್ತಿರುವ ಉದ್ಯೋಗ ಖಾತ್ರಿ ಯೋಜನೆ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕಾ. ರಾಮೇಶ್ವರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆ ಸಮರ್ಪಕವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ 387281 ಕುಟುಂಬಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ. ಅಕ್ಕಿ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಹೊಸದಾಗಿ 13,292 ಬಿಪಿಎಲ್ ಸೇರಿದಂತೆ 14907 ಪಡಿತರ ಚೀಟಿ ವಿತರಿಸಲಾಗಿದ್ದು ಅದರಲ್ಲಿ 13,292 ಬಿಪಿಎಲ್ ಕಾರ್ಡ್ಗಳಾಗಿವೆ ಎಂದು ಡಾ. ರಾಮೇಶ್ವರಪ್ಪ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚಿದಾನಂದ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು, ಕ್ಷೀರ ಭಾಗ್ಯ, ಬಿಸಿಯೂಟ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಿ. ಎಲ್.ಶ್ಯಾಮಲಾದೇವಿ ಎನ್ಆರ್ಎಚ್ಎಂ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ಸ್ವಾಗತಿಸಿದರು. ಅಧಿಕಾರಿ ರಾಮಚಂದ್ರನ್, ಜಿಪಂ ಉಪಕಾರ್ಯದರ್ಶಿ ಪುಟ್ಟಸ್ವಾಮಿ ಮತ್ತು ನಾನಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಜಿಲ್ಲೆಯಲ್ಲಿ ತೆಂಗು ಸುಳಿ ರೋಗದಿಂದ 6 ಸಾವಿರ ಹೆಕ್ಟೇರ್ನಲ್ಲಿರುವ ತೆಂಗಿನ ಮರಗಳು ಹಾನಿಗೀಡಾಗಿವೆ. ಅವುಗಳ ಸಮೀಕ್ಷೆಗೆ ತಂಡ ರಚಿಸಲಾಗಿದ್ದು, ಶೀಘ್ರದಲ್ಲಿ ವರದಿ ಸಲ್ಲಿಸಲಾಗುವುದು
-ಶಕೀಲ್ ಅಹಮದ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ
ಜಿಲ್ಲೆಯಲ್ಲಿ ನೆರೆ ಹಾಗೂ ಬರ ಪರಿಹಾರಕ್ಕಾಗಿ 5 ಕೋಟಿ ರು. ಅನುದಾನ ಒದಗಿಸಿದು,್ದ ಇದರಲ್ಲಿ 2 ಕೋಟಿ ರು. ಗಳನ್ನು ಬರ ಪರಿಹಾರ ಕಾಮಗಾರಿಗಳಿಗೆ ಬಳಸಲಾಗುತ್ತಿದೆ. ಉಳಿದ ಅನುದಾನದಲ್ಲಿ ಸಕಲೇಶಪುರ ಹಾಗೂ ಅರಕಲಗೂಡು ತಾಲೂಕಿನಲ್ಲಿ ಮಳೆಯಿಂದ ಉಂಟಾಗಿರುವ ಜನ, ಜಾನುವಾರುಗಳ ಜೀವ ಹಾನಿ, ಬೆಳೆ ನಷ್ಟ ಪರಿಹಾರ ಸಾರ್ವಜನಿಕ ಆಸ್ತಿಗಳ ತಾತ್ಕಾಲಿಕ ಸರಿಪಡಿಸುವಿಕೆಗೆ ಬಳಸಲಾಗುತ್ತಿದೆ. ಬೆಳೆ ಹಾನಿಯನ್ನು ಅಂದಾಜಿಸಲಾಗುತ್ತಿದ್ದು ಸರ್ಕಾರದ ಮಾರ್ಗಸೂಚಿಯನ್ವಯ ಪರಿಹಾರ ಒದಗಿಸಲಾಗುವುದು
-ಡಾ. ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