ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಭಗವದ್ಗೀತೆ ಮೂಲಕ ಕರ್ತವ್ಯ ಪ್ರಜ್ಞೆ ಜಾಗೃತಗೊಳಿಸಿದ ಕೃಷ್ಣ

Srinivasa Murthy VN
Updated On : 2 Sept 2013, 12:25 pm

ಕ.ಪ್ರ.ವಾರ್ತೆ ಅರಸೀಕೆರೆ ಸೆ.1
ಯುಗ ಯುಗಾಂತರಗಳಿಂದ ವಿಶ್ವದಲ್ಲಿ ಅಧರ್ಮ ಹೆಚ್ಚಾದಾಗ ಧರ್ಮ ಸ್ಥಾಪನೆಗಾಗಿ ಭಗವಂತ ಅನೇಕ ರೂಪದಲ್ಲಿ ಜನ್ಮತಾಳಿ ಧರ್ಮ ಭೋಧನೆ ಮಾಡಿದ್ದಾನೆ. ಅಂತಹ ಅವತಾರ ಪುರುಷನಲ್ಲಿ ಶ್ರೀಕೃಷ್ಣನೂ ಒಬ್ಬನಾಗಿದ್ದಾನೆ ಎಂದು ಯಾದವ ಸಮಾಜದ ಕಾರ್ಯದರ್ಶಿ ನಾರಾಯಣ್ ಅಭಿಪ್ರಾಯಪಟ್ಟರು.
ಮಾಲೇಕಲ್ ತಿರುಪತಿಯಲ್ಲಿ ಆಯೋಜಿಸಲಾಗಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ದೇವಕಿಯ ಮಗನಾಗಿ ಯಶೋಧೆಗೆ ನಂದಕುಮಾರನಾಗಿ, ಬಾಲ್ಯದಲ್ಲಿಯೇ ಆರು ಮಂದಿ ರಾಕ್ಷಸರನ್ನು ಕೊಂದು, ಧರ್ಮದ ಕಡೆ ನಿಂತು ಅಧರ್ಮದ ಪ್ರತೀಕವಾಗಿದ್ದ ಕೌರವ ವಂಶವನ್ನು ನಿರ್ನಾಮ ಮಾಡುವ ಮೂಲಕ ಧರ್ಮ ಸಂಸ್ಥಾಪನೆ ಮಾಡಿದ ಕೃಷ್ಣ ಪರಮಾತ್ಮ ಎಂದರು. ಶ್ರೇಷ್ಠ ಭಗವದ್ಗೀತೆ ಮೂಲಕ ಪ್ರತಿಯೊಬ್ಬರಲ್ಲಿ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಿದ ಕೀರ್ತಿಗೆ ಕೃಷ್ಣ ಪಾತ್ರನಾಗಿದ್ದಾನೆ ಎಂದು ಹೇಳಿದರು.
ಯಾದವ ಸಮುದಾಯ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟಿತರಾಗುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿ ಸಮಾಜವೂ ತಮ್ಮ ಸಮಾಜದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಯಾದವ ಸಮುದಾಯವೂ ರಾಜಕೀಯ, ಶೈಕ್ಷಣಿಕ ಸೇರಿದಂತೆ ವಿವಿಧ ಸೌಲಭ್ಯ ಪಡೆಯಬೇಕಾದರೆ ಒಗ್ಗಟ್ಟಿನ ಹೋರಾಟ ಅನಿವಾರ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.
ಪರಸ್ಪರ ಪ್ರೀತಿ, ವಿಶ್ವಾಸಗಳಿಂದ:  ಮುಖಂಡ ಜವನಪ್ಪ ಮಾತನಾಡಿ, ಯಾದವ ಸಮುದಾಯ ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಜನರ ಮನಸ್ಸು ಗೆಲ್ಲಲು ಸಾಧ್ಯ ಎಂದು ಭಾವಿಸುವ ಸಮುದಾಯ. ಕೃಷ್ಣ ಜನ್ಮಾಷ್ಟಮಿಯ ಆಚರಣೆಗಳು ಅಗತ್ಯವಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಆಚರಣೆಗೆ ಅರ್ಥ ತುಂಬಬೇಕಿದೆ ಎಂದು ಸಲಹೆ ನೀಡಿದರು.
ಸನಾತನ ಸಂಸ್ಕತಿ, ಉನ್ನತ ಪರಂಪರೆ ಹೊಂದಿರುವ ಭಾರತದಲ್ಲಿ ಅನೇಕ ಸಾಧು ಸಂತರು ಹಾಗೂ ಮಹಾನ್ ವ್ಯಕ್ತಿಗಳು ಜನ್ಮ ತಾಳಿದ್ದಾರೆ. ಅವರೆಲ್ಲರೂ ಈ ಸಂಸ್ಕೃತಿಯ ಶ್ರೀಮಂತಿಕೆಗೆ ಕೊಟ್ಟ ಕೊಡುಗೆ ಅಪಾರವಾಗಿದ್ದು, ಅನೇಕ ಧರ್ಮ, ಜಾತಿ, ವರ್ಗಗಳ ವೈವಿಧ್ಯತೆಯಿಂದ ಕೂಡಿರುವ ಈ ದೇಶದಲ್ಲಿ ಏಕತೆಯ ಮಂತ್ರವನ್ನು ಪ್ರತಿಪಾದಿಸುವ ಕೀರ್ತೀ ಈ ದೇಶಕ್ಕೆ ಸಲ್ಲುತ್ತದೆ. ನಮ್ಮ ಶ್ರೀರಾಮನ ಆದರ್ಶಗಳು ಹಾಗೂ ಶ್ರೀಕೃಷ್ಣ ಭೋಧಿಸಿದ ಭಗವದ್ಗೀತೆ ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ ಎಂದು ತಿಳಿಸಿದರು.
ಇದೇ ವೇಳೆ ಕಳೆದ ಮಾರ್ಚ್, ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.  ಜಿಪಂ ಮಾಜಿ ಉಪಾಧ್ಯಕ್ಷ ಬಂಡಿಗೌಡ್ರು ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಪಶು ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಡಾ. ಬೆಳ್ಳಿಯಪ್ಪ, ಬಸವಲಿಂಗಪ್ಪ ಇತರರು ಮಾತನಾಡಿದರು. ಮಹಲಿಂಗಪ್ಪ, ಎಪಿಎಂಸಿ ಸದಸ್ಯ ಅಜ್ಜಪ್ಪ ಇದ್ದರು. ಯುವ ಮುಖಂಡ ಸುಬ್ರಹ್ಮಣ್ಯಬಾಬು ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement