ದುದ್ದ ಸುತ್ತಮುತ್ತ ವಿದ್ಯುತ್ ವ್ಯತ್ಯಯ
ಹಾಸನ: ಎರಡನೇ ತ್ರೈಮಾಸಿಕ ನಿರ್ವಹಣಾ ಸಂಬಂಧ ಸೆ. 19 ರಂದು 66-11 ಕೆ.ವಿ ದುದ್ದ ವಿ.ವಿ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆನೇಹಳ್ಳಿ ಹೆರಗು, ದುದ್ದ ಸಂತೆಕೊಪ್ಪಲು, ಕೋಡಿಹಳ್ಳಿ, ಕಾರೆಬಾರೆ, ಕಿತ್ತನೆಕೆರೆ ನಂದಿಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಕರ್ನಾಟಕ ವಿದ್ಯುತ್ ವಿತರಣಾ ನಿಗಮ ನಿಯಮಿತ ನೋಡಲ್ ಕೇಂದ್ರದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ವಿನಂತಿಸಿದ್ದಾರೆ.
'ಪ್ರಜಾಪ್ರಭುತ್ವಕ್ಕೆ ಪರ್ಯಾಯ ರಾಜಕೀಯ ವ್ಯವಸ್ಥೆ ಮತ್ತೊಂದಿಲ್ಲ'
ಹಾಸನ: ಏನೇ ದೋಷಗಳಿದ್ದರೂ ಪ್ರಜಾಪ್ರಭುತ್ವಕ್ಕೆ ಪರ್ಯಾಯವಾದ ಶ್ರೇಷ್ಠ ರಾಜಕೀಯ ವ್ಯವಸ್ಥೆ ವಿಶ್ವದಲ್ಲಿ ಮತ್ತೊಂದಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಪ್ಪ ಹೇಳಿದರು. ಅವರು ತಾಲೂಕಿನ ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಇಡೀ ವಿಶ್ವ ಇಂದು ಪ್ರಜಾಪ್ರಭುತ್ವ ಬಯಸುತ್ತಿದೆ. ಅದಕ್ಕಾಗಿ ಅನೇಕ ದೇಶಗಳಲ್ಲಿ ಇಂದಿಗೂ ಹೋರಾಟಗಳು ನಡೆಯುತ್ತಿವೆ ಎಂದು ಹೇಳಿದರು.
ಸರ್ಕಾರವನ್ನು ಟೀಕಿಸುವ ಹಕ್ಕು ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ. ಪ್ರಜಾಪ್ರಭುತ್ವ ಶಾಂತಿ ಬಯಸುತ್ತದೆ. ಇಲ್ಲಿ ಕ್ರಾಂತಿಗೆ, ರಕ್ತ ಪಾತಕ್ಕೆ, ಹಕ್ಕುಗಳ ದಮನಕ್ಕೆ ಅವಕಾಶವಿಲ್ಲ ಎಂದು ಹೇಳಿದರು.
ಹಾಸನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಅಂತೋನಿ ಮೇರಿ ಮಾತನಾಡಿ ಇಂದು ಹಲವಾರು ದೇಶಗಳು ಸರ್ವಾಧಿಕಾರಿ ಆಡಳಿತದ ಕ್ರೌರ್ಯಕ್ಕೆ ಸಿಲುಕಿ ನಲುಗುತ್ತಿವೆ. ರಕ್ತ ಪಾತದಿಂದ ಪ್ರಜೆಗಳ ನರ ಮೇಧ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಮೌಲ್ಯಾತೀತವಾಗುತ್ತದೆ ಎಂದು ನುಡಿದರು.
ಅಸಂಖ್ಯಾತ ಜನರ ತ್ಯಾಗ ಬಲಿ ದಾನಗಳ ಫಲವಾಗಿ ದೊರೆತ ಸ್ವಾತಂತ್ರ್ಯ ಹಾಗೂ ನೂರಾರು ಚಿಂತಕರ ಪರಿಶ್ರಮದ ಫಲವಾಗಿ ರೂಪುಗೊಂಡ ಸಂವಿಧಾನ ನಮ್ಮದಾಗಿದೆ.
ಇವೆರಡರ ಫಲ ಶ್ರುತಿಯಾಗಿ ನಮ್ಮ ದೇಶ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಹೊರ ಹೊಮ್ಮಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಜವಾಬ್ದಾರಿ ಇಂದಿನ ಯುವ ಜನತೆಯ ಮೇಲಿದೆ ಎಂದರು.
ಉಪನ್ಯಾಸಕ ಡಾ.ಡಿ.ಶ್ರೀನಿವಾಸ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಪಿ.ಗೋಪಾಲ್ ಮಾತನಾಡಿ ನಮ್ಮ ಆಚರಣೆ, ನಮ್ಮ ನಡತೆಗೂ ವ್ಯತ್ಯಾಸವಿರದಂತೆ ಜೀವನ ರೂಪಿಸಿಕೊಳ್ಳುವುದೆ ನಿಜವಾದ ಪ್ರಜಾಪ್ರಭುತ್ವ ಎಂದು ಹೇಳಿದರು.
ಸಿ.ಡಿ. ರಘು ಸ್ವಾಗತಿಸಿದರು. ಭವ್ಯ ವಂದಿಸಿದರು. ಆನಂದಕುಮಾರ್ ನಿರೂಪಿಸಿದರು.
ಹೇಮಾವತಿ ಡ್ಯಾಂ 3697 ಕ್ಯುಸೆಕ್ ಒಳ ಹರಿವು
ಹಾಸನ: ಹೇಮಾವತಿ ಜಲಾಶಯಕ್ಕೆ ಬುಧವಾರ 3697 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4300 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2920.68 ಅಡಿ. 35.827 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ನೀರಿನ ಮಟ್ಟ 3164.890 ಅಡಿ, ಒಳ ಹರಿವು 350 ಕ್ಯುಸೆಕ್, ಹೊರ ಹರಿವು ನಾಲೆಗೆ 100 ಕ್ಯುಸೆಕ್, ನದಿಗೆ 250 ಕ್ಯುಸೆಕ್, ಒಟ್ಟು 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆಛ 3166.56 ಅಡಿ, ಒಳ ಹರಿವು 40 ಕ್ಯುಸೆಕ್, ಹೊರ ಹರಿವು 25 ಕ್ಯುಸೆಕ್ ಒಟ್ಟು 1.351 ಟಿಎಂಸಿ ನೀರು ಸಂಗ್ರಹವಾಗಿದೆ.
ತಾಲೂಕುವಾರು ವಿವರ: ಆಲೂರು 12, ಅರಕಲಗೂಡು 3, ಅರಸೀಕೆರೆ 5, ಬೇಲೂರು 18.6, ಹಾಸನ 9.4, ಹೊಳೇನರಸೀಪುರ 2.4, ಸಕಲೇಶಪುರ 36.6 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಆಲೂರು 12,ಪಾಳ್ಯ 17, ಕೆ.ಹೊಸಕೋಟೆ 6.6, ಕುಂದೂರು 8, ಅರಕಲಗೂಡು 3, ಮಲ್ಲಿಪಟ್ಟಣ 4, ರಾಮನಾಥಪುರ 2.4, ದೊಡ್ಡಮಗ್ಗೆ 3.2, ದೊಡ್ಡಬೆಮ್ಮತ್ತಿ 3.2, ಅರಸೀಕೆರೆ 5, ಬಾಣಾವರ 6.2, ಗಂಡಸಿ 3.8, ಕಣಕಟ್ಟೆ 3.6, ಯಳವಾರೆ 4.2, ಜಾವಗಲ್ 15, ಬೇಲೂರು 18.6, ಹಳೇಬಿಡು 11.8, ಹಗರೆ 8, ಬಿಕ್ಕೋಡು 21.6, ಗೆಡೆಂಹಳ್ಳಿ 6.6, ಅರೇಹಳ್ಳಿ 14.2, ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ 2.6, ಬಾಗೂರು 4.2, ನುಗ್ಗೆಹಳ್ಳಿ 5.2, ಶುಕ್ರವಾರ ಸಂತೆ 2.8, ಹಾಸನ 9.4, ಕಟ್ಟಾಯ 3.6, ಶಾಂತಿಗ್ರಾಮ5.4, ದುದ್ದ 2, ಗೊರೂರು 1, ಹೊಳೆನರಸೀಪುರ 2.4, ಸಕಲೇಶಪುರ 36.6, ಬಾಳುಪೇಟೆ 36, ಯಸಳೂರು 15, ಶುಕ್ರವಾರ ಸಂತೆ 13.3 ,ಮರೇನಹಳ್ಳಿ 48.3, ಹೊಸೂರು 17,ಬೆಳಗೊಡು 22.2,ಹಾನುಬಾಳು 25.6,ಹೆತ್ತೂರು 24.6 ಮಿ.ಮೀ ಮಳೆಯಾಗಿದೆ.
