ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಜ್ಯದಲ್ಲಿ 26,522 ಪ್ರಕರಣ ವಿಲೇವಾರಿ

Srinivasa Murthy VN
Updated On : 19 Sept 2013, 12:35 pm

ಕನ್ನಡಪ್ರಭ ವಾರ್ತೆ ಹಾಸನ ಸೆ. 18
ರಾಜ್ಯಾದ್ಯಂತ 2007 ರಿಂದ ಈವರೆಗೆ 41,683 ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, 26,522 ಪ್ರಕರಣಗಳು ವಿಲೇವಾರಿ ಮಾಡಲಾಗಿದೆ. 15,161 ಪ್ರಕರಣಗಳು ವಿವಿಧ ಹಂತದಲ್ಲಿ ವರದಿ ಬರಲು ಬಾಕಿ ಇದ್ದು, ಶೀಘ್ರದಲ್ಲೇ ಇತ್ಯರ್ಥಗೊಳ್ಳುವ ನಿರೀಕ್ಷೆ ಇದೆ.
  ಜಿಲ್ಲೆಯಲ್ಲಿ 2007 ರಿಂದ ಈವರೆಗೆ 907 ಪ್ರಕರಣಗಳು ದಾಖಲಾಗಿದ್ದು, 602 ಪ್ರಕರಣಗಳು ವಿಲೇವಾರಿ ಮಾಡಲಾಗಿದೆ 305 ಪ್ರಕರಣಗಳು ತನಿಖಾ ಹಂತದಲ್ಲಿವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಹುನುಗುಂದ ತಿಳಿಸಿದರು.
 ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಾನವ ಹಕ್ಕುಗಳ ಉಲ್ಲಂಘನೆ ತಡೆ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕಿದ್ದು ಅದಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಎಚ್ಚರ ವಹಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
 ರಾಜ್ಯಾದ್ಯಂತ ದಾಖಲಾಗುವ ಪ್ರಕರಣಗಳಲ್ಲಿ ಶೇಕಡ 60 ರಷ್ಟು ಪ್ರಕರಣಗಳು ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಉಳಿದಂತೆ ನಾಗರಿಕ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಕೇಳಿ ಬರುತ್ತಿದೆ ಸರ್ಕಾರಿ ಶಾಲೆ, ವಿದ್ಯಾರ್ಥಿ ನಿಲಯ, ಅಂಗನವಾಡಿಗಳಲ್ಲಿ ಶೌಚಾಲಯ ಕುಡಿಯುವ ನೀರು, ಸ್ವಚ್ಚತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆ ಸಾಮಾನ್ಯವಾಗಿದ್ದು ಇದು ಬಗೆಹರಿಯಬೇಕಾಗಿದೆ ಎಂದು ಹೇಳಿದರು.
 ಮಕ್ಕಳ ಕಡ್ಡಾಯ  ಶಿಕ್ಷಣ ಹಕ್ಕು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು  ಮಹಿಳಾ ಸಬಲೀಕರಣ ಯೋಜನೆಗಳು ಗ್ರಾಮೀಣ ಭಾಗಕ್ಕೂ ತಲುಪಬೇಕು ಎಂದ ಅವರು ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ ಪ್ರಸೂತಿ ಪೂರ್ವ ಲಿಂಗ ಪತ್ತೆ ಕಾರ್ಯ ಕಡ್ಡಾಯವಾಗಿ ನಿರ್ಮೂಲನೆಗೊಳ್ಳಬೇಕು.ಇಂತಹ ಕಾರ್ಯದಲ್ಲಿ ತೊಡಗುವವರ ವಿರುದ್ಧ ಗಂಭಿರ ಕ್ರಮಗಳಾಬೇಕು ಈ ನಿಟ್ಟಿನಲ್ಲಿ ಮೇಲ್ವಿಚಾರಣೆ ಮಾಡುವಂತೆ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಹುನುಗುಂದ ಸೂಚಿಸಿದರು.
 ಅರಕಲಗೂಡು ರಾಗಿಮರೂರಿನ ಜೀತ ಪದ್ಧತಿ ಪ್ರಕರಣದ ಬಗ್ಗೆ ನಿರಂತರ ನಿಗಾವಹಿಸಲು ತಿಳಿಸಿದ ಅವರು ಜಿಲ್ಲಾ ಬಂಧಿಖಾನೆಯಲ್ಲಿನ ವಿಚಾರಣಾಧೀನ ಖೈದಿಗಳಿಗೆ ಎಸ್ಕಾರ್ಟ್ ಕೊರತೆ ನೀಗಿಸುವಂತೆ ಮತ್ತು ಬಂಧಿಖಾನೆ ಸ್ಥಳಾಂತರಗೊಳ್ಳುವವರೆಗೆ ಭದ್ರತಾ ಕ್ರಮವನ್ನು ಬಲಪಡಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿನ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯಕೀಯ ಸೌಲಭ್ಯಗಳು ಉತ್ತಮಗೊಳ್ಳಬೇಕು ಹಳ್ಳಿಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಸೂಕ್ತ ವಸತಿ ಹಾಗೂ ಮೂಲಭೂತ ಸೌಕರ್ಯ ಒದಗಿಸಿದಲ್ಲಿ ಯಾರೂ ಗ್ರಾಮೀಣ ಸೇವೆಗೆ ಹಿಂಜರಿಯಲಾರರು ಎಂದು ಹುನುಗುಂದ ಅವರು ಅಭಿಪ್ರಾಯಪಟ್ಟರು.
 ಪೊಲೀಸ್ ಇಲಾಖೆಯಲ್ಲಿ ಕಾನೂನುನಡಿಯಲ್ಲೇ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿ ತನಿಖೆಗೆ ಆಯೋಗ ಯಾವುದೇ ರೀತಿ ಅಡ್ಡಿಪಡಿಸುವುದಿಲ್ಲ ಎಂದು ಹುನುಗುಂದ ಅವರು ತಿಳಿಸಿದರು.
 ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಅವರು ಮಾತನಾಡಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರತೆಗಳನ್ನು ಶೀಘ್ರವೇ ಸರಿಪಡಿಸಲು ಕ್ರಮವಹಿಸಲಾಗುವುದು ಎಂದರು.
ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣವರ್ ಮಾತನಾಡಿ, ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ಮತ್ತು ಕಾನೂನಿನ ಚೌಕಟ್ಟಿನಲ್ಲಿ ತನಿಖೆ, ವಿಚಾರಣೆ ನಡೆಸಲು ಎಲ್ಲಾ ಠಾಣಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ನುಡಿದರು.
 ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್ ಮಾತನಾಡಿ, ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಇಲಾಖೆಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಗಮನಹರಿಸಲಾಗುವುದು ಎಂದರು. ಆಯೋಗದ ರಿಜಿಸ್ಟ್ರಾರ್ ಮಲ್ಲೇಶ್, ಅಪರ ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ, ಉಪ ವಿಭಾಗಾಧಿಕಾರಿ ಶರತ್ ಹಾಗೂ ಇಲಾಖಾ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement