ಮೋದಿ ಹುಟ್ಟುಹಬ್ಬ ಪ್ರಯುಕ್ತ ಸಕಲೇಶಪುರದಲ್ಲಿ ಬೈಕ್ ರ್ಯಾಲಿ
ಸಕಲೇಶಪುರ: ದೇಶವನ್ನು ಇಂದಿನ ದುಸ್ಥಿತಿಯಿಂದ ರಕ್ಷಿಸುವ ಉದ್ದೇಶದಿಂದ ನರೇಂದ್ರ ಮೋದಿ ಪ್ರಧಾನಿಯಾಗ ಬೇಕಾಗಿದೆ ಎಂದು ನಮೋ ಬಿಗ್ರೇಡ್ ಸಂಘಟನೆಯ ರಾಜ್ಯ ಪ್ರಮುಖ್ ರವಿವರ್ಮಾ ಹೇಳಿದ್ದಾರೆ.
ಮಂಗಳವಾರ ತಾಲೂಕು ನಮೋ ಬಿಗ್ರೇಡ್ ಸಂಘಟನೆಯಿಂದ ಮೋದಿ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಬೈಕ್ ರ್ಯಾಲಿಯ ನಂತರ ಪಟ್ಟಣದ ಹಳೇ ಬಸ್‌ನಿಲ್ದಾಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಅಭಿವೃದ್ಧಿ ಹರಿಕಾರರಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ತಮ್ಮ ರಾಜ್ಯದಲ್ಲಿ ವಿದ್ಯುತ್, ರಸ್ತೆ, ಕುಡಿಯುವ ನೀರು ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಸಂಪೂರ್ಣ ಸ್ವಾಯತತ್ತೆ ಸಾಧಿಸಿದ್ದಾರೆ.
ಗುಜರಾತ್ ಅಭಿವೃದ್ಧಿಯಲ್ಲಿ 2ನೇ ರಾಜ್ಯವಾಗಿ ಪರಿಗಣಿಸಲ್ಪಟ್ಟಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರಕಾರ ದೇಶದ ಜನರ ಸ್ವಾಭಿಮಾನವನ್ನು ವಿದೇಶಿಗರ ಎದುರಿನಲ್ಲಿ ಅಡ ಇಡುವ ಕೆಲಸ ಮಾಡುತ್ತಿದೆ. ದಿನದಿಂದ ದಿನಕ್ಕೆ ದೇಶ ವಿನಾಶದತ್ತ ಸಾಗುತ್ತಿದ್ದು ಬೆಲೆ ಏರಿಕೆ, ಭ್ರಷ್ಟಚಾರ, ರುಪಾಯಿ ಮೌಲ್ಯ ಕುಸಿತವನ್ನು ತಡೆಗಟ್ಟಲಾಗದ ಮನಮೋಹನ್‌ಸಿಂಗ್ ಸರಕಾರ ಸಮರ್ಥ ಆಡಳಿತ ನಡೆಸಲು ವಿಫಲವಾಗಿದೆ ಎಂದರು. ಈ ಹಿನ್ನೆಲೆಯಲ್ಲಿ 2014 ರಲ್ಲಿ ನಡೆಯಲಿರುವ ಲೋಕಸಭಾ ಚುನಾ ವಣೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ನಮೋ ಬಿಗ್ರೇಡ್ ಸಂಘಟನೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಸಭೆಗೂ ಮುನ್ನ ಪಟ್ಟಣದ ಗುಹೇಕಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೈಕ್‌ರ್ಯಾಲಿ ಆರಂಭಿಸಿದ ಕಾರ್ಯಕರ್ತರು, ಮುಖ್ಯರಸ್ತೆ, ಅಜಾದ್‌ರಸ್ತೆ, ಲಕ್ಷ್ಮಿಪುರಂ, ಕುಶಾಲ ನಗರ ಹಾಗೂ ಎಸ್.ಪಿ ರಸ್ತೆ ಬಡಾವಣೆಯಲ್ಲಿ ಸಂಚರಿಸಿ ಜನರ ಗಮನ ಸೆಳೆದರು.