ಹೊಳೆನರಸೀಪುರದಲ್ಲಿ ಒಂದು ಗಂಟೆ ತಂಪೆರೆದ ಮಳೆ
ಹೊಳೆನರಸೀಪುರ: ಒಂದು ತಿಂಗಳಿಂದ ಬಿಡುವು ನೀಡಿದ್ದ ಮಳೆರಾಯ, ಭಾನುವಾರ ಸಂಜೆ ಒಂದು ಗಂಟೆ ಕಾಲ ಸುರಿದ ಮಳೆಯಿಂದ ಪಟ್ಟಣದಲ್ಲಿ ತಂಪು ವಾತಾವರಣ ಮೂಡಿಸಿದೆ. ಮಳೆಯಿಲ್ಲದಿದ್ದರಿಂದ ರೈತರು ಬಿತ್ತನೆ ಕಾರ್ಯ ನಡೆಸಿಕೊಂಡು ಬಂದಿದ್ದರು. ಒಂದು ತಿಂಗಳಿಂದ ಮಳೆರಾಯ ಇಲ್ಲದೆ ಇದ್ದಿದ್ದು ರೈತರ ಬಿತ್ತನೆ ಮಾಡಿದ್ದ ರಾಗಿ, ಜೋಳ, ಆಲೂಗಡ್ಡೆ, ಹೊಗೆಸೊಪ್ಪಿನ ಉತ್ತಮ ಬೆಳವಣಿಗೆಗೆ ಸಹಕಾರಿ ಆಗಿತ್ತು. ರೈತರ ಅನಿಸಿಕೆ ಪ್ರಕಾರ ಮಳೆರಾಯ ಒಂದು ತಿಂಗಳು ಬಿಡುವು ನೀಡಿದ್ದರಿಂದ ತಾವು ಬಿತ್ತಿದ್ದ ರಾಗಿ, ಜೋಳ, ಆಲೂ ಬೆಳೆಗೆ ಸಹಕಾರಿ ಆಗಿದೆ. ಭಾನುವಾರ ಸಂಜೆ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಗೆ ಮತ್ತಷ್ಟು ಒತ್ತು ನೀಡಿದಂತಾಗಿದೆ ಎಂಬುದು ರೈತರ ಅಭಿಪ್ರಾಯ. ತೋಟಗಾರಿಕೆ ಇಲಾಖೆ ಅಧಿಕಾರಿ ಚಂದ್ರಶೇಖರ್ ಪ್ರಕಾರ ಈ ವರ್ಷ ಆಲೂ ಬೆಳೆಗಾರರಿಗೆ ನಷ್ಟ ಕಾಣಲು ಸಾಧ್ಯವಿಲ್ಲ. ಏಕೆಂದರೆ ತಾಲೂಕಿನಲ್ಲಿ ಆಲೂ ಬೆಳೆಗೆ ಕೆಲವೆಡೆ ಅಂಗಮಾರಿ ರೋಗ ತಗುಲಿದ್ದರೂ ಈ ರೋಗ ಬರುವುದರೊಳಗೆ ಆಲೂ ಬೆಳೆ ಭೂಮಿಯಲ್ಲಿ ದೃಢವಾಗಿ ನೆಲೆ ನಿಂತಿದ್ದರಿಂದ ಮತ್ತು ಉತ್ತಮ ಮಳೆಯಿಂದ ಭೂಮಿಯಲ್ಲಿದ್ದ ಗಡ್ಡೆಗಳಿಗೆ ಸ್ವಲ್ಪ ಶಕ್ತಿ ಇದ್ದಿದ್ದರಿಂದ ಆಲೂ ಬೆಳೆ ಮೇಲೆ ಅಂತಹ ದುಷ್ಪರಿಣಾಮ ಬೀರಿಲ್ಲದೆ ಇರುವುದು ರೈತರು ನಷ್ಟಕ್ಕೆ ಒಳಗಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ
ಹಾಸನ: ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ಉಂಡೆ ಕೊಬ್ಬರಿಯನ್ನು ಸೆ 2 ರಂದು ಜೇಷ್ಠತಾ ಕ್ರಮ ಸಂಖ್ಯೆ 1115 ರಿಂದ 1213, ಮತ್ತು 2152 ರಿಂದ 2226 ರವರೆಗೆ ಖರೀದಿಸಲಾಗುವುದು. 3 ರಂದು ಜೇಷ್ಠತಾ ಕ್ರಮಸಂಖ್ಯೆ 1214 ರಿಂದ 1288 ಮತ್ತು 2227 ರಿಂದ 2301ವರೆಗೆ ಖರೀದಿ, 4 ರಂದು ಜೇಷ್ಠತಾ ಕ್ರಮಸಂಖ್ಯೆ 1289 ರಿಂದ 1363ರವರೆಗೆ ಹಾಗೂ 2302 ರಿಂದ 2376ರ ವರೆಗೆ ಖರೀದಿ ಹಾಗೂ ಸೆ 5 ರಂದು ಜೇಷ್ಠತಾ ಕ್ರಮಸಂಖ್ಯೆ 1364 ರಿಂದ 1438, 2377 ರಿಂದ 2451ರವರೆಗೆ ಖರೀದಿಸಲಾಗುವುದು ಎಂದು ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ತಿಳಿಸಿದ್ದಾರೆ.
