ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸರ್ಕಾರ ಗಿಮಿಕ್ ಕಾರ್ಯಕ್ರಮ ಕೈಬಿಡಲಿ

Srinivasa Murthy VN
Updated On : 2 Sept 2013, 12:24 pm

ಕ.ಪ್ರ.ವಾರ್ತೆ ಹಾಸನ ಸೆ.1
ರಾಜ್ಯ ಸರ್ಕಾರ ಜನರನ್ನು ಮೋಸಗೊಳಿಸುವ ಗಿಮಿಕ್ ಯೋಜನೆಗಳನ್ನು ಬಿಟ್ಟು ರೈತರನ್ನು ರಕ್ಷಿಸುವಂಥ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.
ಒಂದು ರು. ಗೆ ಅಕ್ಕಿ ನೀಡುವುದು, ಹಾಲು ಉತ್ಪಾದಕರಿಗೆ ನಾಲ್ಕು ರು. ನೀಡಿ ಮತ್ತೊಂದು ಕಡೆ ಇತರೆ ಅಗತ್ಯ ವಸ್ತುಗಳನ್ನು ಏರಿಕೆ ಮಾಡಿದರೆ ಏನೂ ಪ್ರಯೋಜನವಾಗುವುದಿಲ್ಲ. ರೈತರಿಗೆ ಪ್ರತಿ ಲೀಟರ್‌ಗೆ 4 ರು. ಪ್ರೋತ್ಸಾಹ ಧನ ನೀಡಿ ಮತ್ತೊಂದು ಕಡೆ ಅವರಿಂದ ಖರೀದಿಸುವ ಹಾಲಿಗೆ 4 ರು. ಕಡಿಮೆ ಮಾಡಲಾಗಿದೆ. ಡಿಸೇಲ್, ಪೆಟ್ರೋಲ್ ಮತ್ತೀತರ ಎಲ್ಲಾ ಬಗೆಯ ಅಗತ್ಯ ವಸ್ತುಗಳ ಬೆಲೆಯೂ ಏರಿಕೆ ಆಗಿವೆ. ಇದನ್ನು ಕಡಿಮೆ ಮಾಡಲು ಯತ್ನಿಸಿದರೆ ಜನ ಸಾಮಾನ್ಯನರಿಗೆ ನಿಜಾರ್ಥದಲ್ಲಿ ಸಹಾಯ ಮಾಡಿದಂತೆ ಆಗುತ್ತದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಸನ, ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಆ ಕಾಲೇಜುಗಳಿಗೆ ಮಾನ್ಯತೆ ಸಿಗುತ್ತಿಲ್ಲ. ಮತ್ತೊಂದು ಕಡೆ ಭಾರತೀಯ ವೈದ್ಯಕೀಯ ಮಂಡಳಿ ಮಾರ್ಗಸೂಚಿ ಪ್ರಕಾರವೂ ಸೌಲಭ್ಯಗಳನ್ನು ಒದಗಿಸಿಲ್ಲ. ಇದರ ಪರಿಣಾಮ ಸ್ನಾತಕೋತ್ತರ ಪದವಿ ಆರಂಭಿಸಲು ಅನುಮತಿ ಸಿಕ್ಕಿಲ್ಲ. ಪಶು ವೈದ್ಯಕೀಯ ಕಾಲೇಜುಗಳಿಗೆ ತಮ್ಮ ಅವಧಿಯಲ್ಲಿ 150 ಎಕರೆ ಜಾಗ ನೀಡಲಾಗಿದೆ. ಆದರೆ ಇತರೆ ಸೌಲಭ್ಯಗಳನ್ನು ಒದಗಿಸದ ಕಾರಣ ಮಾನ್ಯತೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ, ಪಶು ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡಬೇಕೆಂದು ಲಿಖಿತ ಮನವಿ ನೀಡಿದ್ದು, ಅದಕ್ಕೆ ಒಪ್ಪಿಗೆ ನೀಡಿದ್ದಾರೆ.  ದೇವೇಗೌಡರು ಅರಸೀಕೆರೆ, ಚನ್ನರಾಯಪಟ್ಟಣ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ತೆಂಗಿನ ಮರಗಳು ಸುಳಿ ರೋಗದಿಂದ ಒಣಗಿ ಹೋಗಿರುವುದನ್ನು ಖುದ್ದು ಪರಿಶೀಲಿಸಿ, ಕೇಂದ್ರದ ನಿಯೋಗ ಈ ತಾಲೂಕುಗಳಿಗೆ ಬರುವಂತೆ ಮಾಡಿದರು.
