ಕಾಡಾನೆ ಹಾವಳಿ, ಲಕ್ಷಾಂತರ ರುಪಾಯಿ ಮೌಲ್ಯದ ಬೆಳೆ ನಾಶ
ಆಲೂರು: ತಾಲೂಕಿನ ಕೆಂಚಮ್ಮನಹೊಸಕೋಟೆ ಹೋಬಳಿಯ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಭಾನುವಾರ ರಾತ್ರಿ ಕಾಡಾನೆ ಹಾವಳಿಯಿಂದಾಗಿ ಲಕ್ಷಾಂತರ ರುಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಇದರಿಂದ ರೊಚ್ಚಿಗೆದ್ದ ಕಾಗನೂರು ಹಾಗೂ ಬೆಂಬಳೂರು ಗ್ರಾಮಸ್ಥರು ಸೋಮವಾರ ಅರಣ್ಯಾಧಿಕಾರಿಗಳಿಗೆ ಘೇರಾವ್ ಹಾಕಿ ಪ್ರತಿಭಟಿಸಿದರು. ಕೆಂಚಮ್ಮನಹೊಸಕೋಟೆ ಹೋಬಳಿಯ ಕಾಗನೂರು, ಹರಿಹಳ್ಳಿ, ಕಾಗನೂರು ಹೊಸಹಳ್ಳಿ, ಬೋಸ್ಮಾನಹಳ್ಳಿ, ಬೆಂಬಳೂರು, ಶಿರಗಾವರ, ಕಾರ್ಗೋಡು, ಸುಳುಗೋಡು, ಹೆಮ್ಮಿಗೆ, ಕೆಂಚಮ್ಮನಹೊಸಕೋಟೆ, ಹುಸ್ಕೂರ್, ಅಡಿಬಯಲು ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾಡಾನೆಗಳು ಬತ್ತ, ಕಾಫಿ, ಏಲಕ್ಕಿ, ಬಾಳೆ, ಅಡಕೆ, ತೆಂಗು, ಕಾಳುಮೆಣಸು ಮುಂತಾದ ಬೆಳೆಗಳನ್ನು ನಾಶಪಡಿಸಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆ ನಾಶವಾಗಿದೆ. ಬೆಳೆ ನಾಶಗೊಂಡಿರುವ ಪ್ರದೇಶಗಳಿಗೆ ಪರಿಶೀಲನೆಗೆ ತೆರಳಿದ್ದ ಆರ್ಎಫ್ಒ ದೇವರಾಜ್ ಹಾಗೂ ಸಿಬ್ಬಂದಿ ಇದ್ದ ಜೀಪನ್ನು ತಡೆದ ಕಾಗನೂರು, ಬೋಸ್ಮಾನಹಳ್ಳಿ ಗ್ರಾಮಸ್ಥರು ಅಧಿಕಾರಿಗಳಿಗೆ ಘೇರಾವ್ ಹಾಕಿ ಘೋಷಣೆ ಕೂಗಿದರು.