ತಿರು ಓಣಂ ವಿಶೇಷ ಪೂಜಾ ಕೈಂಕರ್ಯ
ಅರಸೀಕೆರೆ: ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ತಿರು ಓಣಂ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಪಟ್ಟಣದ ಹಾಸನ ರಸ್ತೆಯಲ್ಲಿನ ಹೊರ ಭಾಗದಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪ್ರಾತ: ಕಾಲದಲ್ಲಿ ತುಪ್ಪದ ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಿ ನಂತರ ವಿಶೇಷ ಅಲಂಕಾರ ಮಾಡಲಾಗಿತ್ತು. ತಿರುಓಣಂ ಹಬ್ಬದ ಕಾರಣ ದೇವಾಲಯ ಪ್ರಾಂಗಣದಲ್ಲಿ ವಿಶೇಷ ಪುಷ್ಪಗಳಿಂದ ಶೃಂಗರಿಸಿದ ಮಧ್ಯೆ ಜ್ಯೋತಿಯನ್ನು ಬೆಳಗಿಸುವ ಮೂಲಕ ಸಾಂಪ್ರದಾಯಿಕ ವಿಧಿವಿಧಾನಗಳಲ್ಲಿ ವಿಶೇಷ ಪೂಜೆಯನ್ನು ಅರ್ಚಕರು ನೆರವೇರಿಸಿದರು. ದೇವಾಲಯ ಆಡಳಿತ ಮಂಡಲಿ ಅಧ್ಯಕ್ಷ ರಾಜಣ್ಣ ಸೇರಿದಂತೆ ನೂರಾರು ಭಕ್ತರ ಸಮೂಹ ಭಾಗವಹಿಸಿ ದೇವರ ದರ್ಶನ ಭಾಗ್ಯ ಪಡೆದರು.
ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆ 21ಕ್ಕೆ ಮುಂದೂಡಿಕೆ
ಹಾಸನ: ಮಾಜಿ ಪ್ರಧಾನಮಂತ್ರಿ ಹಾಗೂ ಸಂಸದರು ಮತ್ತು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಸೆ.19 ರಂದು ನಡೆಯಬೇಕಾಗಿದ್ದ 2013-14ನೇ ಸಾಲಿನ ಕೇಂದ್ರ ನಾನಾ ಪುರಸ್ಕಾರ ಯೋಜನೆಯ ಎರಡನೆ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ಮತ್ತು ಸೆ.20 ರಂದು ಬೆಳಿಗ್ಗೆ 11ಕ್ಕೆ ಬ್ಯಾಂಕರ್ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಸೆ.21 ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜವಳಿ ಸಚಿವ ಚಿಂಚನಸೂರ ಪ್ರವಾಸ ಇಂದು
ಹಾಸನ: ರಾಜ್ಯ ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ ಅವರು ಸೆ.19 ರಂದು ಮಧ್ಯಾಹ್ನ 1ಕ್ಕೆ ಹಾಸನಕ್ಕೆ ಆಗಮಿಸುವರು. ಸಂಜೆ 4 ಕ್ಕೆ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಆಲಿಸುವರು. ಸೆ.20 ರಂದು ಮಧ್ಯಾಹ್ನ 12.30 ಕ್ಕೆ ಹಾಸನ ತಾಲ್ಲೂಕಿನ ಪೆರುಮನ ಹಳ್ಳಿಯ ಸಮೀಪವಿರುವ ನ್ಯೂ ಮಿನರ್ವ ಮಿಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಂಜೆ 4.30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.