ಆಟೋ ಚಾಲಕರು ಸಂಯಮ ಕಳೆದುಕೊಳ್ಳಬಾರದು: ಶಾಸಕ
ಅರಸೀಕೆರೆ: ಸಾರ್ವಜನಿಕ ಸೇವೆಯಲ್ಲಿ ಸದಾ ನಿರತರಾಗುವ ಆಟೋ ಚಾಲಕರು ಸಂಯಮ, ತಾಳ್ಮೆ ಕಳೆದುಕೊಳ್ಳದೆ ನಾಗರಿಕರೊಂದಿಗೆ ಪ್ರೀತಿ ವಿಶ್ವಾಸಗಳೊಂದಿಗೆ ನಡೆದುಕೊಳ್ಳುವ ಮೂಲಕ ವೃತ್ತಿ ಗೌರವ ಕಾಪಾಡಿಕೊಳ್ಳಬೇಕೆಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಕಿವಿಮಾತು ಹೇಳಿದರು. ಪಟ್ಟಣದ ಶಾಂತವೀರಮ್ಮ ಪರಮೇಶ್ವರಪ್ಪ ಕಲ್ಯಾಣ ಮಂದಿರದಲ್ಲಿ ತಾಲೂಕು ಆಟೋ ಚಾಲಕರು ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟಿಸಿ ಅವರು ಮಾತನಾಡಿದರು. ಆಟೋ ಚಾಲಕರಿಗೆ ಪರವಾನಗಿ ಪಡೆಯಲು ಆಗುವ ಖರ್ಚನ್ನು ತಾವು ನೀಡಲು ಬದ್ದನಾಗಿದ್ದೇನೆ. ಆದಕಾರಣ ಯಾರೂ ಕೂಡ ಪರವಾನಗಿ ಇಲ್ಲದೆ ಆಟೋ ಚಾಲನೆ ಮಾಡಬಾರದು ಎಂದ ಅವರು ಇನ್ನು ಒಂದು ವರ್ಷದಲ್ಲಿ ವಸತಿ ರಹಿತ ಆಟೋ ಚಾಲಕರಿಗೆ ವಸತಿ ನೀಡುವ ಮತ್ತು ಸಂಘಕ್ಕೆ ಉತ್ತಮ ಕಚೇರಿ ವ್ಯವಸ್ಥೆಯನ್ನು ತಾವು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವಾಣಿಜ್ಯೋದ್ಯಮಿ ಜೆ.ಪಿ.ಜಯಣ್ಣ ಸಂಘದ ನಾಮಫಲಕ ಅನಾವರಣ ನೆರವೇರಿಸಿದರು.ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಪೇದೆ ಎಂ.ಗಿರೀಶ್ ಅವರನ್ನು ಸನ್ಮಾನಿಸಲಾಯಿತು. ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಡಿವೈಎಸ್‌ಪಿ ಮಂಜುನಾಥ್, ಗ್ರಾಮಾಂತರ ವೃತ್ತ ಆರಕ್ಷಕ ನಿರೀಕ್ಷಕ ಗಂಗಾಧರಪ್ಪ ಮಾತನಾಡಿದರು. ಸಂಘದ ಅಧ್ಯಕ್ಷ ಜಿ.ಎಲ್.ಸಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಎಚ್.ಟಿ.ಶಿವಮೂರ್ತಿ ಇದ್ದರು.