ಇಂದು-ನಾಳೆ ಶ್ರಾವಣ ಮಾಸದ ರಥೋತ್ಸವ
ಅರಸೀಕೆರೆ: ತಾಲೂಕಿನ ಚೆಲ್ಲಾಪುರ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಶ್ರಾವಣ ಮಾಸದ ರಥೋತ್ಸವ ಕಾರ್ಯಕ್ರಮ ಸೆ.2 ರ ಸೋಮವಾರ ಮತ್ತು ಸೆ.3 ರ ಮಂಗಳವಾರ ನಡೆಯಲಿದೆ. ಗ್ರಾಮದಲ್ಲಿ ಸೋಮವಾರ ರಥೋತ್ಸವ ಅಂಗವಾಗಿ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಮತ್ತು ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ಯಾದಪುರದ ಜೇನುಕಲ್ ಸಿದ್ದೇಶ್ವರ ಸ್ವಾಮಿ ಹಾಗೂ ಗ್ರಾಮದೇವತೆ ಕರಿಯಮ್ಮ ಮತ್ತು ಹುಲಿಯಮ್ಮ ದೇವಿಗೆ ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ. ಸೆ.3 ರ ಬೆಳಿಗ್ಗೆ ಚಂದ್ರಮಂಡಲೋತ್ಸವ ಮತ್ತು ಕೆಂಡಸೇವೆ ನಡೆದ ನಂತರ ಮಹಾರಥೋತ್ಸವ ನಡೆಯಲಿದೆ. ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಭಾಗವಹಿಸಬೇಕೆಂದು ದೇವಾಲಯ ಸೇವಾ ಟ್ರಸ್ಟ್ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮಹಾಸಭೆ: ಸೂಚನೆ
ಹಾಸನ: ಸಹಕಾರ ಸಂಘಗಳ ಕಾಯಿದೆ 1959ರ ಕಲಂ 27(1)(ಎ) ರನ್ವಯ, ಎಲ್ಲಾ ವಿಧವಾದ ಸಹಕಾರ ಸಂಘ, ಬ್ಯಾಂಕ್ಗಳು 2012-13ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಸೆ. 25ರೊಳಗೆ ಕಡ್ಡಾಯವಾಗಿ ನಡೆಸಬೇಕಾಗಿರುತ್ತದೆ. ಹಾಸನ ಉಪವಿಭಾಗದ ಎಲ್ಲಾ ಸಹಕಾರ ಸಂಘ, ಬ್ಯಾಂಕ್ಗಳು 2012-13ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸೆ. 25ರೊಳಗೆ ನಡೆಸುವಂತೆ ಹಾಸನ ಉಪವಿಭಾಗದ ಸಹಕಾರ ಸಂಘ ಸಹಾಯಕ ನಿಬಂಧಕರು ಸೂಚಿಸಿದ್ದಾರೆ.
ಅರ್ಜಿ ಆಹ್ವಾನ
ಹಾಸನ: ಜಿಲ್ಲೆಯಲ್ಲಿ ಆರ್ಥಿಕವಾಗಿ ಕಷ್ಟ ಪರಿಸ್ಥಿತಿಯಲ್ಲಿರುವ 50 ವರ್ಷ ಮೇಲ್ಪಟ್ಟ ಕುಸ್ತಿ ಕ್ರೀಡಾ ಪಟುಗಳು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಿಗೆ ಜಿಲ್ಲಾ ಪಂಚಾಯತ್ ಯೋಜನೆಯಡಿಯಲ್ಲಿ ಕ್ರೀಡಾ ಮಾಸಾಶನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಅ.21 ರೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಕ್ರೀಡಾಂಗಣ, ಹಾಸನ ಇವರಿಗೆ ಸಲ್ಲಿಸಲು ಕೋರಲಾಗಿದೆ. ಅರ್ಜಿ ನಮೂನೆ, ಹೆಚ್ಚಿನ ಮಾಹಿತಿಗೆ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಿ ದೂರವಾಣಿ ಸಂಖ್ಯೆ 246056 ಪಡೆಯಬಹುದಾಗಿದೆ.
ಇಂದು ಸಂಸ್ಮರಣಾ ದಿನ
ಹೊಳೆನರಸೀಪುರ: ಒಕ್ಕಲಿಗರ ಹಿತರಕ್ಷಣಾ ಸೇನೆಯ ತಾಲೂಕು ಘಟಕದಿಂದ ಸೆ.2 ರಂದು ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ದಿ. ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಸಂಸ್ಮರಣಾ ದಿನಾಚರಣೆ ಹಾಗೂ ಒಕ್ಕಲಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಘಟಕ ಅಧ್ಯಕ್ಷ ಕಳ್ಳಿಕೊಪ್ಪಲು ರವಿಕುಮಾರ್ ತಿಳಿಸಿದ್ದಾರೆ.