ಆದರೆ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸುತ್ತಿಲ್ಲ. ಇದರಿಂದ ತೆಂಗು ಬೆಳೆಗಾರರಿಗೆ ಪರಿಹಾರ ಪಡೆಯಲು ಕಷ್ಟವಾಗುತ್ತಿದೆ. 4 ಕೋಟಿ ತೆಂಗಿನ ಮರಗಳ ಪೈಕಿ 40 ಸಾವಿರ ತೆಂಗಿನ ಮರಗಳು ಮಳೆಯಿಲ್ಲದೆ, ತೇವಾಂಶ ಕೊರತೆಯಿಂದ ಸುಳಿ ರೋಗ ಬಂದು ಒಣಗಿ ಹೋಗಿವೆ ಎಂದು ವಿವರಿಸಿದರು.
ಚೆಸ್ಕಾಂ ಭ್ರಷ್ಟ ಇಲಾಖೆ: ಇತ್ತೀಚಿನ ದಿನಗಳಲ್ಲಿ ಚೆಸ್ಕಾಂ ಭಷ್ಟಾಚಾರದಿಂದ ಕೂಡಿದೆ. ರೈತರು ಟ್ರಾನ್‌ಫಾರ್ಮರ್ ಟಿಸಿ ಪಡೆಯಲು 5 ಸಾವಿರ ರು. ಲಂಚ ನೀಡಬೇಕಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಬೋರ್‌ವೆಲ್‌ಗಳಲ್ಲಿ ನೀರಿಲ್ಲ, ಇರುವ ಬೋರ್‌ವೆಲ್‌ಗಳಲ್ಲಿ ನೀರು ಇಲ್ಲದೇ ಬತ್ತಿ ಹೋಗಿವೆ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ವ್ಯವಸಾಯ ಮಾಡಲು ಯಾರು ಮುಂದಾಗುವುದಿಲ್ಲ ಎಂದರು.
ವಿದ್ಯುತ್ ಸಂಪರ್ಕ ಕಲ್ಪಿಸದೆ ಹೊಳೆನರಸೀಪುರ ತಾಲೂಕು ಹುಚ್ಚನಕೊಪ್ಪಲು ಏತ ನೀರಾವರಿ ಸ್ಥಗಿತಗೊಂಡಿದೆ. ಅಗ್ಗದ ದರದಲ್ಲಿ ಮದ್ಯ ನೀಡುವುದಾಗಿ ಹೇಳಿದ ಮುಖ್ಯಮಂತ್ರಿಗಳು ಸಿಕ್ಕಾಪಟ್ಟೆ ಹೆಚ್ಚಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಬಡ ಮಕ್ಕಳಿಗೆ ಉತ್ತಮ ರೀತಿಯ ಸೌಲಭ್ಯ ದೊರೆಯುವಂತೆ ಮಾಡಬೇಕು.  ಹಾಸನದಲ್ಲಿ ಮತ್ತೊಂದು ಮಹಿಳಾ ಸರ್ಕಾರಿ ಕಾಲೇಜು ತೆರೆಯಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು. ಜೆಡಿಎಸ್ ಮುಖಂಡ ಹೊನ್ನಾವಳ್ಳಿ ಸತೀಶ್, ಹೊಂಗೆರೆ ರಘು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement