ಮಳೆ: ಮನೆ ಮೇಲೆ ಬೃಹತ್ ಮರ ಬಿದ್ದು ಅಪಾರ ನಷ್ಟ
ಕ.ಪ್ರ.ವಾರ್ತೆ ಬೇಲೂರು ಸೆ.19
ಭಾರಿ ಮಳೆ ಸುರಿದ ಪರಿಣಾಮ ತಾಲೂಕಿನ ಹೆಬ್ಬಾಳು ಗ್ರಾಮದ ಚಂದ್ರಪ್ಪ ಹಾಗೂ ಸೋಮಣ್ಣ ಎಂಬುವರ ಮನೆ ಮೇಲೆ ಬುಧವಾರ ರಾತ್ರಿ ಭಾರೀ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ. ತಾಲೂಕಿನಲ್ಲಿ ಮಳೆ ವಾರದಿಂದ ಎಡ ಬಿಡದೆ ಸುರಿಯುತ್ತಿದ್ದು, ರಾತ್ರಿ ಮನೆಯಲ್ಲಿ ಮಲಗಿರುವ ಸಂದರ್ಭದಲ್ಲಿ ಮನೆ ಪಕ್ಕ ಇದ್ದ ಬೃಹತ್ ಮರ ನೆಲಕ್ಕೆ ಉರುಳಿದ್ದು, ಕೂದಲು ಎಳೆಯಿಂದ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಂದ್ರಪ್ಪ ಮನೆ ಒಳಗೆ ಇಬ್ಬರು ಮಲಗಿದ್ದರು. ಹಾಗೂ ಸೋಮಣ್ಣಗೆ ಮನೆ ಇಲ್ಲದ ಕಾರಣ ಪಕ್ಕದಲ್ಲಿ ಗುಡಿಸಲು ಹಾಕಿಕೊಂಡು ಆತ ಮಲಗಿರುವ ವೇಳೆ ಈ ಘಟನೆ ಸಂಭವಿಸಿದೆ. ಇಬ್ಬರು ಮನೆಯವರನ್ನು ಗ್ರಾಮಸ್ಥರು ಪ್ರಾಣ ಪಾಯದಿಂದ ಪಾರು ಮಾಡಿದ್ದಾರೆ. ಇದೇ ರೀತಿಯಲ್ಲಿ ಕೆಲವು ಮನೆಗಳ ಮುಂದೆ ತೆಂಗಿನ ಮರಗಳು ಹಾಗೂ ಇನ್ನಿತರ ಜಾತಿ ಮರಗಳು ಇದ್ದು, ಅವುಗಳನ್ನು ತೆರವು ಮಾಡಿಗೊಳಿಸ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಾಲೆಗೆ ಹೋದ ವಿದ್ಯಾರ್ಥಿ ನಾಪತ್ತೆ
ಹಾಸನ: ಶಾಲೆಗೆ ಹೋದ ವಿದ್ಯಾರ್ಥಿಯೊಬ್ಬ 3 ದಿನವಾದರೂ ಮರಳಿ ಮನೆಗೆ ಬಾರದೆ ಇರುವುದು ತಂದೆ-ತಾಯಿಗೆ ಆತಂಕ ತಂದಿದೆ. ಇಲ್ಲಿನ ಶ್ರೀರಾಮ ನಗರ ಬಡಾವಣೆಯ ಕಾಂತರಾಜ್ ರಾಧಮ್ಮ ದಂಪತಿ ಪುತ್ರ ಪವನ್ ನಾಪತ್ತೆಯಾದ ಬಾಲಕ. 5 ದಿನಗಳ ಹಿಂದೆ ಶಾಲೆಗೆ ಹೋದವನು ಮನೆಗೆ ಹಿಂತಿರುಗಿಲ್ಲ. ನಗರದ ಸಾಲಗಾಮೆ ರಸ್ತೆ, ಸಹ್ಯಾದ್ರಿ ಚಿತ್ರ ಮಂದಿರದ ಬಳಿ ಇರುವ ಶಾಸ್ತ ಪಬ್ಲಿಕ್ ಸ್ಕೂಲ್‌ನಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಪೂರ್ವ ಸಿದ್ಧತೆ ಪರೀಕ್ಷೆಯ ಎರಡು ವಿಷಯಗಳಲ್ಲಿ ಕಡಿಮೆ ಅಂಕ ತೆಗೆದ ಕಾರಣ ಶಿಕ್ಷಕರು ಪೋಷಕರನ್ನು ಕರೆದು ಕೊಂಡು ಬರುವಂತೆ ಒತ್ತಾಯ ಮಾಡಿದ್ದರು. ಭಯಗೊಂಡ ಪವನ್ ಶಾಲೆಯಿಂದ ಮನೆಗೆ ಬಾರದೆ ಕಾಣೆಯಾಗಿದ್ದಾನೆ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡರು. ಹಾಗೂ ಮಗ ಕಾಣೆಯಾದ ಬಗ್ಗೆ ಠಾಣೆಗೆ ದೂರು ನೀಡಲು ಹೋದಾಗ ಸರಿಯಾಗಿ ಸ್ಪಂದಿಸದೆ ದೂರು ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ಈತನ ಸುಳಿವು ದೊರೆತಲ್ಲಿ ಕಾಂತರಾಜು, (ದಿಬ್ಬಣ್ಣ) ಮೊ -7259727031 ಸಂಪರ್ಕಿಸಲು ಕೋರಿದೆ.