ಬೈಕೆರೆ ನಾಗೇಶ್ ಸರ್ಕಾರದ ವಿಶೇಷ ಸಮನ್ವಯಕಾರ
ಸಕಲೇಶಪುರ: ಬೈಕೆರೆ ನಾಗೇಶ್ ಅವರನ್ನು ನವದೆಹಲಿಯಲ್ಲಿ ಕರ್ನಾ ಟಕ ಸರ್ಕಾ ರದ ವಿಶೇಷ ಸಮನ್ವಯಕಾರರನ್ನಾಗಿ ರಾಜ್ಯ ಸರ್ಕಾ ರ ನೇಮಕ ಮಾಡಿ ಆದೇಶ ಹೊರಡಿಸಿದೆ. ಸುಮಾರು 20 ವರ್ಷಗಳ ಕಾಲ ಬೈಕೆರೆ ನಾಗೇಶ್ ಕೇಂದ್ರದ ವಿವಿಧ ಮಂತ್ರಾಲಯಗಳಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. 2009ರಲ್ಲಿ ಅಂದಿನ ಸರ್ಕಾರ ಇವರನ್ನು ನವದೆಹಲಿಯಲ್ಲಿ ರಾಜ್ಯದ ಹೆಚ್ಚುವರಿ ವಿಶೇಷ ಪ್ರತಿನಿಧಿಯನ್ನಾಗಿ ನಂತರ ರಾಜ್ಯ ಸರ್ಕಾರದ ವಿಶೇಷ ಸಮನ್ವಯಕಾರನ್ನಾಗಿ ನೇಮಕ ಮಾಡಿತ್ತು.
ಸಹಾಯ ಕೇಂದ್ರಕ್ಕೆ ಅರ್ಜಿ ಆಹ್ವಾನ
ಹಾಸನ: ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲೂಕು ಕಚೇರಿಗಳಲ್ಲಿ ಸಕಾಲ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಸಹಾಯ ಕೇಂದ್ರಗಳನ್ನು ನಿರ್ವಹಿಸಲು ಅರ್ಹತೆಯುಳ್ಳ ಹಾಗೂ ಸಾಮಾಜಿಕ ಕಳಕಳಿಯುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿ ಕನಿಷ್ಠ ಪದವೀಧರರಾಗಿರಬೇಕು ಹಾಗೂ ಗಣಕಯಂತ್ರದಲ್ಲಿ ವ್ಯವಹರಿಸುವ ಪರಿಣತಿ ಹೊಂದಿರಬೇಕು. ಆಯ್ಕೆಯಾದವರಿಗೆ ಪ್ರತಿ ಮಾಹೆ 10 ಸಾವಿರ ರು. ಗೌರವಧನವನ್ನು 6 ತಿಂಗಳವರೆಗೆ ಮಾತ್ರ ನೀಡಲಾಗುವುದು. ಅರ್ಜಿ ಸಲ್ಲಿಸಲು ಸೆ.12 ಕಡೇ ದಿನ ಆಗಿರುತ್ತದೆ. ಹೆಚ್ಚಿನ ವಿವರಗಳಿಗೆ ಜಿಲ್ಲಾ ಮಾಹಿತಿ ಸಮಾಲೋಚಕ ಮನೋಹರ್ ದೂರವಾಣಿ 08172-253345 ಸಂಪರ್ಕಿಸಬೇಕೆಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವಿರೂಪಾಕ್ಷಿಪುರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಹೋಬಳಿಯ ವಿರೂಪಾಕ್ಷಿಪುರ ಗ್ರಾಮದಲ್ಲಿ ಶ್ರೀಕೃಷ್ಣ ಯಾದವ ಯುವಕ ಸಂಘದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಂಜನೇಯಸ್ವಾಮಿ ದೇವಸ್ಥಾನ ಸನ್ನಿಧಿಯಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ದೇವರಿಗೆ ಅಭಿಷೇಕ ಪೂಜೆ ನಂತರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಹಾಗೂ ಶ್ರೀಕೃಷ್ಣದೇವರ ಉತ್ಸವ ಮಂಗಳವಾದ್ಯದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಹಾಲು ಬೆಣ್ಣೆ ಉತ್ಸವ ನಡೆಸಿ, ಭಕ್ತರಿಗೆ ಹಾಲು ಬೆಣ್ಣೆ ವಿತರಿಸಲಾಯಿತು. ಮೆರವಣಿಗೆಯಲ್ಲಿ ಮಕ್ಕಳು ಶ್ರೀಕೃಷ್ಣ-ರಾಧೆ ವೇಷಧಾರಿಗಳಾಗಿ ಎಲ್ಲರ ಗಮನಸೆಳೆದರು. ಆಕರ್ಷಕ ವೇಷ ಧರಿಸಿದ್ದ ಶ್ರೀಕೃಷ್ಣ - ರಾಧೆಯರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪ್ರಮುಖರಾದ ಪರದೇಶಿಗೌಡ, ವಿ.ಆರ್. ಶಿವಾನಂದ, ವಿ.ಎನ್.ಸೋಮಶೇಖರ, ನಿಂಗಪ್ಪ, ವಿ.ಬಿ. ರಮೇಶ್, ವಿ.ಕೆ. ನಾಗರಾಜು ಪಾಲ್ಗೊಂಡಿದ್ದರು. ಎನ್.ಪಿ. ಗೋವಿಂದರಾಜು ಬಹುಮಾನ ವಿತರಿಸಿದರು.
