ಪೊಲೀಸ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹಾಸನ ಸೆ.18
ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಹಾಸನದ ಮುಶೀರ್ ಅಹಮದ್ ಎಂಬುವರ ಮಗಳ ಪುತ್ರ ಶೋಯಬ್ ಎಂಬಾತ ಯಾರೊಂದಿಗೊ ಗಲಾಟೆ ಮಾಡಿಕೊಂಡಿರುವ ಬಗ್ಗೆ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದಿರುವ ವಿಷಯ ತಿಳಿದ ಮುಷಿರ್ ಅಹಮ್ಮದ್ರ 2ನೇ ಪುತ್ರ, ಕೆಎಸ್ಆರ್ಟಿಸಿ ನೌಕರ ಜೋಹರ್ ಅಹಮದ್ ನಗರ ಠಾಣೆಗೆ ವಿಚಾರಿಸಲು ಹೋದಾಗ ಪೊಲೀಸರು ಆತನಿಗೆ ಚೆನ್ನಾಗಿ ಥಳಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನು ತಿಳಿದ ಮತ್ತೊಬ್ಬ ಪುತ್ರ ಸಮಾಜ ಕಲ್ಯಾಣ ಇಲಾಖೆ ನೌಕರ ಕೌಸರ್ ಅಹಮದ್ ಸೆ. 3ರಂದು ರಾತ್ರಿ ಪೊಲೀಸ್ ಠಾಣೆಗೆ ಹೋಗಿ ಅಲ್ಲಿದ್ದ ಸರ್ಕಲ್ ಇನ್ಸ್ಪೆಕ್ಟರ್ ಅನುಮತಿ ಪಡೆದು ಒಳಗೆ ಹೋದ ಸಂದರ್ಭದಲ್ಲಿ ಬಾಗಿಲ ಬಳಿ ನಿಂತಿದ್ದ ಆರಕ್ಷಕ ಡಿ.ಆರ್.ಕುಮಾರ್ ಯಾರೋ ನೀನು ಎಂದು ಕೇಳಿದ್ದಾರೆ.
ಆದಕ್ಕೆ ನನ್ನ ತಂಗಿಯ ಮಗನನ್ನು ಬಂಧಿಸಿದ್ದು, ಆತನನ್ನು ನೋಡಲು ಬಂದಿದ್ದೇನೆ ಎಂದು ಹೇಳಿದಾಗ ಡಿ.ಆರ್.ಕುಮಾರ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದರು.ಹಾಗೂ ಇವರ ಮೊಬೈಲ್ ಕಿತ್ತುಕೊಂಡು ಠಾಣೆ ಒಳಗೆ ಕರೆದುಕೊಂಡು ಹೋಗಿ ಪೇದೆಗಳಾದ ಡಿ.ಆರ್.ಕುಮಾರ್, ಮೋಹನ್ಕುಮಾರ್, ಎಸ್ಐ ಮೇಹಸ್ ಅವರುಗಳು ಜೋಹರ್, ಶೋಯಬ್ ಹಾಗೂ ಕೌಸರ್ ಅಹಮದ್ ಅವರ ಬಟ್ಟೆ ಬಿಚ್ಚಿಸಿ ಥಳಿಸಿದ್ದಾರೆ ಎಂದು ದೂರಿದರು.
ಈ ಹಿಂದೆ ದುದ್ದ ಪೊಲೀಸ್ ಠಾಣೆಯಲ್ಲಿದ್ದ ಪಿಎಸ್ಐ ಮಹೇಶ್ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಜೋಡಿ ಕೃಷ್ಣಪುರ ನಾರಾಯಣನ ಮೇಲೆ ಕಳ್ಳತನದ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ್ದರು. ಕಬ್ಬಳ್ಳಿ ಗ್ರಾಮ ಪಂಚಾಯ್ತಿ ಅವ್ಯವಹಾರವನ್ನು ಬಯಲಿಗೆಳೆದ ಕಬ್ಬಳಿ ರಾಮಚಂದ್ರ, ದುದ್ದ ಗ್ರಾಪಂ ಅವ್ಯವಹಾರ ಬಯಲಿಗೆಳೆದ ದಿವಾಕರ ಮತ್ತು ಸಮತಾ ಸೈನಿಕ ದಳದ ಸತೀಶ್ ರೌಡಿಶೀಟ್ ಬರೆದಿದ್ದಾರೆ.
ಇದೇ ರೀತಿ ಸಾಕಷ್ಟು ಜನರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದು, ಕೂಡಲೇ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡ ಸತೀಶ್, ಕೃಷ್ಣದಾಸ್, ಕಲಂದರ್, ನಾಗರಾಜ್ ಇತರರು ಇದ್ದರು.