ಬಾಲಕಾರ್ಮಿಕ ಪದ್ಧತಿ ತೊಡೆಯುವಲ್ಲಿ ವಿಫಲ
ಕನ್ನಡಪ್ರಭ ವಾರ್ತೆ ಹಾಸನಸೆ.1
ನಾಗರಿಕರು ಶಿಸ್ತು ಬದ್ಧವಾಗಿ ನಡೆದುಕೊಳ್ಳಲು ಕಾನೂನು ರಚನೆ ಮಾಡಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎಸ್. ಸೋಮಶೇಖರ್ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸರ್ಕಾರಿ ಕಲಾ ಕಾಲೇಜ್ ರಾಜ್ಯಶಾಸ್ತ್ರ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಷ್ಟೇ ಕಾನೂನನ್ನು ತರಲಾಗಿದ್ದರೂ ಪೂರ್ಣವಾಗಿ ಬಾಲಕಾರ್ಮಿಕ ಪದ್ಧತಿಯನ್ನು ತೊಡೆದುಹಾಕುವಲ್ಲಿ ವಿಫಲರಾಗಿದ್ದೇವೆ ಎಂದು ವಿಷಾದಿಸಿದರು.
ಎಳೆ ವಯಸ್ಸಿನಲ್ಲಿ ವಿದ್ಯಾಭ್ಯಾಸ ಹಾಗೂ ಮೂಲಭೂತ ಸೌಕರ್ಯದಿಂದ ವಂಚಿತರಾಗಿ ಕೆಲ ಮಕ್ಕಳು ದುಷ್ಟ ವ್ಯಕ್ತಿಗಳ ಕೈಗೆ ಸಿಲುಕಿ ದುಷ್ಕೃತ್ಯಗಳಲ್ಲಿ ತೊಡಗುವ ಮೂಲಕ ಸಮಾಜದಲ್ಲಿ ಕೆಟ್ಟ ಪರಿಣಾಮವನ್ನು ಬೀರಲು ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಾಲಕರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗಳಿಗಾಗಿ ಕಾನೂನಿನಲ್ಲಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗಿದ್ದು, ಅದು ಯಾವ ರೀತಿಯಲ್ಲಿಯಾದರೂ ಆಗಿರಲಿ ತಡೆಗಟ್ಟಲು ಅನೇಕ ಕಾಯ್ದೆಗಳು ಚಾಲನೆಯಲ್ಲಿ ಇದೆ. ಯಾವುದೇ ಮಕ್ಕಳ ಮೇಲೆ ಕಿರುಕುಳ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಯಾವುದೇ ಒಂದು ಅಪರಾಧ ಕಂಡು ಬಂದಲ್ಲಿ ತಕ್ಷಣ ಸಾರ್ವಜನಿಕರು ಸಂಬಂಧಪಟ್ಟವರಿಗೆ ವಿಷಯ ಮುಟ್ಟಿಸುವಂತೆ ಸಲಹೆ ನೀಡಿದರು.
ನ್ಯಾ. ಆರ್.ಡಿ. ಹುದ್ದಾರ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎ. ಮುಸ್ತಫಾ ಹುಸೇನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಐ.ಎಂ. ಮೋಹನ್, ವಕೀಲರ ಸಂಘದ ಕಾರ್ಯದರ್ಶಿ ವಸಂತಕುಮಾರ್ ಇತರರು ಇದ್ದರು.
ಉಷಾರಾಣಿ ಪ್ರಾರ್ಥಿಸಿದರು. ಅವಿನಾಶ್ ಅರ್ಚನಾ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ. ಅಣ್ಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.