ಕುರುಹಿನಶೆಟ್ಟಿ ಸಂಘದಿಂದ ಪ್ರತಿಭಾ ಪುರಸ್ಕಾರ
ಹಾಸನ: ಕುರುಹಿನಶೆಟ್ಟಿ ಜನಾಂಗದ ಹಾಸನ ಜಿಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಕ್ಟೋಬರ್ನಲ್ಲಿ ನಡೆಯುವ ಜಿಲ್ಲಾ ಕುರುಹಿನಶೆಟ್ಟಿ ನೌಕರರ ಸಂಘದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. 2012-13ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಶೇ.75, ದ್ವಿತೀಯ ಪಿಯುಸಿ ಮತ್ತು ಐಟಿಐನಲ್ಲಿ ಶೇ.70, ಡಿಪ್ಲಮೋ ಮತ್ತು ಪದವಿಯಲ್ಲಿ ಶೇ.60, ಬಿಇ, ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆಯಾದ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ ಕುರುಹಿನಶೆಟ್ಟಿ ಜನಾಂಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಗರದ ಮಾರುತಿ ಎಲೆಕ್ಟ್ರಿಕಲ್ಸ್, ಯೂರೋಕಿಡ್ಸ್ ಎದುರು, ಎಂ.ಜಿ.ರಸ್ತೆ, ಹಾಸನ ಇಲ್ಲಿ ದೊರೆಯುತ್ತದೆ. ಅರ್ಜಿ ಸಲ್ಲಿಸಲು ಸೆ.20 ಕೊನೆ ದಿನ. ಹೆಚ್ಚಿನ ವಿವರಗಳಿಗೆ ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷರ ದೂರವಾಣಿ - 8951261033 ಸಂಪರ್ಕಿಸಬಹುದು ಎಂದು ಜಿಲ್ಲಾ ಕುರುಹಿನ ಶೆಟ್ಟಿ ನೌಕರರ ಸಂಘದ ಅಧ್ಯಕ್ಷ ಕೆ.ಸಿ.ಕೃಷ್ಣಶೆಟ್ಟಿ ತಿಳಿಸಿದ್ದಾರೆ.
