ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕ್ಷೀರ ಭಾಗ್ಯ ಹಾಲು ಕುಡಿದು 4 ವಿದ್ಯಾರ್ಥಿಗಳು ಅಸ್ವಸ್ಥ

Srinivasa Murthy VN
Updated On : 18 Sept 2013, 9:07 am

ಕನ್ನಡಪ್ರಭ ವಾರ್ತೆ ಆಲೂರು ಸೆ.18
ತಾಲೂಕಿನ ಕಣತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೊಗರನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಕ್ಷೀರ ಭಾಗ್ಯ ಯೋಜನೆಯಡಿ ನೀಡಲಾದ ಹಾಲನ್ನು ಕುಡಿದ ನಾಲ್ಕು ಮಕ್ಕಳು ಅಸ್ವಸ್ಥರಾದ ಘಟನೆ ಬುಧವಾರ ನಡೆದಿದೆ.
ಕ್ಷೀರ ಭಾಗ್ಯ ಯೋಜನೆಯಡಿ ಶಾಲೆಗಳಲ್ಲಿ ನೀಡುತ್ತಿರುವ ಹಾಲನ್ನು ಬೆಳಗ್ಗೆ 9.50.ರಲ್ಲಿ ಅಡುಗೆಯವರು ಎಲ್ಲಾ ಮಕ್ಕಳಿಗೂ ನೀಡಿದ್ದರು. ಹಾಲು ಕುಡಿದ 3 ನೇ ತರಗತಿಯ ಅನುಪಮ, ಪಲ್ಲವಿ, 4 ನೇ ತರಗತಿಯ ಸತೀಶ್ ಹಾಗೂ ಭೂಮಿಕ ಈ ನಾಲ್ಕು ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ.
ಮಕ್ಕಳು ವಾಂತಿ ಮಾಡಿಕೊಂಡ ತಕ್ಷಣ ಶಿಕ್ಷಕರು ಮುಂಜಾಗರೂಕತೆ ದೃಷ್ಟಿಯಿಂದ ಅಸ್ವಸ್ಥ ಮಕ್ಕಳೂ ಸೇರಿದಂತೆ ಶಾಲೆಯ ಎಲ್ಲಾ 15 ಮಕ್ಕಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಕೊಡಿಸಿದ್ದಾರೆ.
ಇದರಿಂದ ಆತಂಕಗೊಂಡು ಪೋಷಕರು ಶಾಲೆ ಬಳಿ ಜಮಾಯಿಸಿದ್ದರು. ವಿಷಯ ತಿಳಿದ ಟಿಎಚ್‌ಒ ತಿಮ್ಮಯ್ಯ, ಕೃಷ್ಣಶೆಟ್ಟಿ, ಬಿಇಒ ಪುಷ್ಪಲತ, ಬಿಆರ್‌ಸಿ ರವಿಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ ಕಣತೂರು ಗ್ರಾಪಂ ಅಧ್ಯಕ್ಷ ನಟರಾಜ್ ನಾಕಲಗೋಡ್ ಮಾತನಾಡಿ, ಪ್ರತಿ ದಿನ ಅಡುಗೆ ಪಾತ್ರೆಗಳನ್ನು ಚೆನ್ನಾಗಿ ತೊಳೆದು ಕುದಿಸಿದ ನೀರಿಗೆ ಹಾಲಿನ ಪುಡಿಯನ್ನು ಹಾಕಿ ಕುದಿಸಿ, ಮಕ್ಕಳಿಗೆ ಹಾಲನ್ನು ನೀಡುವ ಮೊದಲು ಅಡುಗೆಯವರು ಸ್ವತ: ಕುಡಿದು ಪರಿಶೀಲಿಸಿ ನಂತರ ಶಿಕ್ಷಕರ ಸಮ್ಮುಖದಲ್ಲಿ ಮಕ್ಕಳಿಗೆ ನೀಡಬೇಕು ಹಾಗೂ ಪಾತ್ರೆಗಳು ಮತ್ತು ಆಹಾರ ಸಾಮಾಗ್ರಿಗಳಲ್ಲಿ ಕ್ರಿಮಿ ಕೀಟಗಳು ಸೇರದಂತೆ ಮುಂಜಾಗ್ರತೆ ಕ್ರಮ ವಹಿಸಬೇಕೆಂದ ಅವರು, ಬಿಇಒ ವಾರಕ್ಕೊಮ್ಮೆಯಾದರೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಇನ್ನು ಮುಂದೆ ಪ್ರತಿ ದಿನ ಆದಷ್ಟು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಹಾಗೂ ಅಡುಗೆ ಕೋಣೆಯ ಸ್ವಚ್ಛತೆ, ಆಹಾರ ಪದಾರ್ಥಗಳ ಸಂರಕ್ಷಣೆ ಮತ್ತು ಪಾತ್ರೆಗಳನ್ನು ಸ್ವಚ್ಛವಾಗಿರಿಸುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಶಾಲೆಗೆ ಭೇಟಿ ನೀಡಿದ ಟಿಎಚ್‌ಒ ತಿಮ್ಮಯ್ಯ ಅಡುಗೆ ಕೋಣೆ ಶುಚಿಯಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು ಆಗ ಆರೋಗ್ಯವಾಗಿದ್ದು ಹಾಲನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಿ ಕೊಡಲಾಗುವುದು ಎಂದು ತಿಳಿಸಿದರು.
ಗಾಪಂ ಸದಸ್ಯ ರಾಜಯ್ಯ, ಕುಂಬಾರಹಳ್ಳಿ ವೆಂಕಟೇಶ, ಚಂದ್ರಶೆಟ್ಟಿ ಮುಂತಾದವರಿದ್ದರು.

ನಾಯಿ ಕಚ್ಚಿ ಅಂಗನವಾಡಿ ಶಿಕ್ಷಕಿ ಆಸ್ಪತ್ರೆಗೆ ದಾಖಲು
ಸಕಲೇಶಪುರ: ಬೀದಿ ನಾಯಿ ಕಚ್ಚಿ ಅಂಗನವಾಡಿ ಶಿಕ್ಷಕಿ ಗಾಯಗೊಂಡ ಘಟನೆ ಬುಧವಾರ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ನಡೆದಿದೆ. ತಾಲೂಕಿನ ಕೊಲ್ಲಹಳ್ಳಿ ಗ್ರಾಮದ ಅಂಗನವಾಡಿ ಶಿಕ್ಷಕಿ ಯಶೋಧ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಕ್ಷಕಿ ಕರ್ತವ್ಯ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಬೀದಿ ಬದಿಯಲ್ಲಿದ್ದ ನಾಯಿ ಕಾಲಿಗೆ ಕಚ್ಚಿದ್ದರಿಂದ ಕಾಲಿನ ಮಾಂಸ ಈಚೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಪಟ್ಟಣದಲ್ಲಿ ಬೀದಿ ನಾಯಿಗಳು ಹೆಚ್ಚಿದ್ದು, ಪಟ್ಟಣ ವ್ಯಾಪ್ತಿಯ ಸುಮಾರು ಸಾವಿರಕ್ಕೂ ಹೆಚ್ಚಿನ ಬೀದಿನಾಯಿಗಳಿದ್ದು ಜನರು ಆತಂಕದ ನಡುವೆ ಸಂಚರಿಸ ಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement