'ಹೆಪಟೈಟಿಸ್ ಭೀಕರ ರೋಗಗಳಲ್ಲೊಂದು'
ಕ.ಪ್ರ.ವಾರ್ತೆ ಸಕಲೇಶಪುರ ಸೆ.1
ಭೀಕರ ರೋಗಗಳಲ್ಲಿ ಹೆಪಟೈಟಿಸ್ ಕೂಡಾ ಒಂದಾಗಿದೆ ಎಂದು ಪ್ರಾಧ್ಯಾಪಕ ಮಹದೇವಪ್ರಸಾದ್ ತಿಳಿಸಿದರು.
ತಾಲೂಕಿನ ಕೌಡಳ್ಳಿ ಜೆಎಸ್ಎಸ್ ಶಾಲೆಯಲ್ಲಿ ನಡೆದ ವಿಶ್ವ ಹೆಪಟೈಟಿಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಾವು ಎಚ್ಐವಿ ವೈರಾಣುವಿನಿಂದ ಬರುವ ಏಡ್ಸ್ತಡೆಗಟ್ಟಲು ಚಿಕಿತ್ಸೆಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಹೆಪಟೈಟಿಸ್ ರೋಗಕ್ಕೂ ನೀಡಬೇಕು ಎಂದು ಹೇಳಿದರು.
ಹೆಪಟೈಟಿಸ್ ಎಂಬುದು ಉಳಿದ ಎಲ್ಲಾ ತರಹದ ಹೆಪಟೈಟಿಸ್ (ಎ.ಸಿ.ಡಿ.ಇ)ಗಿಂತ ತುಂಬಾ ಪರಿಣಾಮಕಾರಿ. ಈ ಕಾಯಿಲೆಗೆ ಒಳಗಾದ ವ್ಯಕ್ತಿ ಕಾಮಾಲೆ, ಹೊಟ್ಟೆನೋವು, ತೂಕ ಇಳುವಿಕೆ, ಯಕೃತ್ನಲ್ಲಿ ಕೊಬ್ಬು ಮುಂತಾದ ರೋಗ ಲಕ್ಷಣಗಳಿಗೆ ಒಳಗಾಗುತ್ತಾರೆ ಎಂದು ನುಡಿದರು.
ಶಾಲೆಯ ಪ್ರಾಂಶುಪಾಲೆ ವಿನೋಲಿಯ ರಾಜ್ ಮಾತನಾಡಿ, ಅಶುದ್ಧವಾದ ಆಹಾರ, ತಿಂಡಿ ತಿನಿಸನ್ನು ಸೇವನೆ ಮಾಡಿ ನೇರವಾಗಿ ವೈರಾಣು ಹೆಪಟ್ಯೆಟಿಸ್ ಎಂಬ ಭಯಾನಕ ರೋಗ ಬರಮಾಡಿಕೊಳ್ಳುತ್ತೇವೆ. ಆದ್ದರಿಂದ ಜನಜಾತ್ರೆಯಲ್ಲಿ ಹೆಚ್ಚು ಆಹಾರ ಸೇವನೆ ರೂಢಿಸಿಕೊಳ್ಳದಿರುವುದು ಆರೋಗ್ಯಕರ ಎಂದು ಸಲಹೆ ನೀಡಿದರು.
ರೇಣುಕಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ನವೀನ್ಕುಮಾರ್, ಮಾನಸ ಎಚ್.ಎಸ್. ಏಂಜಲ್ ಎಸ್ತರ್ ಇದ್ದರು.