ಕಾಯಂ ಜಾತಿ ಪತ್ರ ನೀಡಲು ಚಿಂತನೆ: ಶಂಕರಪ್ಪ
ಕ.ಪ್ರ.ವಾರ್ತೆ ಚನ್ನರಾಯಪಟ್ಟಣ ಸೆ.1
ಕಾಯಂ ಜಾತಿ ಪತ್ರವನ್ನು ನೀಡಲು ಚಿಂತನೆ ನಡೆಯುತ್ತಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಶಂಕರಪ್ಪ ಹೇಳಿದರು.
ಭಾನುವಾರ ತಾಲೂಕು ನೇಕಾರ ಕುರುಹಿನಶೆಟ್ಟಿ ಹಾಗೂ ಯುವಕ ಸಂಘದವರು ಸಮಾಜದ ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆ ಪರಿಹಾರ ಬಗ್ಗೆ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕಾಯಂ ಜಾತಿ ಪತ್ರ ನೀಡುವುದರಿಂದ ಈಗ ಜಾತಿ ಮತ್ತು ವರಮಾನ ಪತ್ರವನ್ನು ಆರು ತಿಂಗಳು, ಐದು ಅಥವಾ 6 ವರ್ಷಗಳೆಂಬ ಗೊಂದಲಗಳನ್ನು ತಪ್ಪಿಸುವುದಲ್ಲದೆ ಪ್ರಮಾಣ ಪತ್ರಕ್ಕೆ ದಾಖಲೆಗಳು, ಅಫಿಡೆವಿಟ್ ಇತ್ಯಾದಿಗಳನ್ನು ಪದೇ ಪದೆ ಹೊಂದಿಸುವ ತೊಂದರೆ ತಪ್ಪುತ್ತದೆ ಎಂದು ಹೇಳಿದರು
ಸಮಸ್ಯೆ ಜಾತಿವಾರು ವಿಂಗಡಣೆ ಪ್ರಮಾಣ ಪತ್ರ ಪಡೆಯುವಲ್ಲಿ ಅನುಕೂಲಕ್ಕೋಸ್ಕರ ಬೇರೆಯವರು ಪಡೆಯುತ್ತಿರುವುದರಿಂದ ಮೂಲ ಸೌಲಭ್ಯಗಳಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ಸರ್ಕಾರದಿಂದ ಸರಿಪಡಿಸಬೇಕಾಗಿದೆ. ಸಂಬಂಧಪಟ್ಟ ವರ್ಗದವರು ಇದಕ್ಕೆ ಧ್ವನಿಯಾಗಬೇಕಾಗಿದೆ. ಈಗ ಜಾತಿವಾರು ಜನಗಣತಿ ಪ್ರಾರಂಭವಾಗಲಿದ್ದು ಶೇ.50ರಷ್ಟು ಹಿಂದುಳಿದ ವರ್ಗದವರು ಇರಬಹುದು.
ಹಿಂದುಳಿದ ವರ್ಗಗಳಿಗೆ ಸಾಲ ಸವಲತ್ತಿನ ಮೊತ್ತವನ್ನು ಹೆಚ್ಚಿಸಬೇಕು. ಮಹಿಳೆಯರಿಗೆ ಮೀಸಲಾತಿ ಇರಬೇಕು. ದೇವರಾಜ ಅರಸು ಅವರ ದಿನಾಚರಣೆಯನ್ನು ಸಾರ್ವಜನಿಕವಾಗಿ ಎಲ್ಲ ಜಯಂತಿಯಂತೆ ಆಚರಿಸುವಂತಾಗಬೇಕು ಎಂದು ಮನವಿ ಪತ್ರ ಸಲ್ಲಿಸಿದರು. ಸಂಘದ ಅಧ್ಯಕ್ಷ ಪುಟ್ಟಣ್ಣ, ಯುವ ಮುಖಂಡ ಪ್ರಸಾದ್, ಗಿರೀಶ್, ಕಾರ್ಯದರ್ಶಿ ತೀರ್ಥೇಶ್, ಖಜಾಂಚಿ ಶಿವಣ್ಣ, ವೆಂಕಟೇಶ್ ಇತರರು ಇದ್ದರು.
6 ವರ್ಷದೊಳಗಿನ ಬಿಪಿಎಲ್ ಕುಟುಂಬದ ಮಕ್ಕಳಿಗೆ ಉಚಿತ ಚಿಕಿತ್ಸೆ
ಹಾಸನ: ಅಪೌಷ್ಟಿಕ ಮಕ್ಕಳ ವೈದ್ಯಕೀಯ ವೆಚ್ಚ ಬಾಲಸಂಜೀವಿನಿ ಯೋಜನೆಯಡಿ ತೀವ್ರ ಅಪೌಷ್ಟಿಕ ಮಕ್ಕಳ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಬಾಲಸಂಜೀವಿನಿ ಯೋಜನೆ ಪ್ರಾರಂಭಿಸಿದ್ದು ಅದರಂತೆ ಹಾಸನದ ಸಿ.ಎಸ್.ಐ. ರೆಡ್ ಮೆಮೋರಿಯಲ್ ಆಸ್ಪತ್ರೆಯು ಈ ಯೋಜನೆಗಾಗಿ ಸರ್ಕಾರದಿಂದ ಅಂಗೀಕೃತವಾಗಿದೆ. ಪೋಷಕರು, ಪಾಲಕರು ತೀವ್ರ ಅಪೌಷ್ಟಿಕ ಹಾಗೂ ತೀವ್ರ ಕಾಯಿಲೆಯಿಂದ ಬಳಲುತ್ತಿರುವ (ಹೃದಯ ಸಂಬಂಧಿ, ರಕ್ತ ಸಂಬಂಧಿ ರೋಗಗಳು, ಲಿವರ್ ತೊಂದರೆ, ಅನೀಮಿಕ್ ಇತರೆ) 0-6 ವರ್ಷದ ಬಿಪಿಎಲ್ ಕುಟುಂಬಕ್ಕೆ ಸೇರಿದ ಅಂಗನವಾಡಿ ಮಕ್ಕಳನ್ನು ಸಿಎಸ್ಐ ಆಸ್ಪತ್ರೆ ಹಾಸನ, ಇಲ್ಲಿಗೆ ಅಂಗನವಾಡಿ ಕಾರ್ಯಕರ್ತೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಶಿಫಾರಸ್ಸಿನೊಂದಿಗೆ ದಾಖಲಿಸಬಹುದಾಗಿದೆ. ಅದರಂತೆ, 3ನೇ ಹಂತದ ಚಿಕಿತ್ಸೆ ಅವಶ್ಯವಿರುವ ಮಗುವಿಗೆ ಕನಿಷ್ಠ 35 ಸಾವಿರ ರು.ನಿಂದ ಗರಿಷ್ಠ 50 ಸಾವಿರ ರು.ವರೆಗೆ ವೆಚ್ಚವನ್ನು ಇಲಾಖೆ ಭರಿಸುತ್ತದೆ ಎಂದು ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಸನ ತಿಳಿಸಿದ್ದಾರೆ. ಮಾಹಿತಿಗಾಗಿ ನಿರ್ದೇಶಕರು, ಸಿಎಸ್ಐ ಮೆಮೋರಿಯಲ್ ಆಸ್ಪತ್ರೆ, ಹಾಸನ ಹಾಗೂ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 9ನೇ ಕ್ರಾಸ್ ಕೆ.ಆರ್.ಪುರಂ, ಹಾಸನ (ದೂ.08172267218) ಸಂಪರ್ಕಿಸಿ.