ಧರ್ಮರಾಜ್ಯದಿಂದ ಮಳೆ ಬೆಳೆ: ಶಾಸಕ
ನುಗ್ಗೇಹಳ್ಳಿ: ಸತ್ಯ, ನ್ಯಾಯ, ನೀತಿಯಿಂದ ಕೂಡಿದ ಧರ್ಮ ರಾಜ್ಯ ಸ್ಥಾಪನೆಯಾದರೆ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ದೇವಾಲಯ ಆವರಣದಲ್ಲಿ ನಡೆದ ಗೋಕುಲಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿಗೆ ನೀರಾವರಿ ಯೋಜನೆಗೆ 48 ಕೋಟಿ ರು. ಬಿಡುಗಡೆಯಾಗಿದ್ದು, ನುಗ್ಗೇಹಳ್ಳಿ ಹೋಬಳಿಯ ಕೆರೆಗಳಿಗೆ ಒಂದು ವರ್ಷದಲ್ಲಿ ನೀರು ಹರಿಸುವ ಭರವಸೆ ನೀಡಿದರು.ಯಾದವ ಸಮಾಜದ ಜಿಲ್ಲಾಧ್ಯಕ್ಷ ಎಚ್.ಎಂ ಮಲ್ಲೇಗೌಡರನ್ನು ಸನ್ಮಾನಿಸಲಾಯಿತು. ಜಿಪಂ ಸದಸ್ಯ ಶಿವಶಂಕರ್ ಕುಂಟೆ, ತಾಪಂ ಸದಸ್ಯ ಎನ್. ಬಸವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ನಟರಾಜು, ಗೋಕುಲ ವಿದ್ಯಾಸಂಸ್ಥೆ ಮುಖ್ಯಸ್ಥ ನಾರಾಯಣ್, ಪಿಇಎನ್ ಕೃಷ್ಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷಎಂ. ಗೋಪಾಲ್, ಮಾಜಿ ಉಪಾಧ್ಯಕ್ಷ ಬಸವಲಿಂಗಪ್ಪ, ತಾಲೂಕು ಯಾದವ ಸಮಾಜದ ಅಧ್ಯಕ್ಷ ಪುಟ್ಟರಾಮೇಗೌಡ ಇದ್ದರು.
ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ
ನುಗ್ಗೇಹಳ್ಳಿ: ದೇವಾಲಯಗಳ ಜೀರ್ಣೋದ್ಧಾರದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯತ್ತದೆ ಎಂದು ಕೆರಗೋಡಿ ರಂಗಾಪುರದ ಗುರು ಪರದೇಶಿಕೇಂದ್ರ ಮಠದ ಸ್ವಾಮೀಜಿ ಹೇಳಿದರು. ಸಮೀಪದ ಯಾಚನಘಟ್ಟದಲ್ಲಿ ಕೋಟಿ ರು. ವೆಚ್ಚದಲ್ಲಿ ಮಹಾಲಿಂಗೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಎಲ್ಲ ಸಮುದಾಯದವರು ಒಗ್ಗಟ್ಟಾಗಿ ನಿರ್ಮಾಣ ಮಾಡುವಂತೆ ತಿಳಿಸಿದರು.ದೇವಾಲಯವನ್ನು ಕಾರ್ಕಳದ ಸರಸ್ವತಿ ಶಿಲ್ಪಾ ಕೇಂದ್ರದ ಕೃಷ್ಣಚಾರ್ 9 ತಿಂಗಳಲ್ಲಿ ನಿರ್ಮಿಸಿ ಕೊಡುವುದಾಗಿ ತಿಳಿಸಿದರು.
ಸಣ್ಣೇಗೌಡರಿಗೆ ಶ್ರದ್ಧಾಂಜಲಿ
ಹಾಸನ: ಇತ್ತಿಚಿಗೆ ನಿಧನರಾದ ಸಾರಸ್ವತ ಲೋಕದ ರಂಗಕರ್ಮಿ ಕೆ. ಸಣ್ಣೇಗೌಡರಿಗೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಅಭಿಮಾನಿಗಳು ಮತ್ತು ಸ್ನೇಹಿತರು ಹಾಗೂ ಸಾರ್ವಜನಿಕರು ಶ್ರದ್ಧಾಂಜಲಿ ಅರ್ಪಿಸಿದರು. ಸಣ್ಣೇಗೌಡರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಂತರ ಎರಡು ನಿಮಿಷ ಮೌನ ಆಚರಿಸಲಾಯಿತು. ಸಣ್ಣೇಗೌಡರ ಸಾಧನೆಯನ್ನು ಸಭೆಯಲ್ಲಿ ಸ್ಮರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ದನ್, ಶಿವೇಶ್, ಆರ್.ಪಿ. ವೆಂಕಟೇಶಮೂರ್ತಿ, ಮಲ್ಲೇಶ್, ಉದಯಕುಮಾರ್, ಪ್ರಭಾಕರ್, ಕಿಶೋರ್, ಕಸಾಪ ಮಾಜಿ ಅಧ್ಯಕ್ಷ ಉದಯರವಿ, ಎಚ್.ಬಿ. ರಮೇಶ್, ಸುರೇಶ್ ಗುರೂಜಿ, ಕೆ.ಟಿ. ಜಯಶ್ರೀ ಇತರರು ಇದ್ದರು.